
ಮಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ದೀರ್ಘಕಾಲದ ಬೇಡಿಕೆಯಾಗಿರುವ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಬೃಹತ್ ಆನ್ಲೈನ್ ಅಭಿಯಾನವೊಂದಕ್ಕೆ ಸಜ್ಜಾಗಲಾಗಿದೆ.
‘ಜೈ ತುಲುನಾಡ್ (ರಿ.)’ ಹಾಗೂ ವಿವಿಧ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ‘ಎಕ್ಸ್’ (X – ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಈ ಮಹತ್ವದ ಅಭಿಯಾನವು ನಡೆಯಲಿದೆ.
ಅಭಿಯಾನದ ವಿವರಗಳು:
- ದಿನಾಂಕ: 15 ಸೆಪ್ಟೆಂಬರ್ 2026
- ಸಮಯ: ಬೆಳಿಗ್ಗೆ 6:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ
- ವೇದಿಕೆ: X (ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್)
ಮುಖ್ಯ ಹ್ಯಾಶ್ಟ್ಯಾಗ್ ಹಾಗೂ ಗುರಿ:
ಈ ಅಭಿಯಾನದಲ್ಲಿ #TuluOfficialinKA_KL ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು ಧ್ವನಿ ಎತ್ತಲಾಗುತ್ತದೆ. ಅಭಿಯಾನದ ಭಾಗವಾಗಿ ಕರ್ನಾಟಕ ಸರ್ಕಾರದ ಎಲ್ಲಾ ಸಚಿವರು ಹಾಗೂ ಪ್ರಮುಖ ಆಡಳಿತ ಇಲಾಖೆಗಳನ್ನು ನೇರವಾಗಿ ಗುರಿಯಾಗಿಸಿ (Tag ಮಾಡಿ) ತುಳು ಭಾಷೆಗೆ ಸಾಂವಿಧಾನಿಕ ಹಾಗೂ ಅಧಿಕೃತ ಸ್ಥಾನಮಾನ ನೀಡುವಂತೆ ಬಲವಾಗಿ ಆಗ್ರಹಿಸಲಾಗುತ್ತದೆ.
ಸಂಘಟಕರ ವಿನಂತಿ:
ತುಳು ಭಾಷೆಯು ಸಮೃದ್ಧ ಸಾಹಿತ್ಯ, ಸಂಸ್ಕೃತಿ ಮತ್ತು ತುಳುನಾಡಿನ ಜೀವನಾಡಿಯಾಗಿದ್ದು, ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸುವ ಎಲ್ಲರೂ, ಹಾಗೆಯೇ ಸಮಸ್ತ ತುಳುವರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತುಳು ಧ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಬಲವಾಗಿ ಮೊಳಗಿಸಬೇಕಾಗಿ ಸಂಘಟನೆಯ ಪ್ರಮುಖರು ಪತ್ರಿಕಾ ಹೇಳಿಕೆಯ ಮೂಲಕ ವಿನಂತಿಸಿದ್ದಾರೆ.























































































