24 C
Udupi
Tuesday, November 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 701

ಭರತೇಶ್ ಶೆಟ್ಟಿ, ಎಕ್ಕಾರು

“ದೊಡ್ಡಪ್ಪಾ! ನಿಮ್ಮ ಮಗನಾದ ನಾನು ಯಾವ ಕಾರಣಕ್ಕೂ ಧರ್ಮ ಮಾರ್ಗದಿಂದ ವಿಮುಖನಾಗಿ ಯೋಚಿಸುವವನಲ್ಲ. ಹಲವು ವಿಚಾರಗಳನ್ನು ನನ್ನ ಧರ್ಮ ಜ್ಞಾನದೊಳಗೆ ಮಂಥನಗೊಳಿಸಿ ನಿಮ್ಮಲ್ಲಿ ವಿಜ್ಞಾಪಣೆ ಮಾಡುತ್ತಿದ್ದೇನೆ. ನಿರಪರಾಧಿಯಾದ ನನ್ನನ್ನು ಈ ವಿಚಾರ ತಿಳಿದ ಬಳಿಕ ಪರಿತ್ಯಜಿಸಿ ಮರಳಿ ಹೋಗಲು ಹೇಳಬಾರದು. ನಾನು ನಿಮ್ಮ ತಪಸ್ಸಿಗೆ ಯಾವ ಕಾಲಕ್ಕೂ ಯಾವ ಕಾರಣಕ್ಕೂ ಬಾಧೆಯಾಗುವವನಲ್ಲ ಎಂಬ ಪೂರ್ಣ ವಿಶ್ವಾಸವಿದೆ. ನನಗೆ ಈ ಪೂರ್ಣ ಭೂ ಮಂಡಲ ಶೂನ್ಯವಾಗಿ ಕಾಣಿಸುತ್ತಿದೆ. ಯಾವ ವಿಧಾನದಲ್ಲೂ ರಾಜಕಾರ್ಯ ನನಗೆ ಉತ್ಸಾಹಪೂರ್ಣವಾಗಿಲ್ಲ. ಇಂತಹ ಸ್ಥಿತಿಯನ್ನಲ್ಲವೆ ವಿರಕ್ತಿ ಎನ್ನುವುದು. ಈಗ ನನ್ನ ಮನಸ್ಸು ಸರ್ವ ಪ್ರಕಾರದಿಂದಲೂ ತಪಸ್ಸಿನತ್ತ ಅನುರಕ್ತವಾಗಿದೆ. ತಪಸ್ಸಿಗಿಂತ ಅಧಿಕ ಶ್ರೇಷ್ಠವಾದುದು ಯಾವುದೂ ಇಲ್ಲ ಎಂದು ಒಪ್ಪಿದವನಾಗಿದ್ದೇನೆ. ನಿಷ್ಕಾಮ ಭಾವ ಪೂರ್ವಕವಾದ ತಪಸ್ಸಿನಿಂದ ಪರಬ್ರಹ್ಮ, ಪರಮಾತ್ಮನ ಪ್ರಾಪ್ತಿ ಸಾಧ್ಯ ಎಂದು ತಿಳಿದುಕೊಂಡಿದ್ದೇನೆ. ಈ ಜಗತ್ತು ನನಗೆ ಶೂನ್ಯವಾಗಿ ಗೋಚರಿಸುತ್ತಿದೆ ಎನ್ನುವಲ್ಲಿ ಕಾರಣವೂ ಇದೆ. ನಮ್ಮ ಆತ್ಮೀಯ ಬಂಧುಗಳಾದ ಪಾಂಚಾಲರು ಸಂಪೂರ್ಣವಾಗಿ ನಾಶ ಹೊಂದಿದ್ದಾರೆ. ಈಗ ಉಳಿದಿರುವುದು ಕೇವಲ ಅವರ ಕುರಿತಾದ ಕಥೆ ಮಾತ್ರ. ಆ ವಂಶವನ್ನು ಉದ್ದರಿಸುವ ಒಂದು ಕುಡಿಯಾಗಲಿ ಮಗನಾಗಲಿ ಉಳಿದಿಲ್ಲ. ಯುದ್ಧದಲ್ಲಿ ಗುರು ದ್ರೋಣರು ಪಾಂಚಾಲ ಪ್ರಮುಖರಾದ ದ್ರುಪದಾದಿಗಳೆಲ್ಲರನ್ನೂ ಭಸ್ಮೀ ಭೂತಗೊಳಿಸಿದ್ದಾರೆ. ಅಳಿದುಳಿದ ಕೆಲವೇ ಕೆಲವು ಪಾಂಚಾಲರನ್ನು ಗುರುಪುತ್ರ ಅಶ್ವತ್ಥಾಮ ಅಂದಿನ ಘೋರರಾತ್ರಿಯಲ್ಲಿ ನಿರ್ನಾಮ ಗೊಳಿಸಿಯಾಗಿದೆ. ಇನ್ನು ಪ್ರಧಾನವಾಗಿ ನಮ್ಮ ಸಂಬಂಧಿಗಳು, ಮೈತ್ರಿ ದೇಶಗಳಾದ ಚೇದಿ ದೇಶವಾಗಲಿ, ಮತ್ಸ್ಯದೇಶವಾಗಲಿ, ಮಾದ್ರಾ ದೇಶವಾಗಲಿ ಇದಕ್ಕೆ ಹೊರತಾಗಿಲ್ಲ. ಎಲ್ಲವೂ ನಾಮಾವಶೇಷವಾಗಿದೆ ಎಂಬಷ್ಟು ನಾಶವಾಗಿ ಹೋಗಿದೆ. ಈಗ ಉಳಿದಿರುವುದು ಕೇವಲ ಯಾದವ ಸಾಮ್ರಾಜ್ಯ ಮಾತ್ರ. ಅದೂ ಶ್ರೀಕೃಷ್ಣನ ಕೃಪಾಶೀರ್ವಾದದಿಂದ. ಎಲ್ಲಿಯ ತನಕ ಕೃಷ್ಣನಿರುತ್ತಾನೊ ಆವರೆಗೆ ಮಾತ್ರ ಆ ವಂಶ ಉಳಿದೀತು ಎಂದು ನಾನು ಊಹಿಸಬಲ್ಲೆ. ಇದನ್ನು ಬಿಟ್ಟು ಉಳಿದ ಸಣ್ಣಪುಟ್ಟ ರಾಜ್ಯಗಳ ಕಥೆ ಬರಿದೆ ವ್ಯಥೆಯಾಗಿ ಹೋಗಿದೆ. ಹೀಗಿರುವಾಗ ಪುನರ್ ನಿರ್ಮಾಣ ಹೊಂದಿ ಅಖಂಡ ಆರ್ಯಾವರ್ತದಲ್ಲಿ ವರ್ಧಿಸುತ್ತಿರುವುದು ನಮ್ಮ ಚಂದ್ರವಂಶ ಮಾತ್ರ. ಅದನ್ನು ಆಳ್ವಿಕೆ ಮಾಡಲು ಸಮರ್ಥರಾದ ನನ್ನ ಸೋದರರಿದ್ದಾರೆ. ಅವರು ಮರಳಿ ಹಸ್ತಿನಾವತಿಗೆ ತೆರಳಲಿ. ನಾನು ನಿಮ್ಮ ಜೊತೆಗಿದ್ದು ನನ್ನ ಮನಸ್ಸು ಏನು ಬಯಸಿದೆಯೊ ಅದನ್ನು ಹೊಂದುವ ಪ್ರಯತ್ನಶೀಲನಾಗುವ ಅವಕಾಶ ಒದಗಿಸಿಕೊಡಬೇಕು” ಎಂದು ಬೇಡಿದನು. ಈ ವಾದ ಕೇಳಿದಾಗ ಧೃತರಾಷ್ಟ್ರ ನಿರುತ್ತರನಾಗಿ ಮುಂದೇನು ಹೇಳುವುದೆಂದು ತೋಚದಾದನು.

ಆಗ ಕುಂತಿದೇವಿ ಮುಂದೆ ಬಂದು ಧರ್ಮರಾಯನಲ್ಲಿ “ಮಗಾ! ನೀನು ಬಹಳಷ್ಟು ವಿಚಾರ ತಿಳಿದವನು. ಹಾಗೆಂದು ಎಲ್ಲವೂ ನಿನಗೆ ತಿಳಿದಿದೆ ಎಂದು ಭಾವಿಸಬೇಡ. ನೀನು ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ. ಇದೊ ನಿನ್ನ ಅಮ್ಮ ಆಜ್ಞೆ ಮಾಡುತ್ತಿದ್ದೇನೆ. ಯಾವ ಚಿಂತೆಯನ್ನೂ ಮಾಡದೆ ಇಲ್ಲಿಂದ ಹಿಂದಿರುಗು. ಮಾತೆಯ ಆದೇಶವನ್ನು ಈ ತನಕ ಮೀರಿದವನು ನೀನಲ್ಲ. ಈಗಲೂ ಹಾಗೆ ಮಾಡಲಾರೆ ಎಂಬ ವಿಶ್ವಾಸ ನನಗಿದೆ” ಎಂದು ನಿಷ್ಠುರವಾಗಿ ಆಜ್ಞೆ ಮಾಡಿದಳು.

ಮಾತೆಯ ಮಾತು ಮೀರಲಾಗದ ಧರ್ಮರಾಯ “ಅಮ್ಮಾ! ನೀನು ನನ್ನನ್ನು ನಿನ್ನ ಮಾತಿನಿಂದ ಬಂಧಿಸಿ ಬಿಟ್ಟೆ. ಇದೋ ನಾನು ನಿನ್ನ ಆಜ್ಞಾನುವರ್ತಿಯಾಗಿ ಹೊರಡುತ್ತೇನೆ. ಆದರೆ ನಾವು ಹೋಗುವ ಮೊದಲು ಒಮ್ಮೆ ನಮ್ಮೆಲ್ಲರನ್ನು ನಿನ್ನ ಮಂಗಳಮಯವಾದ ದೃಷ್ಟಿಯಿಂದ ನೋಡಿ ಕಣ್ತುಂಬಿಕೊಳ್ಳಿ. ಮುಂದೆ ನಮ್ಮ ನಿಮ್ಮ ಸಂದರ್ಶನ ದುರ್ಲಭವೆಂದು ನನಗೆ ಭಾಸವಾಗುತ್ತಿದೆ. ಯಾಕೆಂದರೆ ನಾವು ಹೊರಟ ಬಳಿಕ ತಪೋವನ ವಾಸಿಗಳಾದ ನೀವೆಲ್ಲರೂ ಘೋರ ತಪಸ್ಸಿಗೆ ತೊಡಗುವವರು. ಮುಂದೆ ಕಾಲ ಚಕ್ರದ ಚಲನೆಯಲ್ಲಿ ಏನು ಆಗಿ ಹೋದಿತು ಎಂದು ಯಾರೂ ಹೇಳಲಾಗದು. ಹಾಗಾಗಿ ಈಗಲೆ ನಮ್ಮನ್ನು ಬೇಕಾದಷ್ಟು ನೋಡಿ ಆಶೀರ್ವದಿಸಿ ಕಳುಹಿಸಿ ಕೊಡಮ್ಮಾ” ಎಂದು ಭವಿಷ್ಯವನ್ನು ತರ್ಕಿಸಿ ನುಡಿದು ಕರಜೋಡಿಸಿ ವಂದಿಸಿ ಬೇಡಿಕೊಂಡನು.

ಧರ್ಮರಾಯನು ಈ ರೀತಿ ನುಡಿದಾಗ ಕಿರಿಯವನಾದ ಸಹದೇವನಿಗೆ ಏನಾಯಿತೋ! ಸುಮ್ಮನಿದ್ದ ಸಹದೇವ “ಅಮ್ಮಾ ಇವರೆಲ್ಲರೂ ಹೋಗಲಿ. ನಾನು ಮಾತ್ರ ಯಾವ ಕಾರಣಕ್ಕೂ ಹೋಗಲಾರೆ‌. ನಿಮ್ಮ ಸೇವೆ ಮಾಡುತ್ತಾ ಇಲ್ಲಿಯೆ ಇದ್ದು ಬಿಡುತ್ತೇನೆ. ದಯೆತೋರಿ ನನಗೆ ಅವಕಾಶ ನೀಡಬೇಕು” ಎಂದು ಆರ್ತನಾಗಿ ಬಿನ್ನಹ ಮಾಡುತ್ತಾ ಆಗ್ರಹ ಮಾಡಿದನು. ಅರ್ಜುನ, ಭೀಮ, ನಕುಲರೂ ಹಾಗೆಯೆ ಕೇಳಿಕೊಂಡರು. ಆಗ ಕುಂತಿ “ಮಕ್ಕಳೇ ನೀವ್ಯಾರೂ ಈಗ ನಮ್ಮ ಜೊತೆ ಉಳಿಯಲಾಗದು. ನಿಮ್ಮ ಮಾತೆ ನಿಮಗೆ ಈಗಾಗಲೆ ಅಪ್ಪಣೆ ನೀಡಿದ್ದೇನೆ. ಎಲ್ಲರೂ ಹಸ್ತಿನಾವತಿಗೆ ತೆರಳಬೇಕು. ನೀವೇನಾದರು ಇಲ್ಲಿ ನಿಂತರೆ ನಮ್ಮ ಗುರಿ ಸಾಧನೆ ನಮಗೆ ಸಾಧ್ಯವಾಗದು. ತಪಸ್ಸಿಗೂ ಭಂಗ ಉಂಟಾಗುತ್ತದೆ. ಹಾಗಾಗಿ ಯಾವ ಅಡೆತಡೆಗಳಿಲ್ಲದೆ ಶ್ರೇಷ್ಠ ತಪಸ್ಸು ಆಚರಿಸುವ ನಮ್ಮ ಸಂಕಲ್ಪ ಭಗ್ನವಾಗುತ್ತದೆ. ನಿಮ್ಮ ಪ್ರೀತಿ ಮತ್ತು ಸ್ನೇಹಪಾಶಕ್ಕೆ ತುತ್ತಾಗಿ ನಮ್ಮ ಮನಸ್ಸು ವಿಚಲಿತವಾಗುವುದು ನನಗೆ ಇಷ್ಟವಿಲ್ಲ. ಇನ್ನು ನಮಗೆ ಹೆಚ್ಚು ಕಾಲ ಆಯುಷ್ಯ ಉಳಿದಿಲ್ಲ. ಇರುವ ಸ್ವಲ್ಪವೇ ಸ್ವಲ್ಪ ಕಾಲದ ಅವಧಿಯನ್ನು ವ್ಯರ್ಥವಾಗಿ ಕಳೆಯಬಾರದು ಎಂಬ ಧೃಡ ಸಂಕಲ್ಪ ಮಾಡಿದ್ದೇವೆ. ಹಾಗಾಗಿ ನೀವು ಹೊರಡಲೇ ಬೇಕು” ಎಂದು ಕಟ್ಟಪ್ಪಣೆ ಮಾಡಿದಳು. ಮಾತ್ರವಲ್ಲ ಅನೇಕ ವಿಧಾನದಿಂದ ಮಕ್ಕಳಿಗೆ ಸಮಾಧಾನ ಹೇಳಿ, ಸನ್ಮಂಗಲವಾಗಲಿ ಎಂದು ಆಶೀರ್ವದಿಸಿದಳು. ಅನ್ಯ ಮಾರ್ಗವಿಲ್ಲದೆ ಎಲ್ಲರೂ ಧೃತರಾಷ್ಟ್ರ, ಗಾಂಧಾರಿ ಹಾಗೂ ಕುಂತಿಯ ಪಾದ ಪದ್ಮಗಳನ್ನು ಕಣ್ಣೀರಿನಿಂದ ತೊಳೆಯುವಷ್ಟು ಅತ್ತು ಅನುಮತಿ ಪಡೆದು ಹೊರಟು ನಿಂತರು. ಧೃತರಾಷ್ಟ್ರನು ಭೀಮಾರ್ಜುನರಿಗೂ ಬೇಕು ಬೇಕಾದ ಎಲ್ಲ ಬುದ್ಧಿ ಮಾತುಗಳನ್ನು ಹೇಳಿ ಹರಸಿದನು. ದ್ರೌಪದಿ, ಸುಭದ್ರೆಯರಾದಿ ರಾಣಿಯರು ಗಾಂಧಾರಿ ಕುಂತಿಯರ ಆಶೀರ್ವಾದ ಪಡೆದರು. ಎಲ್ಲರೂ ರಥಗಳನ್ನೇರಿ ಹಸ್ತಿನೆಯತ್ತ ಹಿಂದುರಿಗಿದರು. ಯಾರು ಯಾರಲ್ಲೂ ಮಾತನಾಡುತ್ತಿಲ್ಲ. ಯಾರಿಗೂ ಉತ್ಸಾಹವೂ ಇಲ್ಲ. ಹೃದಯ ಭಾರವಾಗಿದೆ. ಚಕ್ರವರ್ತಿಗೆ ಸಾಮ್ರಾಜ್ಯ ಇದ್ದರೂ ಯಾವ ಆಸಕ್ತಿಯೂ ಇಲ್ಲದೆ ಕಳೆಗುಂದಿದಂತಾಗಿದೆ.

ಹೇಗೋ ಎರಡು ವರ್ಷ ಗಳು ಕಳೆದು ಹೋದವು. ಧರ್ಮರಾಯನ ಆಳ್ವಿಕೆಯಲ್ಲಿ ಮಗು ಪರೀಕ್ಷಿತನ ಮುಖ ನೋಡುತ್ತಾ ಎಲ್ಲರೂ ಜೀವಿಸುತ್ತಿದ್ದಾರೆ. ಧರ್ಮರಾಯನು ಋಷಿಗಳ ಜೊತೆ ಧರ್ಮ ಜಿಜ್ಞಾಸೆ ನಿರತನಾಗಿರುತ್ತಿದ್ದನು. ಹೀಗಿರಲು ಒಂದು ದಿನ ಅನಿರೀಕ್ಷಿತವಾಗಿ ಹಸ್ತಿನೆಗೆ ಮಹರ್ಷಿ ನಾರದರ ಆಗಮನವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page