21.7 C
Udupi
Saturday, November 14, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 690

ಭರತೇಶ್ ಶೆಟ್ಟಿ, ಎಕ್ಕಾರು

ಅದ್ಯಾವ ದಿವ್ಯ ಜ್ಞಾನ ಧರ್ಮರಾಯನಿಗೆ ಪೂರ್ವ ಸ್ಮರಣೆ ನೀಡಿತೊ! ತಾನ್ಯಾರು? ತನ್ನಲ್ಲಿ ಲೀನವಾದ ದಿವ್ಯಾತ್ಮ ಯಾರ ಅಂಶ? ಎಂಬಿತ್ಯಾದಿ ವಿಚಾರಧಾರೆಗಳು ಚಲನಚಿತ್ರದಂತೆ ದೃಶ್ಯ ಮಾಧ್ಯಮವಾಗಿ ಕಣ್ಮುಂದೆ ಹಾದು ಹೋದಂತಾಯಿತು. ಧರ್ಮಮೂರ್ತಿ ಯಮಧರ್ಮನ ಬೀಜಮಂತ್ರದಿಂದ ಅಂಶ ಸಂಭೂತನಾಗಿ ಜನ್ಮ ಪಡೆದ ತಾನು ಯಮನ ಆಂಶಿಕ ಸ್ವರೂಪ. ಹಾಗಾದರೆ ಈ ವಿದುರ ಯಾರು? ಪ್ರಶ್ನೆ ಉತ್ತರವಿಲ್ಲದೆ ಉಳಿಯಲಿಲ್ಲ.

ಬಹಳ ಹಿಂದೆ ಭೂಲೋಕದಲ್ಲಿ ‘ಅಣಿ ಮಾಂಡವ್ಯ’ ರೆಂಬ ಮುನಿಯೊಬ್ಬರು ಇದ್ದರು. ಅವರು ಮೌನಿಯಾದ ಮುನಿಯಾಗುವುದಕ್ಕೂ ಕಾರಣವಿತ್ತು. ಅವರ ಯೋಚನೆ ತೀರಾ ವಿಭಿನ್ನವಾದುದು. ಜಗತ್ತಿನಲ್ಲಿ ಬಹುವಿಧದ ಪಾಪಗಳಿವೆ. ಕೆಲವು ಕೃತ್ಯದಿಂದ ಉತ್ಪನ್ನವಾಗುವವು. ಅಂದರೆ ನಾವು ಮಾಡುವ ಕೆಲಸ ಪ್ರಧಾನ ಕಾರಣವಾಗಿ ಪಾಪದ ಉತ್ಪತ್ತಿಯಾಗುವುದು. ಹಾಗಾದರೆ ಪ್ರಶ್ನೆ ಮೂಡುವುದಿಲ್ಲವೆ? ಅಂತಹ ಕೆಲಸಕ್ಕೆ ಪ್ರೇರಣೆ ಯಾವುದು ಎಂಬುವುದಾಗಿ! ಯಾವುದೆ ಕೆಲಸಕ್ಕೆ ಸ್ಪೂರ್ತಿಯಾಗುವುದು ಯೋಚನೆ. ಯೋಚನೆ ವ್ಯಕ್ತವಾಗುವುದು ಚರ್ಯೆ ಮತ್ತು ಮಾತಿನ ಮೂಲಕ. ಹಾಗಾದರೆ ಪ್ರತಿಯೊಂದು ಪಾಪದ ಮೂಲ ಮಾತು ಮತ್ತು ಪ್ರತಿಕ್ರಿಯೆ ಎಂದಾಯಿತಲ್ಲವೇ? ಇದನ್ನರಿತ ಅಣಿಮಾಂಡವ್ಯರು ಮಾತು ಆಡುವುದನ್ನೂ ಭಾವನೆ ಪ್ರಕಟಿಸುವುದನ್ನೂ ನ್ಯಾಸಗೊಳಿಸಿದ ಸನ್ಯಾಸಿಯಾಗಿ ತಪೋ ನಿರತನಾಗಿದ್ದರು.

ಹೀಗೆ ಸಾಧನಾ ಪಥ ಹಿಡಿದಿರುವಾಗ ಒಂದು ದಿನ ಅವರ ಆಶ್ರಮ ಇರುವ ರಾಜ್ಯದ ಅರಸನ ಅರಮನೆ ದರೋಡೆಗೊಳಗಾಯಿತು. ಅರಮನೆಯನ್ನು ದೋಚಿದ ಕಳ್ಳರೆಂದರೆ ಸಾಮಾನ್ಯರಾಗಿರಲು ಸಾಧ್ಯವೆ? ಅಂತಹ ಮಹಾ ಚಾಣಾಕ್ಷರಾದ ಚೋರರು ಕಳವು ಮಾಡಿದ ಸ್ವತ್ತುಗಳೊಂದಿಗೆ ತಪ್ಪಿಸಿಕೊಂಡು ಬಂದು ಯಾರಿಗೂ ಸಂಶಯ ಬರಬಾರದು ಎಂಬ ಯೋಚನೆಯಿಂದ ಅಣಿ ಮಾಂಡವ್ಯ ಮುನಿಯ ಆಶ್ರಮದಲ್ಲಿ ಅವಿತು ಕುಳಿತರು. ಶೋಧ ಕಾರ್ಯದಲ್ಲಿ ತೊಡಗಿದ ರಾಜ ಭಟರು ಎಲ್ಲಾ ಕಡೆ ಹುಡುಕಾಡ ತೊಡಗಿದರು. ಎಲ್ಲೆಲ್ಲಿ ಹುಡುಕಿದರೂ ಕಳ್ಳರ ಪತ್ತೆಯಿಲ್ಲ. ಶೋಧ ಕಾರ್ಯ ಮುಂದುವರಿಸಿದ ಸೈನಿಕರು ಯಾರೊಬ್ಬರ ಮನೆಯನ್ನೂ ಬಿಡದೆ ಜಾಲಾಡಿದರು. ಕೊನೆಗೆ ಋಷಿ ಆಶ್ರಮಗಳನ್ನು ಶೋಧನೆ ಮಾಡುತ್ತಾ ಈ ಆಶ್ರಮಕ್ಕೂ ಬಂದರು. ಮುನಿಯನ್ನು ಕಂಡು ನಮಿಸಿ ಇತ್ತ ಯಾರಾದರೂ ದರೋಡೆಕೋರರು ಬಂದಿದ್ದಾರೆಯೆ? ಎಂದು ಕೇಳಿದರು. ಮುನಿ ಮೌನಿಯಲ್ಲವೆ? ಮಾತಾಡಲಿಲ್ಲ… ಮತ್ತೆ ಮತ್ತೆ ಕೇಳಿದರೂ ನಿರುತ್ತರವೇ ಉತ್ತರವಾಗಿತ್ತು. ಬಂದ ಕಾರ್ಯ ಪೂರೈಸಲು ಆಶ್ರಮ ಹೊಕ್ಕ ಭಟರು ಕಳ್ಳರನ್ನು ಪತ್ತೆಹಚ್ಚಿ, ರಾಜನ ಅರಮನೆಯ ಅಮೂಲ್ಯ ಆಭರಣಗಳ ಸಮೇತ ಹಿಡಿದು ಬಂಧಿಸುವಾಗ, ಈ ಋಷಿಯೂ ಕಳ್ಳರ ಬಳಗದಲ್ಲಿ ಇರಬೇಕೆಂದು ಭಾವಿಸಿ ಅಣಿ ಮಾಂಡವ್ಯರನ್ನೂ ಹೆಡೆ ಮುರಿ ಕಟ್ಟಿ ಎಳೆತಂದರು. ರಾಜ ವಿಚಾರಣೆ ಮಾಡಿ ಕಳ್ಳತನ ಸಾಬೀತಾದಾಗ ಕಳ್ಳರನ್ನು ಶೂಲಕ್ಕೇರಿಸಿ ಮೃತ್ಯುದಂಡ ಶಿಕ್ಷೆ ವಿಧಿಸಿದನು. ಇದನ್ನೆಲ್ಲಾ ನೋಡುತ್ತಿದ್ದ ಈ ಮೌನಿ ಮುನಿಯನ್ನೂ ವಿಚಾರಿಸಿದನು. ಆಗ ಸತ್ಯ ಹೇಳದಿದ್ದರೆ ಮರಣಶಿಕ್ಷೆಯಾಗುವುದೆಂದು ಗೊತ್ತಿದ್ದರೂ ಆತ ಮೌನವಾಗಿ ಕುಳಿತನು. ಅನ್ಯ ಮಾರ್ಗ ತೋಚದಾದ ರಾಜನಿಗೆ ಮುನಿಯ ಮೌನ ಕೃತ ಅಪರಾಧದ ಒಪ್ಪಿಗೆಯೆಂದು ಪರಿಭಾವಿಸಿ ಅಣಿ ಮಾಂಡವ್ಯ ಮುನಿಯನ್ನೂ ಶೂಲಕ್ಕೇರಿಸುವ ಆಜ್ಞೆ ಮಾಡಿದನು. ತನಗೆ ಮರಣ ಶಾಸನದ ಕಟ್ಟಪ್ಪಣೆ ಆದರೂ, ಅದನ್ನು ಕೇಳಿಯೂ ಮಾತನಾಡಲಿಲ್ಲ, ಅಳಲಿಲ್ಲ. ಏನೂ ಹೇಳಲಿಲ್ಲ. ಕಟುಕರ ಕೈಗೆ ಕಳ್ಳರ ಜೊತೆ ಮುನಿಯೂ ಸಿಲುಕಿ ಸೂರ್ಯೋದಯಕ್ಕಿಂತ ಮುಂಚೆ ಶೂಲಕ್ಕೇರಿಸಲ್ಪಟ್ಟರು. ಪರಿಣಾಮ ಕಳ್ಳರು ಕೊಲ್ಲಲ್ಪಟ್ಟರು. ಇಡೀ ದಿನ ಮುನಿ ಶೂಲದಿಂದ ಚುಚ್ಚಿ ಸೀಳಲ್ಪಟ್ಟು ನೇತಾಡುತ್ತಿದ್ದರೂ ಮರುದಿನದವರೆಗೂ ಜೀವಂತವಾಗಿ ಉಳಿದಿದ್ದರು. ಈ ವಿಷಯ ತಿಳಿದ ರಾಜನಿಗೆ ಮುನಿ ಮಹಿಮಾನ್ವಿತರಿದ್ದಾರೆ ಎಂದು ತಿಳಿಯಿತು. ಅಪಚಾರವಾಯಿತೆಂದು ಹೆದರಿ, ಓಡೋಡಿ ಬಂದು ಮುನಿಯನ್ನು ಶೂಲದಿಂದ ಇಳಿಸಿ, ತನ್ನ ಅಪರಾಧ ಮನ್ನಿಸಬೇಕೆಂದು ಪರಿಪರಿಯಾಗಿ ಬೇಡಿದನು. ಆಗಲೂ ಮೌನಿ ಮುನಿ ತುಟಿ ಪಿಟಿಕ್ಕೆನ್ನಲಿಲ್ಲ. ಬದಲಿಗೆ ಆ ಶೂಲವನ್ನು ಮುರಿದು ಕೈಯಲ್ಲಿ ಹಿಡಿದುಕೊಂಡು ಎತ್ತಲೋ ಹೊರಟು ಹೋದರು. ರಾಜನಿಗಾಗಲೀ, ರಾಜ್ಯಕ್ಕಾಗಲಿ ಯಾವುದೇ ಹಾನಿ ಆಗದಿರುವುದನ್ನು ನೋಡಿ ಮುನಿ ಕ್ಷಮಿಸಿರಬೇಕೆಂದು ಎಲ್ಲರೂ ಭಾವಿಸಿದರು.

ಕಾಲಾಂತರದಲ್ಲಿ ಅಣಿಮಾಂಡವ್ಯರ ಆಯಸ್ಸು ತೀರಿದಾಗ ಇಹಲೋಕದ ಯಾತ್ರೆ ಮುಗಿಸಿದರು. ಅಂದರೆ ಮರಣ ಹೊಂದಿದರು. ಅವರನ್ನು ಯಮದೂತರು ಶೈಮಿನಿಗೆ ಒಯ್ದು ಯಮನೆದುರು ನಿಲ್ಲಿಸಿದರು. ಯಮರಾಜ ಮುನಿಗೆ ನರಕವಾಸ ವಿಧಿಸಿದನು. ಈ ತನಕ ಮಾತು ಆಡದ ಮೌನಿ ಮುನಿ ತನ್ನ ವ್ರತ ಮುರಿದು “ತನಗಾದ ಶಿಕ್ಷೆಗೆ ಕಾರಣ ಹೇಳಿ ನನ್ನ ಮನದ ಸಂಶಯ ಪರಿಹರಿಸು. ಯಾಕೆಂದರೆ ನಾನು ಯಾರಿಗೂ ಅನ್ಯಾಯ ಮಾಡಲಿಲ್ಲ. ಕನಿಷ್ಟ ಮಾತನ್ನಾದರೂ ಆಡಿದ್ದರೆ ಅಪಚಾರವಾಗಿ ಪಾಪ ಬರುವುದೆಂದು ಅರಿತು ಮೌನಿಯಾಗಿ ಇದ್ದು ತಪೋ ಮುಖನಾಗಿದ್ದೆನು. ನನ್ನಿಂದ ಏನು ಅಧರ್ಮವಾಗಿದೆ? ಹೇಳು.” ಎಂದು ಕೇಳಿದರು. ಆಗ ಯಮರಾಜ “ಅಯ್ಯಾ ಮಹಾತ್ಮ! ಯಾರಿಗೇ ಆಗಲಿ ಅವರಿಂದಾದ ಅಪರಾಧದ ಅರಿವು ಇರುವುದಿಲ್ಲ. ಇತರರ ತಪ್ಪು ಸ್ಪಷ್ಟ ಗೋಚರವಾಗುವುದು ಸ್ವಾಭಾವಿಕ. ನೀನು ಚಿಕ್ಕವನಿದ್ದಾಗ ನೊಣಗಳನ್ನು, ಇರುವೆಗಳನ್ನು ಹಿಡಿದು ಚಚ್ಚಿ ಕೊಲ್ಲುತ್ತಿದ್ದೆ. ಧಾರಾಳವಾಗಿ ಪ್ರಾಣಿ ಹಿಂಸೆ ಮಾಡಿದ್ದೆ. ಆದ ಕಾರಣ ಕೇವಲ ಸ್ವಲ್ಪ ಕಾಲ ನರಕ ವಾಸ ನಿನ್ನ ಪಾಲಿಗಿದೆ. ಬಳಿಕ ಪುಣ್ಯ ಫಲ ಸ್ವರೂಪವಾಗಿ ದಿವ್ಯ ಲೋಕ ಪ್ರಾಪ್ತವಾಗಲಿದೆ.” ಎಂದನು.

ಆಗ ತರ್ಕಿಸಿದ ಮುನಿ, ” ಯಮಧರ್ಮರಾಜಾ, ನಿನ್ನ ವಿಚಾರ ಸಾಕಾಗಲಿಲ್ಲ. ನಾನೂ ಧರ್ಮಶಾಸ್ತ್ರ ತಿಳಿದಿರುವೆ. ಮಕ್ಕಳು ಅರಿಯದೆ ಮಾಡುವ ಪಾಪಕೃತ್ಯಕ್ಕೆ ಹೆತ್ತವರು ಹೊಣೆಯಾಗುತ್ತಾರೆ. ಯಾಕೆಂದರೆ ಹಾಗೆ ಮಾಡಗೊಡದೆ ತಿಳಿ ಹೇಳುವ ಜವಾಬ್ದಾರಿ ಹಿರಿಯರು, ಪೋಷಕರು ಆಗಿರುವ ಹಿರಿಯರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಮಕ್ಕಳು ಬಾಲ್ಯದಲ್ಲಿ ಅರಿಯದೆ ಪಾಪ ಕೃತ್ಯ ಮಾಡಿದ್ದು ಹೌದಾದರೂ, ಅದರ ಪಾಪ ಹಾಗು ಶಿಕ್ಷೆ ಹೆತ್ತವರ ಪಾಲಿಗೆ ಸಲ್ಲುತ್ತದೆ. ಹಾಗೆಂದು ನನ್ನ ವಾದವಲ್ಲ, ಧರ್ಮ ಶಾಸ್ತ್ರ ಹಾಗೆ ನಿರೂಪಿಸಲ್ಪಟ್ಟಿದೆ. ಹಾಗೆಂದು ನಾನು ನರಕವಾಸಕ್ಕೆ ಹೆದರುವವನಲ್ಲ. ನಾನು ಹೆದರುವುದಿದ್ದರೆ ಕೇವಲ ಧರ್ಮಕ್ಕೆ ತನ್ನಿಂದಾಗಬಹುದಾದ ಅಪಚಾರಕ್ಕೆ ಮಾತ್ರ. ಹಾಗೆಂದು ನಿರಪರಾಧಿಗೆ ಶಿಕ್ಷೆ ವಿಧಿಸುವುದು ಮಹಾಪರಾಧ. ಮಾತ್ರವಲ್ಲ, ಧರ್ಮಾಧಿಕಾರವನ್ನು ದುರುಪಯೋಗ ಪಡಿಸಿದಂತಾಗುತ್ತದೆ. ನಿರಪರಾಧಿಯಾದ ನನಗೆ ಶಿಕ್ಷೆ ವಿಧಿಸಿ ಧರ್ಮಾಧಿಕಾರವನ್ನು ಅತಿಕ್ರಮಿಸಿದ ನೀನು ಶಿಕ್ಷಾರ್ಹನಾಗಿರುವೆ. ತತ್ಪರಿಣಾಮವನ್ನು ನೀನು ಅನುಭವಿಸ ಬೇಕು. ಅದಕ್ಕಾಗಿ ನಿನ್ನನ್ನು ನಾನು ಶಪಿಸುತ್ತೇನೆ‌. ನಾನು ಧರ್ಮಿಷ್ಟನು ಹೌದಾದರೆ ನನ್ನ ಶಾಪ ಫಲಿಸಲಿ ಎಂದು ನುಡಿದು ಶಾಪ ವಾಕ್ಯ ಉಚ್ಚರಿಸಿ ಬಿಟ್ಟರು. ಏನೆಂದರೆ ಕರ್ಮ ಭೂಮಿಯಲ್ಲಿ ಶೂದ್ರನಾಗಿ ಹುಟ್ಟಿ ಪಾಡು ಪಡಬೇಕು”

ಧರ್ಮೋಚಿತ ವಾಕ್ಯವನ್ನಾಡಿದ ಮುನಿಯ ನ್ಯಾಯವನ್ನು ಮೆಚ್ಚಿದ ಯಮರಾಜ. ಸಂತುಷ್ಟನಾಗಿ ಮುನಿಯನ್ನು ಉದ್ದೇಶಿಸಿ ಹೇಳಿದನು ” ಮುನಿವರ್ಯ ನಿಮ್ಮ ವಾದ ಧರ್ಮಯುತವಾಗಿ ಇದೆ. ಧರ್ಮ ಪ್ರಕಾರ ಆಚಾರ ತಪ್ಪಿದ ಯಾರೇ ಆಗಿರಲಿ ಶೂದ್ರನಾಗುತ್ತಾನೆ. ಹಾಗಾಗಿ ನಿಮ್ಮ ಶಾಪ ವಾಕ್ಯ ನನಗೆ ಸರ್ವತಾ ಸ್ವೀಕಾರ” ಎಂದನು.

ಯಮರಾಜನ ಮಾತು ಕೇಳಿ ಸಂಪ್ರೀತನಾದ ಅಣಿಮಾಂಡವ್ಯರು “ನೀನು ಶೂದ್ರನಾಗಿ ಹುಟ್ಟಿದರೂ, ದೈವ ಭಕ್ತಿ ಮತ್ತು ಧರ್ಮ ಬುದ್ಧಿ ನಿರಂತರ ನಿನ್ನದ್ದಾಗಿರಲಿ. ಮಕ್ಕಳ ಅಪರಾಧವನ್ನು, ಹಿರಿಯರ ಅನಾಧಾರವನ್ನು ಒಂದಷ್ಟು ನೋಡಿ, ಸೈರಿಸಿ ಬದುಕಿ ಮುಂದೆ ಕಾಲ ಕೂಡಿ ಬಂದಾಗ ನಿನ್ನ ಶಕ್ತಿಯಲ್ಲಿ ಐಕ್ಯಗೊಂಡು ಶಾಪ ವಿಮುಖನಾಗು” ಎಂದು ಅನುಗ್ರಹಿಸಿದರು. ಧರ್ಮ ವಿವೇಚನೆಯಲ್ಲಿ ಇಷ್ಟು ಕಾಲ ಕಳೆಯುತ್ತಿರುವಾಗ, ಮುನಿಗಿದ್ದ ಯಮಪುರಿಯ ನರಕ ವಾಸದ ಅವಧಿ ಮುಗಿಯಿತು. ಅವರ ಸಂಚಿತ ಪುಣ್ಯ ಫಲದಿಂದ ದಿವ್ಯ ದೇಹ ಪ್ರಾಪ್ತವಾಗಿ ಬ್ರಹ್ಮ ಲೋಕ ಸೇರಿದರು.

ಜ್ಯೋತಿ ಸ್ವರೂಪನಾದ ಯಮ ಎಂಬ ಜ್ಯೋತಿಯಿಂದ ಬೆಳಗಿಸಲ್ಪಟ್ಟ ಮತ್ತೆರಡು ದೀಪಗಳು ಧರ್ಮರಾಯ ಮತ್ತು ವಿದುರ. ಅಣಿಮಾಂಡವ್ಯರ ಶಾಪ ಅನುಭವಿಸಿದ ಯಮನ ಅಂಶ ಸಂಭೂತ ವಿದುರ ಎಂಬ ದೀಪ ಈಗ ಧರ್ಮರಾಯನೆಂಬ ಮತ್ತೊಂದು ದೀಪದ ಜ್ಯೋತಿಯೊಂದಿಗೆ ಲೀನವಾಗಿದೆ. ಕಾಲಗರ್ಭದೊಳಗೆ ಅಡಗಿದ್ದ ದಿವ್ಯ ಸತ್ಯ ಅನಾವರಣಗೊಂಡು ಅರ್ಥ ಮಾಡಿಕೊಂಡ ಧರ್ಮರಾಯನಿಗೀಗ ಎಲ್ಲವೂ ವೇದ್ಯವಾಗಿದೆ. ಮುಂದಿನ ಪ್ರಶ್ನೆ ಇನ್ನು ಮುಂದೇನು? ವಿದುರನ ರೂಪದಲ್ಲಿ ತಾನು ಧರಿಸಿರುವ ಅಂಗಿಯಂತಹ ಕಳೆಬರದ ವಿಲೆವಾರಿ ಹೇಗೆ ಎಂಬ ಜಿಜ್ಞಾಸೆ ತಲೆದೋರಿದೆ.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page