ಭಾಗ – 684
ಭರತೇಶ ಶೆಟ್ಟಿ,ಎಕ್ಕಾರು

ಧೃತರಾಷ್ಟ್ರ ತನ್ನ ಬಳಗ ಸಹಿತನಾಗಿ ರಾಜರ್ಷಿ ಶತಯೂಪನ ಜೊತೆ ವ್ಯಾಸ ಭಗವಾನರ ಆಶ್ರಮಕ್ಕೆ ಹೋಗಿ ಶೃದ್ಧೆಯಿಂದ ಸತ್ಕರಿಸಿದರು. ಬಳಿಕ ವ್ಯಾಸರು ಇವರೈವರಿಗೂ ತಪಸ್ಸನ್ನಾಚರಿಸಲು ದೀಕ್ಷೆಯನ್ನಿತ್ತು ಆಶೀರ್ವದಿಸಿ ಕಳುಹಿಸಿದರು. ನಂತರ ಧೃತರಾಷ್ಟ್ರಾದಿಗಳು ರಾಜರ್ಷಿ ಶತಯೂಪನ ಜೊತೆಯಲ್ಲಿ ಆತನ ಆಶ್ರಮಕ್ಕೆ ಮರಳಿ ಬಂದರು. ವ್ಯಾಸರ ಆಜ್ಞೆಯಂತೆ ಮಹಾಮತಿಯಾದ ಶತಯೂಪನು ಅರಣ್ಯವಾಸದ ನಿಯಮಗಳನ್ನು, ತಪಸ್ಸಿನ ಕ್ರಮಗಳೆಲ್ಲವನ್ನು ಉಪದೇಶಿಸಿದನು. ನಂತರ ತನ್ನ ಅನುಯಾಯಿಗಳಾಗಿ ಬಂದ ಇವರೆಲ್ಲರನ್ನು ತಪಸ್ಸಿನಲ್ಲಿ ತೊಡಗಿಸಿದನು. ನಾರು ಮಡಿ ಕೃಷ್ಣಾಜಿನವನ್ನು ಧರಿಸಿದ್ದ ಗಾಂಧಾರಿ, ಕುಂತಿ ಸಮಾನ ವ್ರತಾನುಷ್ಠಾನವುಳ್ಳವರಾಗಿ ತಪೋನಿರತರಾದರು. .
ದಿನಗಳು ಹಲವು ಕಳೆದು ಹೋದವು. ತಪೋನಿರತ ಧೃತರಾಷ್ಟ್ರನ ಶರೀರದ ಮಾಂಸ ಕರಗಿ ಮೂಳೆ ಚರ್ಮಗಳಷ್ಟೆ ಉಳಿದಿತ್ತು. ಜಟೆ ಬೆಳೆದಿತ್ತು. ವ್ಯಾಮೋಹಗಳು ಸಂಪೂರ್ಣ ನಾಶವಾಗಿದ್ದ ಕುರುರಾಜ ಮಹರ್ಷಿಗಳಂತೆ ತೀವ್ರ ತಪಸ್ಸನಾಚರಿಸತೊಡಗಿದ್ದನು. ಈ ಸಮಯದಲ್ಲಿ ವಿದುರ ಮತ್ತು ಸಂಜಯ ತಪೋನಿರತರಾದ ಕುಂತಿ, ಗಾಂಧಾರಿ ಮತ್ತು ಧೃತರಾಷ್ಟ್ರರ ಸೇವೆ ಮಾಡುತ್ತಾ ಉಪಚರಿಸುತ್ತಿದ್ದರು.
ಹೀಗೆ ಕೆಲಕಾಲ ಕಳೆದಾಗ ಕುರುಶ್ರೇಷ್ಠ ಧೃತರಾಷ್ಟ್ರಾದಿಗಳನ್ನು ನೋಡಲು ನಾರದ ಮಹರ್ಷಿ ಮಹಾತಪಸ್ವಿಯಾದ ದೇವಲ ಮಹರ್ಷಿ, ಶಿಷ್ಯ ಸಹಿತ ವ್ಯಾಸ ಮಹರ್ಷಿ, ಅನೇಕ ಸಿದ್ಧರೂ ಜೊತೆಗೆ ರಾಜರ್ಷಿಯಾದ ಶತಯೂಪನೂ ಬಂದರು. ಆ ಸಮಯ ತಪಸ್ಸಿನಿಂದ ಬಹಿರ್ಮುಖರಾದ ಕುಂತಿ ಗಾಂಧಾರಿ ಮತ್ತು ಧೃತರಾಷ್ಟ್ರ ಬಂದ ಋಷಿವರೇಣ್ಯರಿಗೆ, ಮಹಾತ್ಮರಿಗೆ ವಂದಿಸಿದರು. ಇವರು ಮೂವರ ಕಠಿಣ ತಪಸ್ಸಿನ ಕ್ರಮದಿಂದ ಸಂತುಷ್ಠರಾಗಿ ಮತ್ತಷ್ಟು ಉಪದೇಶಗಳನ್ನಿತ್ತು ಮಾರ್ಗದರ್ಶನವೀಯಲು ಬಂದಿದ್ದರು.
ಹಾಗೆ ಬಂದಿದ್ದ ಮಹರ್ಷಿ ವ್ಯಾಸರು, ಪರ್ವತ, ದೇವಲರು, ಧೃತರಾಷ್ಟ್ರನಿಗೆ ಧರ್ಮಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಹೇಳಿದರು. ನಂತರ ನಾರದರು ಧರ್ಮ – ಕರ್ಮ ಸಂಬಂಧಿತ ಕಥೆಗಳನ್ನು ಹೇಳಿದರು. ಕೊನೆಗೆ ಕ್ಷತ್ರಿಯ ರಾಜರಾಗಿ ಆಳ್ವಿಕೆ ನಡೆಸಿ ವಾನಪ್ರಸ್ಥ ಸ್ವೀಕರಿಸಿ, ಪುಣ್ಯಲೋಕ ಸಾಧಿಸಿದ ಮಹಾತ್ಮರ ಕಥೆಗಳನ್ನೂ ಹೇಳಿ ಧೃತರಾಷ್ಟ್ರಾದಿಗಳಿಗೆ ಪ್ರೇರಣೆ ನೀಡಿದರು. ಬಳಿಕ ಧೃತರಾಷ್ಟ್ರನಲ್ಲಿ “ಹೇ ರಾಜನೇ! ನೀನೂ ಕೂಡ ತಪಸ್ಸು ಪೂರ್ಣವಾದ ನಂತರ ತೇಜಸ್ಸಿನಿಂದ ಯುಕ್ತನಾಗಿ ಗಾಂಧಾರಿಯೊಡನೆ ಹಿಂದಿನ ಮಹಾತ್ಮರು ಸೇರಿರುವ ಸದ್ಗತಿಯನ್ನು ಹೊಂದುವೆ. ಇಂದ್ರನ ಸಮೀಪ ಇರುವ ನಿನ್ನ ತಮ್ಮನಾದ ಪಾಂಡು ಸದಾ ನಿನ್ನನ್ನು ಸ್ಮರಿಸುವುದನ್ನು ನಾನು ಕಂಡವನಿದ್ದೇನೆ. ನಿಮ್ಮ ಜೊತೆಯಲ್ಲಿ ಪಾಂಡವರ ತಾಯಿಯಾದ ಕುಂತೀದೇವಿಯೂ ಆಕೆಯ ಪತಿ ಇರುವ ಲೋಕ ಸೇರುತ್ತಾಳೆ” ಎಂದು ನಾರದರು ಭವಿಷ್ಯ ನುಡಿದರು. ಬಳಿಕ ವಿದುರ ಮತ್ತು ಸಂಜಯನತ್ತ ತಿರುಗಿ “ಹೇ ವಿದುರಾ ಭವಿತವ್ಯದಲ್ಲಿ ಮಹಾತ್ಮನಾದ ನೀನು ಧರ್ಮಮೂರ್ತಿಯಲ್ಲಿ (ಧರ್ಮರಾಯ) ಐಕ್ಯನಾಗುವೆ ಎಂಬುವುದನ್ನು ದಿವ್ಯದೃಷ್ಟಿಯಲ್ಲಿ ನೋಡುತ್ತಿದ್ದೇನೆ. ಸಂಜಯನು ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡಿ ಸ್ವರ್ಗಲೋಕ ಸೇರುತ್ತಾನೆ” ಎಂದು ಅವರೆಲ್ಲರ ಕುರಿತಾಗಿಯೂ ಹೇಳಿದರು. ಕಾಲಗರ್ಭದೊಳಗೆ ಅಡಗಿರುವ ಸತ್ಯವನ್ನು ತಿಳಿಸಿ ಮತ್ತಷ್ಟು ಕಠಿಣ ತಪಸ್ಸು ಮಾಡುವಂತಾಗುವ ಪ್ರೇರಣೆ ನೀಡಿದ್ದರಿಂದ ಸಂತುಷ್ಟರಾದ ಧೃತರಾಷ್ಟ್ರಾದಿಗಳು ಋಷಿವರೇಣ್ಯರೆಲ್ಲರಿಗೂ ವಂದಿಸಿ ಸತ್ಕರಿಸಿದರು.
ಇದೆಲ್ಲಾ ಆದ ಬಳಿಕ ರಾಜರ್ಷಿ ಶತಯೂಪನು ನಾರದರಿಗೆ ವಂದಿಸಿ “ಪೂಜ್ಯರೆ, ಅಮಿತವಾದ ಧರ್ಮಜ್ಞಾನವನ್ನು ತಮ್ಮ ಪ್ರವಚನದಲ್ಲಿ ತಿಳಿಸಿ ನಮ್ಮೆಲ್ಲರನ್ನೂ ಪುನೀತರನ್ನಾಗಿಸಿದ್ದೀರಿ. ಮಾತ್ರವಲ್ಲ ತಪಸ್ಸಿನ ಶ್ರದ್ಧೆಯನ್ನು ಹೆಚ್ಚಿಸಿರುವಿರಿ. ದೇವ ಋಷಿಗಳೇ, ಧೃತರಾಷ್ಟ್ರನ ಕುರಿತಾಗಿ ನಿಮ್ಮಲ್ಲಿ ಒಂದು ವಿಷಯವನ್ನು ಕೇಳುವುದಿದೆ. ತಾವು ಅನುಮತಿ ನೀಡಿದರೆ ಕೇಳುವೆನು” ಎಂದನು.
ಮುಂದುವರಿಯುವುದು…





































