ಭಾಗ – 669
ಭರತೇಶ್ ಶೆಟ್ಟಿ, ಎಕ್ಕಾರು

ಧರ್ಮರಾಯನ ವ್ಯಕ್ತಿತ್ವ ಒಂದು ತರಹ ವಿಶೇಷ. ತನಗೆಷ್ಟು ನೋವಾದರೂ ಅದು ಸಹನೀಯ. ಆದರೆ ಆತನಿಂದ ಅಧರ್ಮವಾಗಬಾರದು, ಪರರಿಗೆ ಅನ್ಯಾಯವಾಗಬಾರದು, ತಾನು ಮಾಡಿದ ಕರ್ಮದಲ್ಲಿ ಲೋಪದೋಷಗಳು ಉಳಿಯಬಾರದು. ಆತನ ಜೀವನ ಈ ಅಭಿಪ್ರಾಯಕ್ಕೆ ಪ್ರತ್ಯಕ್ಷ ಸಾಕ್ಷಿ. ವಾರಣಾವತದಲ್ಲಿ ಅರಗಿನ ಅರಮನೆಯ ಪ್ರಕರಣದ ಬಳಿಕ ನಿಸ್ವಾರ್ಥಿಯಾಗಿ ತಮ್ಮಂದಿರೊಂದಿಗೆ ಕಾಡಾಡಿಯಾಗಿದ್ದುಕೊಂಡು ರಾಜ್ಯದ ಆಸೆ ತೊರೆದು ಭಿಕ್ಷಾ ವೃತ್ತಿಯಿಂದ ಜೀವನ ಸಾಗಿಸುವುದು ಲೇಸು ಎಂದು ಕೈಗೊಂಡ ತೀರ್ಮಾನ. ಅದಾದ ಬಳಿಕ ದ್ರೌಪದಿ ಸ್ವಯಂವರ ನಡೆದು ಇಂದ್ರಪ್ರಸ್ಥದ ವಿಭಜನೆಯ ಬಳಿಕ ರಾಜಸೂಯ ಯಾಗ ಪೂರೈಸಿ ಅವಭೃತ ಸ್ನಾನಕ್ಕೆ ತಲೆಯೊಡ್ಡಿದ ಚಕ್ರವರ್ತಿಯಾಗಿದ್ದನು. ಆದರೂ ಬಾಂಧವ್ಯಕ್ಕೆ ಬೆಲೆಕೊಟ್ಟು, ಧರ್ಮ ಪಾಲಕನಾಗಿ ದ್ಯೂತ ಆಹ್ವಾನವನ್ನು ಸ್ವೀಕರಿಸಿ ಆಡಿ ಸೋತು ಬಳಿಕ ವನವಾಸ ಅಜ್ಞಾತವಾಸವನ್ನು ಒಪ್ಪಿದ ಮಹಾನ್ ಗುಣ. ನಿಷ್ಠೆಯಿಂದ ಪ್ರಾಮಾಣಿಕನಾಗಿ ಪೂರೈಸಿ ಬಂದು ಅಧಿಕಾರಯುತವಾಗಿ ತನ್ನ ಸಾಮ್ರಾಜ್ಯವನ್ನು ಕೇಳಿ ಅಥವಾ ಸಾಮರ್ಥ್ಯದಿಂದ ಪಡೆಯಬಹುದಿತ್ತು. ಯುದ್ಧ ಬೇಡ, ರಕ್ತಪಾತ ಬೇಡ, ವಂಶದೊಳಗೆ ವೈಮನಸ್ಸು ಬೇಡ ನಮಗೆ ಕೇವಲ ಐದು ಗ್ರಾಮ ಸಾಕು ಎಂದು ಬೇಡುವಲ್ಲಿ ಆತನ ಔದಾರ್ಯ. ತದನಂತರದ ಮಹಾಭಾರತ ಯುದ್ದ ನಡೆಯಿತಾದರೂ, ಪಾಂಡವ ಪಕ್ಷ ಜಯ ಪಡೆದರೂ ಸಂತಸ ಪಡದೆ ಬಂಧು ಹತ್ಯೆಯಾಯಿತಲ್ಲಾ ಎಂದು ಕೊರಗಿದ ಆತನ ಬುದ್ದಿ. ಈಗ ಮುಂಗುಸಿಯ ಮಾತು ಕೇಳಿ ಎಲ್ಲಿ ಅಶ್ವಮೇಧ ಯಾಗ ಸರಿಯಾಗಿ ನೆರವೆರಲಿಲ್ಲವೋ ಎಂಬ ಭಯ. ಇದೆಲ್ಲವೂ ಧರ್ಮರಾಯನ ಧರ್ಮಬುದ್ಧಿಗೆ ಹಿಡಿದ ಕೈಗನ್ನಡಿ. ಯಾವಾಗ ಶ್ರೀಕೃಷ್ಣ ಸ್ವಯಂ ತಾನೇ ಮುಂದೆ ಬಂದು ಯಾಗ ಸರಿಯಾಗಿ ಆಗಿದೆ ಎಂಬ ಸ್ಪಷ್ಟನೆ ನೀಡಿದಲ್ಲಿಗೆ ಮನಸ್ಸು ನಿರಾಳವಾಗಿತ್ತು. ಭಗವಂತನು ಹೇಳಿದ ಮೇಲೆ ಯಾವ ಅನುಮಾನವೂ ಉಳಿಯದೆ ಕೃತಾರ್ಥ ಭಾವ ಧರ್ಮರಾಯನ ಮನದಲ್ಲಿ ಮೂಡಿತು.
ಅಶ್ವಮೇಧ ಯಾಗವು ದೈವಾನುಗ್ರಹದಿಂದ ಯಶಸ್ವಿಯಾಗಿ ಪೂರೈಸಲ್ಪಟ್ಟಿದೆ ಎಂಬ ವಿಶ್ವಾಸ ಎಲ್ಲರಿಗೂ ಸಮಾಧಾನ ನೀಡಿದೆ. ಧರ್ಮರಾಜನೂ ಹಿರಿಯರಿಗೆ ಋಷಿ ವರೇಣ್ಯರಿಗೆಲ್ಲ ನಮಸ್ಕರಿಸಿದನು. ಶ್ರೀಕೃಷ್ಣ ಪರಮಾತ್ಮನೂ ಸಂತೋಷದಿಂದ ಆಲಿಂಗಿಸಿದನು. ಕಿರಿಯರು ಧರ್ಮರಾಯನ ಆಶೀರ್ವಾದ ಪಡೆದರು. ಹೀಗೆ ಪರಸ್ಪರ ಆಶೀರ್ವಾದ ಪಡೆದಾದ ಬಳಿಕ ಎಲ್ಲರೂ ಜೊತೆಯಾಗಿ ಶ್ರೀಕೃಷ್ಣ ಪರಮಾತ್ಮನಿಗೆ ವಂದಿಸಿದರು.
ಪೂಜ್ಯರಾದ ಬಕದಾಲ್ಭ್ಯರು ಎಲ್ಲರನ್ನೂ ಹರಸಿದ ಬಳಿಕ ಶ್ರೀಕೃಷ್ಣನಿಗೆ ವಂದಿಸಿ, ತನ್ನ ಮುಂದಿನ ನಡೆಯ ಬಗ್ಗೆ ಏಕಾಂತದಲ್ಲಿ ಮಾತನಾಡಿದರು. ನಂತರ ಹೇ ಭಗವಂತಾ! ನಾನು ಇನ್ನೂ ಎಷ್ಟು ಸಮಯ ಕಾಯಬೇಕು? ಇನ್ನಾದರು ನನಗೆ ಅಪ್ಪಣೆಯನ್ನು ಕೊಡು” ಎಂದು ಪ್ರಾರ್ಥಿಸಿದರು. ಶ್ರೀಕೃಷ್ಣ ನಗುವಿನ ಮೂಲಕ ಉತ್ತರಿಸಿದನು. ಬಕದಾಲ್ಭ್ಯರೂ ಪ್ರತಿಯಾಗಿ ನಗು ಬೀರುತ್ತಾ ಕೈ ಮುಗಿದು ಸಂತೋಷದಿಂದ ಹೊರಟು ಹೋದರು. ವ್ಯಾಸ ಭಗವಾನರು, ಮಹರ್ಷಿ ನಾರದರಾದಿ ಋಷಿ ಮುನಿಗಳು ಧರ್ಮರಾಯ, ಪಾಂಡವರೆಲ್ಲರಿಗೂ ಆಶೀರ್ವದಿಸಿ ಶ್ರೀಕೃಷ್ಣನಿಗೆ ವಂದಿಸಿ ಹೊರಟು ಹೋದರು. ಬಂದು ಸೇರಿದ್ದ ಮೈತ್ರಿ ರಾಜರುಗಳನ್ನೆಲ್ಲ ಧರ್ಮರಾಯ ಆದರಾತಿಥ್ಯಗಳಿಂದ ಸತ್ಕರಿಸಿ, ಸಹಕಾರದ ಸ್ಮರಣೆಗಾಗಿ ಅಮೂಲ್ಯ ಕಾಣಿಕೆಗಳನ್ನಿತ್ತು ಗೌರವದಿಂದ ಬೀಳ್ಕೊಟ್ಟನು.
ಹೀಗೆ ಇದೆಲ್ಲಾ ಸಂಪನ್ನಗೊಂಡು ಎಲ್ಲರೂ ಹೊರಟು ಹೋದ ಬಳಿಕ ಪ್ರಮೀಳೆ ಅರ್ಜುನನಿಗೆ ಎದುರಾಗಿ ಬಂದಳು. ಅಶ್ವಮೇಧ ಯಾಗದ ದಿಗ್ವಿಜಯ ಸಮಯ ಸ್ತ್ರೀರಾಜ್ಯದ ರಾಣಿ ಪ್ರಮೀಳೆ ಕುದುರೆಯನ್ನು ಕಟ್ಟಿದ್ದಳು. ಯುದ್ದ ಮುಂದುವರಿದು ಪ್ರಮೀಳಾರ್ಜುನ ಕಾಳಗಕ್ಕೆ ಮುಹೂರ್ತ ಕಾಲ ಕೂಡಿ ಬಂದಾಗ ಇಬ್ಬರೂ ದಿವ್ಯ ಧನುಸ್ಸುಗಳಿಗೆ ಶರ ಸಂಧಾನ ಮಾಡಿ ಕಿವಿಯವರೆಗೆ ಎಳೆದು ಇನ್ನೇನು ಪ್ರಯೋಗಿಸಿ ಬಿಟ್ಟರು ಎಂಬಷ್ಟರಲ್ಲಿ ಅಶರೀರವಾಣಿಯಾಗಿತ್ತು. ಅಂಬರಪಥದಿಂದ ಕೇಳಿಸಿಕೊಂಡ ಮಾತು “ಅರ್ಜುನಾ! ಸ್ತ್ರೀಹತ್ಯೆ ಮಹಾಪಾಪ. ಸಲ್ಲದ ಕಾರ್ಯವನ್ನು ಮಾಡದಿರು. ಈ ಕನ್ಯೆ ನಿನಗೆ ಸೇರತಕ್ಕವಳು, ನೀನು ಸ್ವೀಕರಿಸು” ಆಗ ಅರ್ಜುನ ಸೆಳೆದ ಶಿಂಜಿನಿಯನ್ನು ಸಡಿಲಗೊಳಿಸಿದ್ದ. ಏನಿದು? ಯಾರದು? ಎಂಬಂತೆ ಕಣ್ಣಾಡಿಸಿದರೆ ಯಾರೂ ಕಾಣಿಸದಾಗಿದ್ದರು. ಇದು ಗಗನವಾಕ್ಯವೇ? ಎಂಬಂತೆ ಗೊಂದಲಕ್ಕೊಳಗಾಗಿ ಸೇನೆಯಲ್ಲಿದ್ದ ನೀಲಧ್ವಜಾದಿ ಹಿರಿಯರಲ್ಲಿ ಪ್ರಶ್ನಿಸಿದ್ದನು. ಅವರೂ, ಇದು ದೇವವಾಣಿ, ಮನ್ನಿಸಿ ಪಾಲಿಸಬೇಕಾದುದು ನಿನಗೆ ಕರ್ತವ್ಯ. ಹಾಗಾಗಿ ಯುದ್ಧವನ್ನು ನಿಲ್ಲಿಸು ಎಂಬಂತೆ ಸೂಚನೆ ನೀಡಿದ್ದರು. ಅಂತೆಯೆ ಪ್ರಮೀಳೆಯನ್ನು ಹಸ್ತಿನಾವತಿಗೆ ಕಳುಹಿಸಿದ್ದನು. ಈಗ ಯಾಗ ದೀಕ್ಷಿತನಾಗಿರುವ ನಾನು ವ್ರತಸ್ಥನಾಗಿದ್ದೇನೆ, ಯಾಗ ಮುಗಿದ ಬಳಿಕ ನಿನ್ನನ್ನು ವರಿಸುತ್ತೇನೆ ಎಂದು ವಾಗ್ದಾನ ನೀಡಿ ಕಳುಹಿಸಿದ್ದನು. ಜೊತೆಗೆ ಅರ್ಜುನನ್ನು ವಿವಾಹವಾಗುವಲ್ಲಿ ಕೆಲವೊಂದು ನಿಬಂಧನೆಗಳನ್ನೂ ವಿವರಿಸಿ ಹೇಳಿದ್ದನು.
ಮುಂದುವರಿಯುವುದು…






















