25.3 C
Udupi
Sunday, October 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 660

ಭರತೇಶ್ ಶೆಟ್ಟಿ,ಎಕ್ಕಾರು

ಮಹರ್ಷಿ ಧೌಮ್ಯರು ಅಶ್ವಮೇಧ ಮಹಾಯಾಗ ಆರಂಭಕ್ಕಿಂತ ಮೊದಲು ಮಹಾತ್ಮರಾದ ಬಕದಾಲ್ಭ್ಯ ಮತ್ತು ಭಗವಾನ್ ವ್ಯಾಸರಿಗೆ ವಿದ್ಯುಕ್ತವಾಗಿ ಪೂಜೆ ನೆರವೇರಿಸಿದರು. ಅಲ್ಲಿ ನೆರೆದಿದ್ದ ಸರ್ವರೂ ವಂದಿಸಿದರು. ನಂತರ ಭಗವಾನ್ ವೇದವ್ಯಾಸರ ಆದೇಶದಂತೆ ಮಣ್ಣಿನ ಇಟ್ಟಿಗೆಯಿಂದ ಗರುಡಾಕೃತಿಯ ಯಜ್ಞವೇದಿ ರಚಿಸಲ್ಪಟ್ಟಿತು. ಇತರ ಹೋಮಗಳಿಗೂ ಬೇರೆ ಬೇರೆ ಹೋಮ ವೇದಿಗಳು, ಯಜ್ಞ ಕುಂಡಗಳು ನಿರ್ಮಿಸಲ್ಪಟ್ಟವು. ನಂತರ ವಿಧಿವತ್ತಾಗಿ ಸ್ಥಳಶುದ್ಧಿ ಸಂಪ್ರೋಕ್ಷಣಾದಿ ಕಾರ್ಯಗಳು ನಡೆದವು. ಆಯಾಯ ಯಜ್ಞಗಳಿಗೆ ಬೇಕಾಗುವ ಯಜ್ಞದ್ರವ್ಯ, ಸಮಿಧೆಗಳನ್ನು ಯಥಾವತ್ತಾದ ಸ್ಥಾನಗಳಲ್ಲಿ ಅಣಿಗೊಳಿಸಿ ಇಡಲಾಯಿತು. ಇಷ್ಟಾದ ಬಳಿಕ ಅಲ್ಲಿ ಸಮಾಹಿತರಾಗಿದ್ದ ಋಷಿ, ವಿಪ್ರ, ಬ್ರಾಹ್ಮಣೋತ್ತಮರನ್ನು ಯಾರು ಯಾವ ಕಾರ್ಯಕ್ಕೆ ಎಂಬ ನಿಯೋಜನೆಯನ್ನು, ಜವಾಬ್ಧಾರಿಗಳನ್ನು ವಹಿಸಲಾಯಿತು. ಅವರೆಲ್ಲರಿಗೂ ಅರ್ಚಿಸಿ ವಂದಿಸುವ ಕಾರ್ಯ ಆರಂಭಗೊಂಡಿತು.

ಪರಮಪೂಜ್ಯರೂ, ಹಿರಿಯರೂ, ಸಾಕ್ಷಾತ್ ಬ್ರಹ್ಮ ಸ್ವರೂಪರೂ ಆಗಿರುವ ಮಹಾತ್ಮರಾದ ಬಕದಾಲ್ಭ್ಯರನ್ನು ಬ್ರಹ್ಮತ್ವ ಪೀಠದಲ್ಲಿ ಅರ್ಚಿಸಿದರು. ಪ್ರತ್ಯಕ್ಷ ವೇದ ಸ್ವರೂಪರೆನ್ನಿಸಿದ ಭಗವಾನ್ ವೇದವ್ಯಾಸರನ್ನು ಆಚಾರ್ಯ ಪೀಠದಲ್ಲಿ ಪೂಜಿಸಿದರು. ಮಹರ್ಷಿಗಳಾದ ಭರದ್ವಾಜ, ಕೌಂಡಿನ್ಯ, ಗಾಲವ, ಜಾತಕರ್ಣ, ಸೌಭರಿ, ಸುಮಂತು, ಕಹೋಳ, ರೈಬ್ಯ, ರೋಮಶ, ದೇವಲ, ಧೌಮ್ಯ ಇವರೆಲ್ಲರನ್ನು ಋತ್ವಿಜರಾಗಿ ಅರ್ಚಿಸಲಾಯಿತು. ಮೈತ್ರೇಯ, ಬೃಹದಶ್ವ, ವೈಶಂಪಾಯನರನ್ನು ಸದಸ್ಯ ಪೀಠದಲ್ಲಿ ಅರ್ಚಿಸಿದರು. ಇದಾದ ಬಳಿಕ ತಪೋಧನರಾದ ಋತ್ವಿಜರು ಮುನಿಜನರನ್ನೆಲ್ಲ ಸೇರಿರುವ ಯಾಗಶಾಲೆಯಲ್ಲಿ ಧರ್ಮರಾಯ ಯಜಮಾನತ್ವದ ಸ್ಥಾನದಲ್ಲಿ ನಿಯತಗೊಂಡನು. ಅಶ್ವಮೇಧ ದಿಗ್ವಿಜಯ ತಿರುಗಾಟ ಪೂರೈಸಿ ಬಂದ ಎರಡೂ ಕುದುರೆಗಳನ್ನು ಸ್ನಾನ ಮಾಡಿಸಿ ಮೈಯೊರಸಿ, ಸಿಂಗರಿಸಿ ಮಂತ್ರೋದಕದಿಂದ ಅಭಿಷೇಕ ಮಾಡಿ ಯೂಪಸ್ಥಂಭಕ್ಕೆ ಕಟ್ಟಿ ಹಾಕಿದರು.

ಇದೆಲ್ಲಾ ಸಾಗುತ್ತಿದ್ದಂತೆ ವೇದವ್ಯಾಸರು ಹನ್ನೆರಡು ದಂಪತಿಗಳನ್ನು ಮುಂದಕ್ಕೆ ಕರೆಸಿದರು. ಅವರಿಂದ ಚಿನ್ನದ ಕಲಶದಲ್ಲಿ ಪವಿತ್ರ ಗಂಗಾಜಲವನ್ನು ತುಂಬಿ ತರಿಸಿ ಧರ್ಮರಾಯನಿಗೆ ಅಭಿಷೇಕ ಮಾಡಲು ಸೂಚಿಸಿದರು. ಅಂತೆಯೆ ಆ ಪ್ರಮುಖ ಹನ್ನೆರಡು ದಂಪತಿಗಳಾಗಿ ಶ್ರೀಕೃಷ್ಣ – ರುಕ್ಮಿಣಿ, ವಸುದೇವ – ದೇವಕಿ, ನಂದಗೋಪ – ಯಶೋದೆ, ಪ್ರದ್ಯುಮ್ನ – ಮಾಯಾವತಿ, ಅನಿರುದ್ಧ – ಉಷೆ, ಮಯೂರಧ್ವಜ – ಕುಮುದ್ವತಿ, ಹಂಸಧ್ವಜ – ಸುಗರ್ಭೆ, ಚಂದ್ರಹಾಸ – ಚಂಪಕಮಾಲಿನಿ, ವೀರವರ್ಮ – ಲೀಲಾವತಿ, ನೀಲಧ್ವಜ – ಸುನಂದೆ, ಯೌವನಾಶ್ವ – ಪ್ರಭಾವತಿ, ಅನುಸಾಲ್ವ – ಧಮ್ಮಿಲ್ಲೆ ಹೀಗೆ ಇವರಿಷ್ಟು ದಂಪತಿಗಳು ಸ್ವರ್ಣ ಕಲಶಗಳನ್ನು ಹಿಡಿದುಕೊಂಡು ಗಂಗಾ ತೀರಕ್ಕೆ ಪಾವನ ಜಲ ತುಂಬಿಸಿ ತರಲು ಹೊರಟರು.

ಇದೆಲ್ಲವನ್ನು ನೋಡುತ್ತಾ ಅಲ್ಲಿ ಮಹರ್ಷಿ ನಾರದರೂ ಉಪಸ್ಥಿತರಿದ್ದರು. ಅವರು ಯಾವಾಗಲೂ ಏನಾದರೊಂದು ವಿಶೇಷ ಕಾರ್ಯಕ್ಕೆ ಕಾರಣೀಭೂತರಾಗುವವರಲ್ಲವೆ? ಇಂದೂ ಕೂಡ ಅಂತಹ ಒಂದು ಕೃತ್ಯಕ್ಕೆ ಮನ ಮಾಡಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page