ಭಾಗ – 659
ಭರತೇಶ್ ಶೆಟ್ಟಿ, ಎಕ್ಕಾರು

ಯೋಚಿಸಿ ಗಂಧರ್ವ ಅಂಗಾರಪರ್ಣ ಓರ್ವ ಮಹಾತ್ಮನ ಹೆಸರು ಸೂಚಿಸಲು ಸಿದ್ಧನಾಗಿರುವಂತಿದೆ. “ಹೇ ಅರ್ಜುನಾ! ಪ್ರತ್ಯೂಷಾ ಎಂಬಾತ ಅಷ್ಟವಸುಗಳಲ್ಲಿ ಓರ್ವ. ಆತನಿಗೆ ಈರ್ವರು ಪುತ್ರರು. ದೇವಲ ಮತ್ತು ಧೌಮ್ಯ ಎಂದು ಖ್ಯಾತರಾಗಿದ್ದಾರೆ. ದೇವಲನ ಮೂಲ ಹೆಸರು ಅಸಿತ ನೆಂದು. ಇವರೀರ್ವರ ತಾಯಿಯ ಹೆಸರು ಧಿಷಣೆ. ಬ್ರಹ್ಮರ್ಷಿಯಾದ ದೇವಲರ ಸಾಧನೆ ಅಮಿತವಾದುದು. ಮಹರ್ಷಿ ದೇವಲರು ಜೈಗೀಷವ್ಯ ಮಹರ್ಷಿಯ ಯೋಗ ಪ್ರಭಾವವನ್ನು ಕಂಡು ಚಕಿತಗೊಂಡು ತಪೋ ಮುಖರಾಗಿ ಸಾಧನೆಯಿಂದ ಬ್ರಹ್ಮರ್ಷಿ ಪದವಿಗೇರಿದ ಮಹಾತ್ಮರಾಗಿದ್ದಾರೆ. ಬ್ರಹ್ಮ ಮಾನಸಪುತ್ರ ನಾರದರೊಂದಿಗೆ ಇವರ ಸುದೀರ್ಘ ಸಂವಾದ ಅನೇಕ ನಿಗೂಢ ಸತ್ಯಗಳನ್ನು ಲೋಕ ಮುಖಕ್ಕೆ ಅನಾವರಣಗೊಳಿಸಿದೆ. ಆ ಮಹಾನ್ ಸತ್ಯದರ್ಶನ ಜಗತ್ತಿಗೆ ಇವರ ಕೊಡುಗೆ. ಇಷ್ಟು ಮಾತ್ರವಲ್ಲ ತಪಸ್ಶ್ಯಕ್ತಿಯಿಂದ ಪ್ರಾಣಿಗಳ (ಪ್ರಾಣ ಇರುವ ಜೀವರಾಶಿಗಳ) ಉತ್ಪತ್ತಿ ಮತ್ತು ವಿನಾಶದ ಕುರಿತಾಗಿ ಆದ್ಯಂತವಾಗಿ ಅರಿತು ಬೋಧಿಸಿದ ಮಹಾಜ್ಞಾನಿಯೂ ಆಗಿದ್ದಾರೆ. ಬ್ರಹ್ಮರ್ಷಿ ದೇವಲರು ಒಮ್ಮೆ ನಮ್ಮ ಹಿರಿಯನಾದ ಊಹೂ ಗಂಧರ್ವನಿಗೆ ಶಾಪವಿತ್ತು ಮೊಸಳೆಯಾಗುವಂತೆ ಮಾಡಿ ಹರಿಭಕ್ತಿಯ ಶಕ್ತಿ ಅನಾವರಣಗೊಂಡ ಗಜೇಂದ್ರ ಮೋಕ್ಷಕ್ಕೆ ಮೂಲ ಕಾರಣ ಪುರುಷರಲ್ಲೊಬ್ಬನಾಗಿದ್ದಾರೆ.
(ಇದೇ ಬ್ರಹ್ಮರ್ಷಿ ದೇವಲರು ದೇವಲೋಕದಲ್ಲಿ ಪಿತೃಗಳಿಗೆ ಮಹಾಭಾರತದ ಕಥೆ ಬೋಧಿಸಿದ ಮಹಾತ್ಮರು. ಮಾತ್ರವಲ್ಲ ಜನಮೇಜಯನ ಸರ್ಪಯಾಗದ ಓರ್ವ ಸದಸ್ಯನಾಗಿದ್ದು ಪೂರ್ಣ ಮಹಾಭಾರತ ಕಥಾಯಾನದ ಪ್ರತ್ಯಕ್ಷ ದರ್ಶಿಯಾಗಿದ್ದಾರೆ).
ಇಂತಹ ಮಹಾತ್ಮ ಬ್ರಹ್ಮರ್ಷಿ ದೇವಲರ ಒಡಹುಟ್ಟಿದ ಸೋದರನ ಹೆಸರು ಆಪೋದನ. ಅವರೀಗ ಪ್ರಸಕ್ತ ಧೌಮ್ಯ ಮಹರ್ಷಿ ಯೆಂದು ವಿಖ್ಯಾತರಾಗಿದ್ದಾರೆ. ಗುರುವಾಗಿ ಅಗ್ನಿಹೋತ್ರಾದಿಗಳನ್ನು ನೆರವೇರಿಸಲು, ಸೂಕ್ತ ಮಾರ್ಗದರ್ಶನ ಮಾಡಲು, ನಿಮಗೆ ಈ ಮಹರ್ಷಿ ಧೌಮ್ಯರು ಸೂಕ್ತ ಆಯ್ಕೆ. ಅವರು ಇದೇ ಕಾಡಿನಲ್ಲಿ ಉತ್ಕೋಚಕ ಎಂಬ ತೀರ್ಥ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದಾರೆ. ಒಂದು ವೇಳೆ ನೀವು ಧೌಮ್ಯರಂತಹ ಸಾತ್ವಿಕ, ಧರ್ಮಿಷ್ಟ ಗುರುವನ್ನು ನಿಮ್ಮವರನ್ನಾಗಿಸಿದರೆ ನಿಮಗೆ ರಕ್ಷಾಕವಚವಾಗಿ ಅವರಿಂದ ಪಡೆಯಬಹುದಾದ ಜ್ಞಾನ, ಧರ್ಮ, ಆಚಾರ, ವಿಚಾರಗಳು ವರ್ಣನಾತೀತವಾದವು. ಹಾಗಾಗಿ ನನ್ನ ಅರಿವಿನ ವ್ಯಾಪ್ತಿಯಲ್ಲಿ ಮಹಾತ್ಮರಾದ ಧೌಮ್ಯರು ನಿಮಗೆ ಸಮರ್ಥ ಗುರು ಆಗಬಲ್ಲರು ಎಂದು ನನ್ನ ಅಭಿಮತ” ಎಂದು ಗಂಧರ್ವ ಅಂಗಾರಪರ್ಣ ಸೂಚಿಸಿದನು.
ನಂತರ ಅರ್ಜುನ ತನ್ನ ನಾಲ್ವರು ಸೋದರರು ಮತ್ತು ಮಾತೆ ಕುಂತಿ, ದ್ರೌಪದಿ ಸಹಿತರಾಗಿ ಗಂಧರ್ವನ ಸಹಾಯಕ್ಕೆ ವಂದಿಸಿ ಉತ್ಕೋಚಕ ತೀರ್ಥ ಕ್ಷೇತ್ರದತ್ತ ಪ್ರಯಾಣ ಬೆಳೆಸಿದರು. ಮಹರ್ಷಿ ಧೌಮ್ಯರನ್ನು ಕಂಡು ವಂದಿಸಿ ತಮ್ಮ ಗುರುಗಳಾಗಿ ಉದ್ದರಿಸಬೇಕೆಂದು ಧರ್ಮರಾಯ ಬೇಡಿಕೊಂಡನು. ಲೋಕದ ಸಮಸ್ತ ಶ್ರೇಷ್ಠ ವೇದಜ್ಞರಲ್ಲಿ ಓರ್ವರಾದ ಧೌಮ್ಯ ಮಹರ್ಷಿ ಬಂದ ಐವರು ಪಾಂಡವರನ್ನು ಕಂಡು ದೇವತೆಗಳ ಪ್ರತಿರೂಪ ಇವರು ಎಂದರಿತರು. ಬುದ್ಧಿ, ವೀರ್ಯ, ಬಲ ಮತ್ತು ಉತ್ಸಾಹಗಳಿಂದ ತುಂಬಿ ತುಳುಕಾಡುತ್ತಾ ಸಂತುಷ್ಟ ಸೌಂದರ್ಯ ತುಂಬಿಕೊಂಡಿರುವ ಇವರು ಭೂಲೋಕದ ಸುರರು. ಸ್ವಧರ್ಮ ಪಾಲನೆಯಿಂದ ಸಂಘರ್ಷಪೂರ್ಣವಾಗಿ ಧರ್ಮ ಸಂಸ್ಥಾಪನೆ ಮಾಡಬಲ್ಲ ಸಮರ್ಥರು ಇವರಾಗಿದ್ದಾರೆ. ಇಂತಹ ಮಹಾನ್ ಚೇತನರಿಗೆ ನಾನು ಗುರುವಾಗಿಯೋ, ಪುರೋಹಿತನಾಗಿಯೋ ಒದಗಿದರೆ ಅದು ಪರಮಾತ್ಮ ಶ್ರೀಮನ್ನಾರಾಯಣನ ಕಾರ್ಯಕ್ಕೂ ಸಹಕಾರಿಯಾದಂತೆ ಎಂಬಷ್ಟು ಸಮಗ್ರ ವಿಚಾರ ಅರಿತು, ಪಾಂಡವ ಪುರೋಹಿತರಾಗಿ ಅವರೈವರ ಹಿತ ಕಾಯುವ ಸಂರಕ್ಷಕನಾಗಿ ಜೊತೆಗಿರಲು ಒಪ್ಪಿ ಮನಸ್ಪೂರ್ವಕವಾಗಿ ಮುನ್ನಡೆಸಲು ಮುಂದಾದರು.
ಮಹರ್ಷಿ ಧೌಮ್ಯರು ವನವಾಸ ಕಾಲದಲ್ಲಿ ನಿರಂತರವಾಗಿ ಮಾಡಿದ ಸುದೀರ್ಘ ಧರ್ಮ ಬೋಧನೆ, ಯಾಗ ಯಜ್ಞಗಳು, ದ್ರೌಪದಿ ಸ್ವಯಂವರ ಕಾಲದ ನಿರ್ದೇಶನ, ವಿವಾಹ ವಿಧಿ, ರಾಜಸೂಯ ಯಾಗ, ದ್ಯೂತ ನಂತರದ ವನವಾಸ, ಅಕ್ಷಯ ಪಾತ್ರೆಯ ಸಂಪಾದನೆ ಇಷ್ಟು ಮಾತ್ರವಲ್ಲದೆ ಪಾಂಡವರು ಒಂದು ವರ್ಷ ಅಜ್ಞಾತವಾಸ ಕಾಲದಲ್ಲಿ ಇರುವಾಗ ಧರ್ಮಜ ಮತ್ತವನ ಸೋದರರ ಪರವಾಗಿ ಕ್ಷತ್ರಿಯರಾದ ಇವರ ಶ್ರೇಯಸ್ಸಿಗಾಗಿ ಮಾಡಿದ ನಿರಂತರ ಅಗ್ನಿಹೋತ್ರ, ಅಭಿಮನ್ಯುವಿನ ವಿವಾಹ, ಮಹಾಭಾರತ ಯುದ್ಧ ಕಾಲದಲ್ಲಿ ಸುಮುಹೂರ್ತ, ಸೇನಾಧಿಪತಿ ಪಟ್ಟಾಭಿಷೇಕ, ಪುಣ್ಯಾಹ, ಶಾಂತಿ, ದೋಷ ನಿವಾರಣಾ ವಿಧಿಗಳು, ನಂತರ ಧರ್ಮರಾಯನ ಪಟ್ಟಾಭಿಷೇಕ, ಬಂಧು ಹತ್ಯಾ ದೋಷ ನಿವಾರಣೆಗೆ ಕೈಗೊಂಡ ಅಶ್ವಮೇಧ ಯಾಗದ ಪೌರೋಹಿತ್ಯ ಹೀಗೆ ಧೌಮ್ಯರು ಪಾಂಡವರ ಶ್ರೇಯಸ್ಸಿನ ಹಿಂದೆ ಬದುಕನ್ನೂ, ತನ್ನ ಶಕ್ತಿಯನ್ನೂ ಮುಡಿಪಾಗಿಟ್ಟು ದುಡಿದವರು. ಈಗ ಅಶ್ವಮೇಧ ಯಾಗ ದಿಗ್ವಿಜಯ ಪೂರೈಸಿ ಬಂದ ಪಾಂಡವರ ಯಾಗ ಪೂರೈಕೆಯ ಸಮಯದಲ್ಲೂ ಮುಖ್ಯ ಪುರೋಹಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ವಾರಣಾವತದ ಅರಗಿನ ಅರಮನೆಯಿಂದ ತಪ್ಪಿಸಿಕೊಂಡು ಕಾಡು ಪಾಲಾದ ಪಾಂಡವರ ಜೊತೆ ಮಹಾ ಧರ್ಮ ಸಂಗ್ರಾಮ ವಿಜಯದ ಬಳಿಕವೂ ಜೊತೆಯಾಗಿ ಉಳಿದು ಅನರ್ಘ್ಯ ಬಂಧುವಾಗಿ ಉಳಿದಿದ್ದಾರೆ. ಸರ್ವತ್ರ ವಿಜಯ ಸಾಧಿಸಿ ಬಂದಿರುವ ಪಾಂಡವರ ಸಂಪದ್ಭರಿತ, ಅದ್ದೂರಿಯ ಮಹಾಯಾಗ ಸಂಪನ್ನತೆಯು ಈಗ ಸಿದ್ಧತೆಯಲ್ಲಿದೆ. ದೇವಾನು ದೇವತೆಗಳು, ಋಷಿ, ಮನೀಷಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಭಗವಾನ್ ವ್ಯಾಸರು, ಮಹಾತ್ಮರಾದ ಬಕದಾಲ್ಭ್ಯರು ಯಾಗಶಾಲೆಯಲ್ಲಿದ್ದಾರೆ. ಯಾಗ ಸಾಗುತ್ತಿದೆ.





















