ಭಾಗ – 640
ಭರತೇಶ ಶೆಟ್ಟಿ, ಎಕ್ಕಾರು

ಅರ್ಜುನನು ತನ್ನ ಹಿರಿಯರಿಗೆ ರಾಜ ಪುರೋಹಿತರಾಗಿ, ಗುರುಗಳಾಗಿ ಮಹತ್ತರವಾದ ಸೇವೆ ನೀಡಿದ್ದ ವಸಿಷ್ಟರ ಬಗ್ಗೆ ಕುತೂಹಲಿಗನಾಗಿ ಕೇಳಿದಾಗ ಗಂಧರ್ವ ಮಹರ್ಷಿ ವಸಿಷ್ಟರ ಬಗ್ಗೆ ವಿವರಿಸಿ ಹೇಳತೊಡಗಿದನು. “ಹೇ ವೀರ ಪಾರ್ಥನೆ! ಒಂದೇ ಮಾತಿನಲ್ಲಿ ಹೇಳಬೇಕಾದರೆ, ದೇವತೆಗಳಿಂದಲೂ ಜಯಿಸಲು ಅಸಾಧ್ಯವಾದ ಕಾಮ ಮತ್ತು ಕ್ರೋಧಗಳೆರಡನ್ನೂ ತನ್ನ ತಪಸ್ಶಕ್ತಿಯಿಂದ ಜಯಿಸಿ, ಅವುಗಳೆರಡನ್ನೂ ತನ್ನ ಪಾದ ಸೇವಕರನ್ನಾಗಿ ಮಾಡಿದ್ದ ಮಹಾನ್ ಸಾಧಕರು ಮಹರ್ಷಿ ವಸಿಷ್ಟರು. ಇವರು ಎಷ್ಟು ಉದಾರಿಗಳು ಎಂಬುವುದಕ್ಕೆ ಊಟೋಪಚಾರವಿತ್ತು ಸತ್ಕರಿಸಲ್ಪಟ್ಟ ಕೌಶಿಕ ಮಹಾರಾಜ ವಿಶ್ವಾಮಿತ್ರನಾಗಿ ಬದಲಾಗುವಂತೆ, ತನ್ನ ಪುತ್ರರನ್ನು ವಧಿಸಿದ ಕೌಶಿಕ ರಾಜನನ್ನು ಕ್ಷಮಿಸಿ ಪ್ರತಿಕಾರ ತೀರಿಸದೆ ಬ್ರಹ್ಮರ್ಷಿಯಾಗಿ ಬೆಳೆಸಿದ ಮಹತ್ತರವಾದ ಹೃದಯ ವೈಶಾಲ್ಯತೆ ಸಾಕ್ಷಿ” ಎಂದು ಸೂಚ್ಯವಾಗಿ ಹೇಳಿದನು.
ಅರ್ಜುನನಿಗೆ ಮತ್ತಷ್ಟು ಕೌತುಕ ಹೆಚ್ಚಾಯಿತು. ವಸಿಷ್ಟರ ಮಕ್ಕಳನ್ನು ರಾಜ ಕೌಶಿಕ ಕೊಂದನೆ? ಕ್ಷತ್ರಿಯನಾದ ರಾಜ ಕೌಶಿಕ ಬ್ರಹ್ಮರ್ಷಿಯಾದನೆ? ತುಂಬ ಕುತೂಹಲಕಾರಿಯಾಗಿದೆ. ಕೌಶಿಕ ಊಟೋಪಚಾರವಿತ್ತ ವಸಿಷ್ಟರ ಮಕ್ಕಳನ್ನು ಕೊಂದದ್ದಾದರೂ ಯಾಕೆ? ರಾಜನಾದವ ಋಷಿಯಾದದ್ದು ಹೇಗೆ? ಬ್ರಹ್ಮರ್ಷಿ ಪದವಿಗೇರಿದ್ದು ಇನ್ನೂ ವಿಶೇಷ. ಈ ಬಗ್ಗೆ ಹೇಳಬಹುದೆ?” ಎಂದು ವಿನಂತಿ ಮಾಡಿದನು. ಅರ್ಜುನನ ಕುತೂಹಲ ಕಂಡು ಸವಿವರವಾಗಿ ವಸಿಷ್ಟರ ಪುರಾಣ ಸದೃಶ ಕಥನವನ್ನು ವಿವರಿಸತೊಡಗಿದನು.
“ಹೇ ಅರ್ಜುನಾ! ಹಿಂದೆ ಕನ್ಯಾಕುಬ್ಜದಲ್ಲಿ ಸತ್ಯ ಧರ್ಮ ಪಾರಾಯಣನಾದ ” ಗಾಧಿ” ಎಂಬ ರಾಜನಿದ್ದನು. ಅವನಿಗೆ ಮಹಾ ವಿಕ್ರಮಿಯಾದ “ಕೌಶಿಕ” ಎಂಬ ಹೆಸರಿನ ಮಗನಿದ್ದನು. ಮುಂದೆ ಅವನು ಮಹಾರಾಜನಾದನು. ಧರ್ಮಾತ್ಮ, ಪ್ರಬಲ, ಮಹಾಸೈನ್ಯ, ವಿಶೇಷ ರಥಗಳು ಇದ್ದು ಶತ್ರುನಾಶಕನಾಗಿ ಮೆರೆಯುತ್ತಿದ್ದನು. ಒಮ್ಮೆ ಮಂತ್ರಿಗಳು, ಮಹಾಸೇನೆ ಸಮೇತನಾಗಿ ಮೃಗಬೇಟೆಗೆ ಹೊರಟನು. ಬೇಟೆಯಾಡುತ್ತಾ ಮರುಭೂಮಿ, ಗುಡ್ಡ, ಕಾಡು, ಗೊಂಡಾರಣ್ಯ, ತಪ್ಪಲು, ಬಯಲು ಹೀಗೆ ಎಲ್ಲ ಕಡೆಯೂ ಸುತ್ತಾಡುತ್ತಾ ಬೇಟೆಯಾಡಿದರು. ಸುದೀರ್ಘವಾದ ಬೇಟೆಯಿಂದ ಬಸವಳಿದ ಸೇನೆ ಮತ್ತು ರಾಜ ದಣಿದು ಹಸಿದು ಕಂಗಾಲಾಗಿದ್ದರು. ಆ ಸಮಯ ಸನಿಹದಲ್ಲೇನಾದರೂ ವ್ಯವಸ್ಥೆ ಸಿಕ್ಕೀತೆ ಎಂದು ನೋಡಿದಾಗ ಮಹರ್ಷಿ ವಸಿಷ್ಟರ ಆಶ್ರಮ ಇರುವುದನ್ನು ಅರಿತು ಆಶ್ರಮದತ್ತ ಹೊರಟರು. ಆಶ್ರಮಕ್ಕೆ ಬಂದ ಮಹಾರಾಜ ಕೌಶಿಕನನ್ನು ಆದರದಿಂದ ಸ್ವಾಗತಿಸಿದ ಮಹರ್ಷಿಗಳು ಅರಸನು ಹಸಿದಿರುವುದನ್ನು ಅರಿತು “ರಾಜನೇ! ನೀನಗೀಗ ಆಹಾರದ ಅಗತ್ಯವಿರುವಂತೆ ಕಾಣುತ್ತಿದೆ. ಹಾಗಾಗಿ ನೀನು ಶುಚಿರ್ಭೂತನಾಗಿ ಬಂದರೆ ಊಟೋಪಚಾರದ ವ್ಯವಸ್ಥೆ ಮಾಡಿಸುವೆ” ಎಂದರು. ಆಗ ರಾಜ ಕೌಶಿಕನು “ಋಷಿವರ್ಯ ನಿಮ್ಮ ಸತ್ಕಾರ ಸಮಂಜಸವಾದುದು. ಆದರೆ ನಾವು ಬಹಳಷ್ಟು ಮಂದಿ ಇದ್ದೇವೆ. ಸೇನೆಯಿದೆ. ಹಾಗಾಗಿ ನಿಮಗೆ ಕಷ್ಟವಾದೀತು” ಎಂದನು. ಈ ಮಾತು ಕೇಳಿ ವಸಿಷ್ಟರು “ರಾಜನೇ ಹಸಿದವರ ಉದರಾಗ್ನಿ ಶಮನ ಮಾಡುವುದು ಧರ್ಮ. ಯಥಾಸಾಧ್ಯ ಪ್ರಯತ್ನಿಸುತ್ತೇನೆ. ಆ ಕುರಿತು ವ್ಯಥೆ ಪಡದಿರು. ಎಲ್ಲರೂ ಮಿಂದು ಶುಚಿಯಾಗಿ ಬನ್ನಿ” ಎಂದು ಹೇಳಿ ಕಳುಹಿಸಿದರು. ಅಂತೆಯೆ ರಾಜನು ಪರಿವಾರ ಸಮೇತನಾಗಿ ಸನಿಹದಲ್ಲಿ ಇದ್ದ ನದಿಯಲ್ಲಿ ಮಿಂದು ವಸಿಷ್ಟರ ಆಶ್ರಮದ ಬಳಿಗೆ ಬಂದನು.
ಎಲ್ಲರನ್ನು ಪ್ರೀತಿಯಿಂದ ಸರತಿ ಸಾಲಿನಲ್ಲಿ ಕುಳ್ಳಿರಿಸಿ, ಊಟ ಬಡಿಸತೊಡಗಿದರು. ಓಷಧಿ, ಹಾಲು, ಷಡ್ರಸ, ಅಮೃತರಸ, ಉತ್ತಮ ರಸಾಯನ, ನಾನಾ ವಿಧದ ಭೋಜನೀಯ, ಉತ್ಕೃಷ್ಟ ಪಾನೀಯ, ಸ್ವಾದಿಷ್ಟ ಭಕ್ಷ್ಯಗಳು, ಆಹ್ಲಾದಕ ಲೇಹ್ಯಗಳು ಜೊತೆಗೆ ಚೋಷ್ಯಗಳು ಹೀಗೆ ಏನೇನು ಊಟದಲ್ಲಿ ಇರಲು ಸಾಧ್ಯವೋ ಅದೆಲ್ಲವೂ ಅದ್ಬುತವಾದ ರುಚಿ ಶುಚಿಯೊಂದಿಗೆ ಉಣ ಬಡಿಸಲ್ಪಟ್ಟವು. ಸುಸ್ತಾಗಿ, ನಿತ್ರಾಣರಾಗಿದ್ದ ಅರಸ ಮತ್ತು ಸೇನೆ ಭರ್ಜರಿ ಭೋಜನ ಸವಿದು ಸಂತುಷ್ಟರಾಗಿ ಕುಳಿತರು.
ಮೊದಲು ಹಸಿದು ದಣಿದಿದ್ದ ಸೇನೆ ಈಗ ಹೊಟ್ಟೆ ಬಿರಿಯುವಷ್ಟು ಉಂಡು ವಿಶ್ರಾಂತಿ ಬಯಸುವಂತಾಗಿದೆ. ಎಲ್ಲರ ಬಾಯಲ್ಲೂ ಸವಿದ ಊಟದ್ದೇ ಗುಣಗಾನ. ನಮ್ಮ ರಾಜ ವೈಭೋಗದ ಅರಮನೆಯಲ್ಲಿಯೂ ಇಂತಹ ಊಟ ಉಂಡವರಲ್ಲ ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ನನ್ನ ಜೀವಮಾನದಲ್ಲಿ ಇಂತಹ ಸ್ವಾದವನ್ನು ಸವಿದ ನೆನಪೇ ಇಲ್ಲ ಎಂದನು. ಛೇ ಬೇಕೆಂದರೂ ಇಂತಹ ರುಚಿ ಮತ್ತೊಮ್ಮೆ ಎಲ್ಲೂ ಸಿಗಲಿಕ್ಕಿಲ್ಲ ಎಂದಾಗ, ಮತ್ತೊಬ್ಬ ಸೈನಿಕ ನಮ್ಮ ಅರಸರಿಗೆ ಹೇಳಿ ಮಾಸಕ್ಕೊಮ್ಮೆ ಇಲ್ಲಿಗೆ ಬಂದು ಉಂಡು ಹೋಗೋಣವಂತೆ… ಹೀಗೆ ಎಲ್ಲರೂ ಅದು ಹಾಗಿತ್ತು, ಇದು ಹೀಗಿತ್ತು. ಆಹಾ ಏನು ರುಚಿ, ಏನು ಸ್ವಾದ.. ಎಂದು ಅತಿಶಯ ಎಂಬಂತೆ ವರ್ಣಿಸುತ್ತಿದ್ದಾರೆ. ಸ್ವಯಂ ಅರಸನಿಗೂ ಇದೇ ರೀತಿಯ ಅನುಭವ ಆಗುತ್ತಿದೆ. ತನ್ನ ಸೇನೆಯೂ ಬಾಯ್ತುಂಬಾ ಮೃಷ್ಟಾನ್ನ ಭೋಜನದ ಹೊಗಳಿಕೆಯಲ್ಲಿ ನಿರತರಾಗಿದ್ದಾರೆ.
ವಿಪರ್ಯಾಸವೆಂದರೆ ಇಂತಹ ಸವಿ ಭೋಜನವಿತ್ತು ನಮ್ಮೆಲ್ಲರಿಗೂ ಹಿತಾನುಭವ ನೀಡಿದ ವಸಿಷ್ಟರಿಗೆ ಕೃತಜ್ಞನಾಗುವ ಬದಲು ಅರಸನ ಮನಸ್ಸು ಬೇರೆ ಯೋಚನೆ ಮತ್ತು ತರ್ಕದಲ್ಲಿ ನಿರತವಾಯಿತು. ಅದೇನೆಂದರೆ ಹೇಳದೆ, ಯಾವುದೆ ಪೂರ್ವ ಸೂಚನೆ ನೀಡದೆ ಇಷ್ಟೊಂದು ಸೇನೆ ಆಕಸ್ಮಿಕವಾಗಿ ಊಟದ ಸಮಯಕ್ಕೆ ಬಂದಾಗ ಒಬ್ಬ ಋಷಿಯ ಆಶ್ರಮದಲ್ಲಿ ಇಷ್ಟೊಂದು ವ್ಯವಸ್ಥೆ ಹೇಗೆ ಸಾಧ್ಯವಾಯಿತು? ಒಂದೊಮ್ಮೆಗೆ ಸೂಚನೆ ನೀಡಿ ಬಂದಿದ್ದರೂ ಇಷ್ಟೊಂದು ಬಗೆ ಬಗೆಯ ಊಟ ಸಿದ್ಧಪಡಿಸಲು ಅರುಣೋದಯದಿಂದ ಆರಂಭಿಸಿದ್ದರೂ ಅದು ಸುಲಭ ಸಾಧ್ಯವಾಗುತ್ತಿರಲಿಲ್ಲ. ಅಂತದ್ದರಲ್ಲಿ ಎಲ್ಲವೂ ತಾಜಾತನದಿಂದ ಬಿಸಿ ಬಿಸಿಯಾಗಿದ್ದು ವರ್ಣಿಸಲಸಾಧ್ಯವಾದ ರುಚಿಯನ್ನು ಹೊಂದಿತ್ತು. ಈ ವ್ಯವಸ್ಥೆಯ ರಹಸ್ಯ ತಿಳಿಯ ಬೇಕೆಂದು ಎದ್ದು ಮಹರ್ಷಿ ವಸಿಷ್ಟರ ಬಳಿಗೆ ಹೋದನು.
ಮುಂದುವರಿಯುವುದು…

























































































































