ಭಾಗ -638
ಭರತೇಶ್ ಶೆಟ್ಟಿ, ಎಕ್ಕಾರು

ಸಂಚಿಕೆ ೬೩೮ ಮಹಾಭಾರತ
ಆಗಲೂ ಸುಮ್ಮನೆ ನಿದ್ರಿಸಿದವನಂತೆ ಬಿದ್ದುಕೊಂಡಿದ್ದಾನೆ ರಾಜ ಸಂವರಣ. ಆತನ ಕಿರೀಟವನ್ನು ಕಳಚಿ, ಕೇಶರಾಶಿಯನ್ನು ಪೂಸಿದನು. ನಂತರ ಶೀತಲವೂ, ಪದ್ಮದಂತೆ ಸುಗಂಧಯುಕ್ತವೂ ಆದ ನೀರನ್ನು ಅರಸನ ಮುಖ ಹಾಗು ಶಿರದ ಮೇಲೆ ಚಿಮುಕಿಸಿದನು. ಆಗ ತುಸು ಚೇತರಿಸಿಕೊಂಡ ರಾಜ ಸಂವರಣ ಮಂತ್ರಿವರ್ಯನಲ್ಲಿ “ಸೈನ್ಯ ಮತ್ತು ಪರಿವಾರ ದೂರ ಸರಿಯಲಿ. ಏಕಾಂತದಲ್ಲಿ ಮಾತನಾಡಲಿಕ್ಕಿದೆ” ಎಂದಷ್ಟೆ ಹೇಳಿ ಸುಮ್ಮನಾದನು. ಅರಸನ ಅಪ್ಪಣೆಯಂತೆ ದೊಡ್ಡ ಸೇನೆಯನ್ನು ಪರ್ವತದ ತಪ್ಪಲು ಪ್ರದೇಶದಲ್ಲಿ ನಿಲ್ಲುವಂತೆ ಸೂಚನೆ ನೀಡಿ ಕಳುಹಿಸಿದನು. ತರುವಾಯ ಏಕಾಂತ ಒದಗಿದಾಗ ಅರಸನು “ಮಂತ್ರೀಶ, ನನಗೆ ಅಗತ್ಯ ಕಾರ್ಯಕ್ಕಾಗಿ ತಪಸ್ಸು ಮಾಡಲಿಕ್ಕಿದೆ. ನಾನು ಹಿಂದಿರುಗುವವರೆಗೆ ರಾಜ್ಯ ಹಾಗು ಪ್ರಜಾಪರಿವಾರದ ಸಂರಕ್ಷಣೆಯ ಹೊಣೆ ನಿಮ್ಮದು. ನನ್ನ ಕಾರ್ಯ ಸಾಧಿಸಿ ಶೀಘ್ರವಾಗಿ ಹಿಂದಿರುಗುತ್ತೇನೆ” ಎಂದು ಹೇಳಿ ಅಧಿಕಾರವನ್ನು ಮಂತ್ರಿಗೆ ವಹಿಸಿ ಕಳುಹಿಸಿದನು.
ಅವರೆಲ್ಲ ಹೋದ ಬಳಿಕ ಪರ್ವತದ ಝರಿಯಲ್ಲಿ ಮಿಂದು ಶುಚಿರ್ಭೂತನಾದನು. ಸೂರ್ಯನನ್ನು ಸ್ತುತಿಸಿ ನಿಂತುಕೊಂಡು ಎರಡೂ ಕೈಗಳನ್ನೆತ್ತಿ ಧ್ಯಾನ ನಿರತನಾದನು. ಆದರೆ ಸೂರ್ಯದೇವನು ಪ್ರಕಟನಾಗದೆ ಹೋದಾಗ ಯೋಚಿಸತೊಡಗಿದನು. ಸೂರ್ಯದೇವನನ್ನು ಬಹುಬೇಗನೆ ಒಲಿಸಬೇಕು. ಅದಕ್ಕಾಗಿ ಪುರೋಹಿತರೂ ಋಷಿಶ್ರೇಷ್ಟರೂ ಆದ ವಸಿಷ್ಟರನ್ನು ಧ್ಯಾನ ಮಾರ್ಗದಿಂದ ನಿಮಂತ್ರಿಸತೊಡಗಿದನು. ಹಗಲೂ ರಾತ್ರಿ ಕಠಿಣ ಧ್ಯಾನ ನಿರತನಾದಾಗ ವಸಿಷ್ಠರು ಅಲ್ಲಿಗೆ ಬಂದು ಈ ರೀತಿ ಧ್ಯಾನಿಸಲು ಕಾರಣವೇನೆಂದು ಕೇಳಿದರು. ಆಗ ರಾಜ ಸಂವರಣನು ತನ್ನ ಮನದಾಸೆಯನ್ನು ವಿವರಿಸಿ ಈ ಹೊತ್ತು ಸೂರ್ಯಪುತ್ರಿ ತಪತಿಯಿಂದ ನನ್ನ ಮನಸ್ಸು ಅಪಹೃತವಾಗಿದೆ. ಆಕೆಯನ್ನು ವರಿಸುವಲ್ಲಿ ನಿಮ್ಮ ಸಹಾಯ ಹಾಗು ಮಾರ್ಗದರ್ಶನ ಬೇಕು ಎಂಬಂತೆ ಕೇಳಿಕೊಂಡನು.
ವಸಿಷ್ಟರು ಅರಸನ ವಾಂಛೆಯನ್ನರಿತು ವಿವೇಚಿಸಿ, ಸ್ವಯಂ ತಾನು ಸೂರ್ಯದೇವನ ಬಳಿಗೆ ಹೋಗಿ ವಿಷಯವನ್ನುರುಹಿ ಪ್ರಾರ್ಥಿಸುವ ನಿರ್ಧಾರ ಮಾಡಿದರು. ಅಂತೆಯೆ ಹೊರಟು ತಪಸ್ಶಕ್ತಿಯಿಂದ ಸೂರ್ಯದೇವನಲ್ಲಿಗೆ ಹೋದರು. ಸೂರ್ಯದೇವನಿಗೆ ವಂದಿಸಿ ಕರಜೋಡಿಸಿ ನಿಂತಾಗ, ಭಗವಾನ್ ಸೂರ್ಯನಾರಾಯಣ ಮಹರ್ಷಿಯ ಆಗಮನದ ಕಾರಣ ವಿಚಾರಿಸಿದನು. ಆಗ ವಸಿಷ್ಟರು “ಹೇ ವಿಭಾವಸು! ನಿನ್ನ ಮಗಳು, ಸಾವಿತ್ರಿ, ಯಮ, ಶನಿಯರ ತಂಗಿಯೂ ಆಗಿರುವ ತಪತಿಯೆಂಬವಳನ್ನು ಕುರುಶ್ರೇಷ್ಟ ಮಹಾರಾಜ ಸಂವರಣ ತನ್ನ ರಾಣಿಯಾಗಿಸಲು ಬಯಸಿ ನಿನ್ನ ಧ್ಯಾನ ನಿರತನಾಗಿದ್ದಾನೆ. ನಿನ್ನ ಪರಮ ಭಕ್ತ, ಸದಾಚಾರಿ, ಮಹಾ ವಿಕ್ರಮಿ, ಗಗನ ಸಂಚಾರ ಬಲಸಂಪನ್ನ, ಧರ್ಮಿಷ್ಟ, ಪುರುಷಾರ್ಥಗಳನ್ನು ಅರಿತು ಪಾಲಿಸುವವನು, ಉದಾರವಾದ ಬುದ್ಧಿಯುಳ್ಳವನು, ಮಹಾಕೀರ್ತಿವಂತನು ಆಗಿರುವ ಆತ ನಿನ್ನ ಮಗಳಿಗೆ ಅನುರೂಪ ವರ ಎಂದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಕನ್ಯಾಪಿತನಾದ ನಿಮ್ಮಲ್ಲಿ ಮಗಳನ್ನು ರಾಜ ಸಂವರಣನಿಗಾಗಿ ಕೇಳಲು ಬಂದಿದ್ದೇನೆ” ಎಂದು ಪ್ರಾರ್ಥಿಸಿ ಕೇಳಿದನು.
ಗಂಧರ್ವನು ತನ್ನ ಜೊತೆ ಶ್ರವಣ ನಿರತನಾಗಿರುವ ಅರ್ಜುನನಿಗೆ ಈ ಗತ ಕಥನವನ್ನು ವಿವರಿಸುತ್ತಾ ಮುಂದುವರಿಸಿ ಹೇಳತೊಡಗಿದನು. ‘ಹೀಗೆ ವಸಿಷ್ಟರು ಕೇಳಿದಾಗ, ಸೂರ್ಯನು “ಹೇ ಮಹರ್ಷಿಯೆ, ನೀವು ಋಷಿಗಳಲ್ಲಿ ಶ್ರೇಷ್ಠರು. ನರಪತಿ ಸಂವರಣ ರಾಜರುಗಳಲ್ಲಿ ಶ್ರೇಷ್ಠನಾಗಿದ್ದಾನೆ. ನನ್ನ ಮಗಳು ತಪತಿ ನಾರಿಯರಲ್ಲಿ ಶ್ರೇಷ್ಠಳಾಗಿದ್ದಾಳೆ. ಹೀಗಿರುವಾಗ ನಿಮ್ಮ ಅಪೇಕ್ಷೆಯನ್ನು ಮನ್ನಿಸಿ ನನ್ನ ಮಗಳನ್ನು ನಿಮ್ಮ ಜೊತೆ ಕಳುಹಿಸಿ ಕೊಡುತ್ತೇನೆ. ವೈವಾಹಿಕ ವಿಧಿಗಳನ್ನು ನೆರವೇರಿಸಿ ಪಾಣಿಗ್ರಹಣ ಮಾಡಿಸಿ” ಎಂದು ಹೇಳಿ ಸರ್ವಾಂಗ ಸುಂದರಿಯೂ ಪ್ರಿಯ ಸುತೆಯೂ ಆದ ಮಗಳು ತಪತಿಯನ್ನು ಕರೆದು ಆಶೀರ್ವದಿಸಿ ಮಹರ್ಷಿ ವಸಿಷ್ಟರ ಜೊತೆ ಸೂರ್ಯದೇವ ಕಳುಹಿಸಿಕೊಟ್ಟನು.
ಹೀಗೆ ತಪತಿಯನ್ನು ಕರೆತಂದು ರಾಜಾ ಸಂವರಣನಿಗೆ ಆ ಪರ್ವತದಲ್ಲಿಯೆ ಸುಮುಹೂರ್ತ ನಿಶ್ಚಯಿಸಿ ವಿಧಿವತ್ತಾಗಿ ಮಹರ್ಷಿ ವಸಿಷ್ಟರು ಕರಗ್ರಹಣ ಮಾಡಿಸಿದರು. ದೇವತೆಗಳು ಗಂಧರ್ವರು, ಋಷಿಮುನಿಗಳು ಆ ಸಮಯ ಉಪಸ್ಥಿತರಾಗಿದ್ದು ಹರಸಿದರು. ವಿವಾಹ ವಿಧಿಗಳು ಪೂರೈಸಿದ ಬಳಿಕ ಸಂವರಣನು ಸಪತ್ನೀಕನಾಗಿ ದೇವತೆಗಳ, ಋಷಿಗಳ, ಗಂಧರ್ವರ ಹಾಗು ಭಗವಾನ್ ಭಾಸ್ಕರನ ಜೊತೆಗೆ ಗುರು ವಸಿಷ್ಟರ ಆಶೀರ್ವಾದ ಪಡೆದನು. ವಸಿಷ್ಟರ ಬಳಿ ಬಂದು “ಪೂಜ್ಯರೇ, ನಾವು ಪತಿಪತ್ನಿಗಳೀರ್ವರು ಈ ಪರ್ವತದಲ್ಲಿ ಕೆಲಸಮಯ ಜೊತೆಯಾಗಿ ಕಳೆಯಬೇಕು. ಏಕಾಂತದಲ್ಲಿರಬೇಕು ಎಂಬ ಆಸೆಯನ್ನು ಹೊಂದಿದ್ದೇವೆ. ಅದಕ್ಕೆ ನಿಮ್ಮ ಅನುಮತಿ ಬೇಕು” ಎಂದು ಬೇಡಿ ಸಮ್ಮತಿ ಪಡೆದುಕೊಂಡನು. ನಂತರ ಆ ಕಾಡಿನಲ್ಲಿ ನವ ವಿವಾಹಿತರಾದ ದಂಪತಿಗಳು ಮನಸೋ ಇಚ್ಚೆ ವಿಹರಿಸುತ್ತಾ ಸದಾ ಜೊತೆಗಿದ್ದು, ಎಲ್ಲವನ್ನೂ ಮರೆತು ಕ್ರೀಡಿಸತೊಡಗಿದರು.’
“ಹೇ! ವೀರ ಪಾರ್ಥನೆ! ಇಲ್ಲಿಯೂ ನೋಡು ಕಷ್ಟ ಪಟ್ಟು ಸಾಧಿಸಬಹುದಾಗಿದ್ದ ಕಾರ್ಯವನ್ನು ಅರಣ್ಯದಲ್ಲಿ ರಾಜಾ ಸಂವರಣನು ಗುರು ವಸಿಷ್ಟರ ಮುಖೇನ ಸುಲಭದಿಂದ ಸಾಧಿಸಿದನು. ಹಾಗೆಯೆ ನಿಮಗೂ ಸಮರ್ಥ ಗುರು ಹಾಗು ಧರ್ಮಾತ್ಮ, ಮಹಾತ್ಮರಾದ ಪುರೋಹಿತರು ಬೇಕು ಎಂಬ ಸಲಹೆಯನ್ನು ನಾನು ನೀಡಿರುವೆ. ಈ ಗತ ಕಥನ ಇಲ್ಲಿಗೆ ಮುಗಿಯುವುದಿಲ್ಲ. ಹೇಳುತ್ತೇನೆ ಕೇಳು” ಎಂದು ಗಂಧರ್ವ ಮುಂದುವರಿಸಿ ನಿರೂಪಿಸತೊಡಗಿದನು.
ರಾಜನಾದ ಸಂವರಣನಿಗೆ ರಾಜ್ಯ ಪರಿಪಾಲನೆ, ಪ್ರಜೆಗಳ ಸಂರಕ್ಷಣೆ, ಶತ್ರುಗಳ ಕುರಿತಾದ ಎಚ್ಚರ, ಕೋಶ, ಸಮೃದ್ಧಿ, ಧರ್ಮಕಾರ್ಯ, ನ್ಯಾಯ ದಾನ ಇದ್ಯಾವುದರ ಪರಿವೆ, ನೆನಪು ಇಲ್ಲದೆ ಹನ್ನೆರಡು ವರ್ಷಗಳು ಕಳೆದು ಹೋಯಿತು. ಅಪ್ರತಿಮ ಸುಂದರಿಯಾದ ತಪತಿಯ ಜೊತೆಯಲ್ಲಿ ಆತ ರಮಿಸತೊಡಗಿದ್ದನು. ಜಲಾಶಯ, ಸುಮವನ, ಪ್ರಕೃತಿ ಸೌಂದರ್ಯದ ಪೂರಕ ವಸತಿಯಲ್ಲಿ ವಿಹರಿಸುತ್ತಾ ಮೈಮರೆತು ಹೋಗಿದ್ದನು. ಹೀಗಿರಲು ಸಹಸ್ರಾಕ್ಷ ದೇವರಾಜ ಇಂದ್ರನಿಗೆ ಅರಸ ಸಂವರಣನ ಬೇಜವಾಬ್ದಾರಿಯನ್ನು ಕಂಡು ವಿಪರೀತ ಕ್ರೋಧ ಉಕ್ಕೇರಿತು. ಇವನನ್ನು ದಂಡಿಸಬೇಕು ಎಂದು ಯೋಚಿಸಿ ಅದಕ್ಕೆ ಮಾರ್ಗವೇನು ಎಂದು ತರ್ಕಿಸತೊಡಗಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರು




































