ಭಾಗ – 628
ಭರತೇಶ್ ಶೆಟ್ಟಿ, ಎಕ್ಕಾರು

“ಮಹಾತ್ಮರಾದ ಬಕದಾಲ್ಭ್ಯರೇ! ನೀವು ಸಾಮಾನ್ಯರಲ್ಲ. ಸಾಧನೆಯಿಂದ ಏನನ್ನು ಸಾಧಿಸಬಹುದು? ಇಚ್ಚಾಶಕ್ತಿಯ ಸಾಮರ್ಥ್ಯ ಎಷ್ಟು ಎಂಬುವುದನ್ನು ಲೋಕ ಲೋಕಗಳಿಗೂ ತೋರಿಸಿರುವ ಅದ್ವಿತೀಯರು. ಕಲ್ಪಾಂತ್ಯದ ಪ್ರಳಯದಲ್ಲಿ ಎಲ್ಲ ನಷ್ಟವಾದರೂ ಅದನ್ನೆದುರಿಸಿ ಉಳಿದು ನಿಮ್ಮ ಇಚ್ಚಾಶಕ್ತಿಯ ಬಲವನ್ನು ನಿದರ್ಶನವಾಗಿಸಿದ್ದೀರಿ. ನಿಮ್ಮ ಅಪೇಕ್ಷೆ ಅಯುಕ್ತವಾದುದಲ್ಲ. ಅಥವಾ ನೀವೇ ಕೇಳಿದಂತೆ ನಿಮ್ಮ ಇಚ್ಚಾಶಕ್ತಿಯಲ್ಲಿ ಕೊರತೆಯೂ ಇಲ್ಲ. ಅನುಚಿತವಾದುದನ್ನೇನೂ ನೀವು ಬಯಸಿಯೂ ಇಲ್ಲ. ಹಾಗೆಂದು ನಿಮಗೆ ಬೇಕಾಗಿರದ್ದು ಅದೇನಿದ್ದರೂ ಅದನ್ನು ಸ್ವೀಕರಿಸಿದವರಲ್ಲ. ಯಾವುದಕ್ಕೂ ಆಸೆ ಪಡದೆ ನಿಮ್ಮ ಗುರಿ ಸಾಧನೆಯ ಏಕೈಕ ಸಂಕಲ್ಪದಿಂದ ಪಡೆದರೆ ಕೇವಲ ಅದನ್ನಷ್ಟೆ ಪಡೆಯುತ್ತೇನೆ ಎಂದು ಹಠ ಸಾಧನೆ ನಿರತರಾದವರು. ಅರ್ಹತೆಯಿಂದ ನೀವೇನು ಎಂದು ಸಾಬೀತು ಪಡಿಸಿದ್ದೀರಿ. ಪರಿಶುದ್ಧವಾದ ನಿಮ್ಮ ವಾಂಛಿತಕ್ಕೆ ತಕ್ಕುದಾದುದನ್ನು ಯಾರೂ ನೀಡಬೇಕಾಗಿಲ್ಲ. ನೀವು ಸ್ವಯಂ ಅರ್ಹರಾಗಿ ಸಂಪಾದಿಸಿಕೊಳ್ಳಲಿದ್ದೀರಿ. ಆ ಕುರಿತಾಗಿ ನಿಮಗೆ ಸಂದೇಹವೂ ಇಲ್ಲ. ಧೃಡ ಸಂಕಲ್ಪ, ವಿಶ್ವಾಸದಿಂದ ಎಂತಹ ಸ್ಥಿತಿ ಬಂದರೂ ಧೃತಿಗೆಡದೆ, ವಿಚಲಿತರೂ ಆಗದೆ ನಿಮ್ಮದ್ದಾದ ಲಕ್ಷ್ಯವೊಂದನ್ನು ಸ್ಥಿತಗೊಳಿಸಿ ಯೋಗಶಕ್ತಿಯಿಂದ ನಿಂತ ಕಾರಣ ನಿಮ್ಮನ್ನು ಪ್ರಳಯವೂ ಏನೂ ಮಾಡಲಾಗದೆ ಉಳಿದಿದ್ದೀರಿ. ಇನ್ನು ಪರಮಾತ್ಮನೇಕೆ ತಡ ಮಾಡುತ್ತಿದ್ದಾನೆ ಎಂಬ ಪ್ರಶ್ನೆ ನಿಮ್ಮಲ್ಲಿ ಮನ ಮಾಡಿದ್ದು ಸತ್ಯ. ಮಣ್ಣಿನಲ್ಲಿ ಮಣ್ಣಾಗಿ ಇರುವ ಚಿನ್ನದ ಗಣಿ ಅಪರಂಜಿ ಆಗಬೇಕಾದರೆ ಅದು ಬಹಳಷ್ಟು ಹಂತಗಳನ್ನು ದಾಟಿ ಹದಗೊಂಡು ಬಳಿಕ ಬೇಕಾದದ್ದು ಮಾತ್ರ ಉಳಿದು ಬೇಡದ್ದು ಎಲ್ಲವೂ ನಷ್ಟವಾಗಬೇಕು. ಹಾಗೆಯೆ ವಜ್ರವೂ ಒಂದೆರಡು ವರ್ಷದಲ್ಲಿ ತಯಾರಾಗದು. ಭೂಗರ್ಭದಲ್ಲಿ ಸಹಸ್ರಾರು ವರ್ಷ ಹುದುಗಿದ್ದು ಅಲ್ಲಿನ ಶಾಖದೊಂದಿಗೆ ಸಂಯಮದಿಂದ ಕಾಠಿಣ್ಯವನ್ನು ಹೊಂದುತ್ತಾ ಕಡೆಗೆ ಬಲಿಷ್ಠವಾದ, ಖಂಡಿಸಲಾಗದ ವಜ್ರವಾಗಿ ರೂಪು ಪಡೆಯುತ್ತದೆ. ಈ ಎರಡರಲ್ಲೂ ಅವಸರದಿಂದ ಮಧ್ಯದಲ್ಲಿ ಅಂದರೆ ಬೇಗನೆ ಹೊರಬರುವ ಪ್ರಯತ್ನವಾದರೆ ಆಗ ಚಿನ್ನ ಪರಿಶುದ್ಧವಾದ ಅಪರಂಜಿಯಾಗದು. ವಜ್ರವೂ ತನ್ನ ಹೊಳಪು, ಮೊನಚು, ಕಾಠಿಣ್ಯವನ್ನು ಹೊಂದುವುದಿಲ್ಲ. ಅಂತೆಯೆ ನೀವೂ ಕೂಡ ಪರಿಪೂರ್ಣತೆಯ ಸರ್ವತ್ರ ಸಂಪನ್ನತೆಯನ್ನು ಹೊಂದಲು ಇಷ್ಟು ಕಾಲಾವಕಾಶ ಬೇಕಾಯಿತು ಹೊರತು ಪರಮಾತ್ಮ ನಿಧಾನತೆಯನ್ನು ತೋರಿಸಿಲ್ಲ. ನೀವು ಬಯಸಿದ್ದೂ ಭಗವಂತನಲ್ಲಿ ಲೀನನಾಗಬೇಕೆಂದು. ಅಂತಹ ನಿಷ್ಕಳಂಕ ಸ್ಥಾನವನ್ನು ಬಯಸಿದ್ದು ಮಾತ್ರವಲ್ಲ ಅದಕ್ಕೆ ಬೇಕಾದ ಪರಿಪೂರ್ಣ ಅರ್ಹತೆಯನ್ನು ಸಾಧಿಸಿದವರಿದ್ದೀರಿ. ಹಾಗಾಗಿ ನಿಮ್ಮ ಆಸೆ ಪೂರೈಸಲಿದೆ. ಆದರೆ ಈಗ ನಿಮ್ಮಿಂದ ಒಂದು ಮಹತ್ಕಾರ್ಯವಾಗಬೇಕು, ನಡೆಸಿ ಕೊಡುವಿರಾ” ಎಂದು ಶ್ರೀಕೃಷ್ಣ ಪರಮಾತ್ಮ ಬಕದಾಲ್ಭ್ಯರಲ್ಲಿ ಕೇಳಿದನು.
“ಸ್ವಾಮೀ, ನಾನು ನಿಮ್ಮನ್ನು ಅನುಕ್ಷಣ ಸೇವಿಸಿದವನು. ನಿಮ್ಮ ಸೇವೆಗೆ ಸದಾ ಹಾತೊರೆಯುವವನು. ಅಂತಹ ಸೇವಕನಲ್ಲಿ ನೀವು ಒಪ್ಪಿಗೆ ಬೇಡುವುದೆ? ಏನಾಗಬೇಕು ಎಂದು ತಿಳಿಸಿದರೆ ಸೇವೆಗೆ ಸಿದ್ಧನಾಗಿರುವ ನಾನು ನಿಮ್ಮ ಬೇಡಿಕೆ ನನ್ನಿಂದ ನಿಮಗರ್ಪಿಸುವ ಮಹಾ ಪೂಜೆಯೆಂದು ಭಕ್ತಿಯಿಂದ ಸಮರ್ಪಿಸುವೆ. ಸನ್ನಿಧಾನದಿಂದ ಅಪೇಕ್ಷೆ ಏನೆಂದು ಅಪ್ಪಣೆಯಾಗಲಿ” ಎಂದು ಬಕದಾಲ್ಭ್ಯರು ಶಿರಬಾಗಿ ಬೇಡಿಕೊಂಡರು.
“ಬಕದಾಲ್ಭ್ಯರೇ, ಈಗಾಗಲೆ ಅರ್ಜುನನು ನಿಮ್ಮಲ್ಲಿ ಆತನ ಕೋರಿಕೆಯನ್ನು ಕೋರಿಕೊಂಡಿದ್ದಾನೆ. ಅನ್ಯ ವಿಚಾರದಲ್ಲಿ ಆಸಕ್ತಿಯನ್ನು ಹೊಂದಿರದ ನೀವು ನಿರಾಕರಿಸಿದ್ದೀರಿ. ನಾನೀಗ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ, ನೀವು ಆತ ಕೇಳಿಕೊಂಡಂತೆ ನಡೆದುಕೊಳ್ಳಬೇಕಾಗಿ ಅಪೇಕ್ಷಿಸುವೆ. ನೀವು ಧರ್ಮಾತ್ಮನಾದ ಧರ್ಮರಾಯನ ಅಶ್ವಮೇಧ ಯಾಗಕ್ಕೆ ಬಂದು ಉಪಸ್ಥಿತರಾಗಬೇಕು. ಸ್ವಯಂ ನೀವು ಸ್ಥಿತರಿದ್ದು ವಿಧಿ ವಿಧಾನಗಳನ್ನು ಸಾಂಗವಾಗಿ ನೆರವೇರಿಸಿಕೊಡಬೇಕು. ಮಹಾನ್ ಪುಣ್ಯಾತ್ಮರಾದ ನಿಮ್ಮ ಸಾನಿಧ್ಯದಲ್ಲಿ ಯಾಗ ನೆರವೇರುವಂತಾಗಬೇಕು. ಹೀಗೆ ತೊಡಗಿಕೊಂಡರೆ ನಿಮಗೂ ಪ್ರಯೋಜನವಿದೆ. ಯಾಕೆಂದರೆ ಧರ್ಮಾತ್ಮರ ಅಪೇಕ್ಷೆಯನ್ನು ಪೂರೈಸಿಕೊಟ್ಟರೆ ದೇಹಧರ್ಮವನ್ನು ವಿಶ್ವಧರ್ಮದೊಂದಿಗೆ ಸಮಾವೇಶಗೊಳಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ನೀವು ಬಯಸಿರುವ ಮನೆಗೆ ದಾರಿಯೂ ಸುಗುಮಗೊಳ್ಳುತ್ತದೆ. ಹೇಗೆ ಬಯಸಿದ ಗೃಹವನ್ನು ಪ್ರವೇಶಿಸುವ ಮೊದಲು ವಾಸ್ತು ಪೂಜೆ ಅನಿವಾರ್ಯವೋ ಹಾಗೆಯೆ ನಿಮ್ಮ ಗುರಿಯಾಗಿರುವ ಆ ಮನೆಯನ್ನು ಸೇರಲು ಇದು ಸಹಕಾರಿಯಾಗಲಿದೆ” ಎಂದು ಶ್ರೀಕೃಷ್ಣ ಪರಮಾತ್ಮ ನಿಮಂತ್ರಿಸಿದನು.
ಬಕದಾಲ್ಭ್ಯರ ಸರ್ವಸ್ವವೂ, ಕನಸೂ, ನನಸೂ, ಶ್ವಾಸ ನಿಶ್ವಾಸಗಳೂ ಆಗಿರುವಾತ ಕೇಳಿ ಕೊಂಡಾಗ ಇಲ್ಲ ಅನ್ನುವ ಪ್ರಮೇಯವಿದೆಯೆ? ಯೋಚಿಸಿ ತೀರ್ಮಾನಿಸಬೇಕಾದ ಅಗತ್ಯವಿದೆಯೆ? ಅಥವಾ ಇನ್ಯಾವ ರೀತಿಯದ್ದಾದರೂ ಸಂದೇಹ ಉಳಿದೀತೆ. ಬಕದಾಲ್ಭ್ಯರು ಮುಕ್ತ ಮನಸ್ಸಿನಿಂದ “ಹೇ ಪರಮಾತ್ಮಾ! ನೀನೇ ನನ್ನ ಇಚ್ಚೆಯಾಗಿರುವೆ. ನಾನು ಸದಾ ಕಾಲ ನಿನ್ನನ್ನು ಬಯಸುತ್ತಿದ್ದೇನೆ. ನಿನ್ನನ್ನು ಸೇರಲು ಬಯಸಿ ಹಾತೊರೆಯುವವನಿಗೆ ನಿನ್ನ ಬಯಕೆ – ನನ್ನ ಬಯಕೆ ಎಂಬ ಅಂತರ ಕಲ್ಪಿಸಲಾದೀತೆ. ನಿನ್ನ ಅಪ್ಪಣೆಯಂತೆ ಆಗಲಿ. ನಾನು ಅಶ್ವಮೇಧ ಯಾಗಕ್ಕೆ ಬರುತ್ತೇನೆ” ಎಂದು ಒಪ್ಪಿಕೊಂಡರು.
ಮುಂದುವರಿಯುವುದು…





















































































