ಭಾಗ – 708
ಭರತೇಶ ಶೆಟ್ಟಿ, ಎಕ್ಕಾರು

ಋಷಿವರ್ಯರು ಯಾರೂ ಉತ್ತರ ನೀಡದೆ ಸುಮ್ಮನೆ ಉಳಿದರು. ಯಾದವರಿಗೆ ಕೀಟಲೆ ಬುದ್ದಿಯ ಉತ್ಸಾಹ ತಡೆದುಕೊಳ್ಳಲಾಗಲಿಲ್ಲ. ಪರಿಹಾಸ್ಯ ಮಾಡುತ್ತಾ “ಹೇಳಿ ಹೇಳಿ… ಇಷ್ಟು ಚಿಕ್ಕ ವಿಷಯವನ್ನು ಕಣ್ಣಾರೆ ಕಾಣುತ್ತಿರುವ, ನಿಮ್ಮ ಎದುರಿಗಿರುವ ವಿಚಾರವನ್ನು ಹೇಳಲಾಗದೆ ಸುಮ್ಮನುಳಿದರೆ ನಿಮಗೆ ದಿವ್ಯಜ್ಞಾನವಿದೆ ಎಂದು ಹಾಡಿ ಹೊಗಳುವ ಲೋಕದ ಜನರಿಗೆ ಅಪವಾದ ಬರುತ್ತದೆ. ಪರಬ್ರಹ್ಮ ವಿಚಾರಗಳನ್ನು ತಿಳಿದಿರುವ ನಿಮಗೆ ಕೇವಲ ನಿಮ್ಮೆದುರು ಇರುವ ಮಾನವ ಗರ್ಭದ ಮಗು ಗಂಡೊ – ಹೆಣ್ಣೊ ಎಂದು ಹೇಳುವ ಶಕ್ತಿಯೂ ಇಲ್ಲವೆ? ವರ್ತಮಾನದ ಸಂಗತಿಯನ್ನು ಅರಿಯದ ನೀವು ಕಾಲಗರ್ಭದ ಭೂತ ಭವಿಷ್ಯಗಳನ್ನು ಹೇಳುವವರೆಂದು ನಂಬಿರುವ ಲೋಕಗಳು ಏನೆಂದು ಹೇಳಿಯಾರು” ಎಂದು ಲೇವಡಿ ಮಾಡುತ್ತಾ ತೀರ ನೀಚ ಬುದ್ದಿ ತೋರುತ್ತಾ ಮೂಢರಂತೆ ಪ್ರಶ್ನೆ ಮಾಡಿ ಗಹ ಗಹಿಸಿ ನಗತೊಡಗಿದರು.
ಕೋಪ, ತಾಪ, ಶಾಪಗಳನ್ನು ತನ್ನ ಚರಿತ್ರೆಯಲ್ಲಿ ಮೈಗೂಡಿಸಿಕೊಂಡು ಬೆಳೆದು ಬ್ರಹ್ಮರ್ಷಿಯಾಗಿರುವ ವಿಶ್ವಾಮಿತ್ರರಿಗೆ ಯಾದವರ ವರ್ತನೆ ಇರಿಸು ಮುರಿಸು ಉಂಟು ಮಾಡಿತು. ದೇವರಾದ ಕೃಷ್ಣ ಅವತರಿಸಿರುವ ಈ ವಂಶದವರು ಹೀಗೆ ಮಾಡಿದರೆಂದು ನಾವೂ ತಾಳ್ಮೆಗೆಟ್ಟರೆ ಅವರಿಗೂ ನಮಗೂ ವ್ಯತ್ಯಾಸವೇನು? ಎಂಬ ಗೊಂದಲ ಅವರಿಗಾಯಿತೊ ಏನೊ! ಸುಮ್ಮನುಳಿದು ನಾರದರ ಮುಖ ನೋಡಿದರು. ನಾರದರು ಏನೂ ಹೇಳದೆ ಅಸಹಾಯಕರಂತೆ ಕಣ್ವ ಮಹರ್ಷಿಗಳ ಮುಖ ನೋಡಿದರು. ಉಳಿದ ಋಷಿಗಳು, ತಪಸ್ವಿಗಳು ಇನ್ನೇನು ದುರಂತ ಕಾದಿದೆಯೊ ಎಂಬಂತೆ ಆತಂಕಕ್ಕೊಳಗಾಗಿ ಪರಸ್ಪರ ಮುಖ ಮುಖ ನೋಡಿಕೊಂಡರು. ಋಷಿಗಳ ಈ ರೀತಿಯ ನಡೆ ಯಾದವರ ಉತ್ಸಾಹಕ್ಕೆ ಮತ್ತಷ್ಟು ಬಲ ನೀಡಿತು. ಗಡ್ಡಬಿಟ್ಟು ಋಷಿಗಳೆಂದು ದುಡಿಯದೆ ತಿರುಗಿ ತಿನ್ನುವ ಇವರ್ಯಾರಿಗೂ ಏನೂ ಗೊತ್ತಿಲ್ಲ ಎಂದು ಹೇಳತೊಡಗಿದರು. ಈ ಮಾತಿಗೆ ಪುಷ್ಟಿ ನೀಡುವಂತೆ ಋಷಿಗಳೂ ಏನೂ ಹೇಳದೆ ಕುಳಿತು ಯೋಚಿಸುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಾ ಯಾದವರಲ್ಲೊಬ್ಬ “ನಮಗಲ್ಲ, ಲೋಕಕ್ಕೆ ಪೂಜಿತರಾದ ನೀವು ಹೀಗೆ ಮಾಡಿದರೆ ಸಮಸ್ಯೆಗೆ ಪರಿಹಾರವೇನು? ಯಾರಾದರು ಒಬ್ಬರು ಉತ್ತರ ಹೇಳುವ ಪ್ರಯತ್ನವನ್ನಾದರು ಮಾಡಿ! ಗೊತ್ತಿಲ್ಲದಿದ್ದರೆ ಒಬ್ಬರು ಗಂಡು ಎಂದೂ, ಇನ್ನೊಬ್ಬರು ಹೆಣ್ಣು ಎಂದೂ ಹೇಳಿ! ಆಗ ಇಬ್ಬರಲ್ಲಿ ಒಬ್ಬರದ್ದು ಸರಿಯಾಗಬಹುದು!” ಎಂದು ಏನೇನೊ ಮನ ಬಂದಂತೆ ಬಂದಂತೆ ಛೇಡಿಸುತ್ತಾ ಬಾಯಿ ಬೆಳೆಸಿದರು. ಕಣ್ವರನ್ನು ನೋಡುತ್ತಾ “ಮಹಾತ್ಮರೆ! ನೀವು ಮೊದಲು ಹೇಳಿ ಬಿಡಿ. ಮೊದಲ ಅವಕಾಶ ನಿಮ್ಮದಾಗಲಿ” ಎಂದು ಋಷಿಗಳು ಏನೂ ಅಲ್ಲ ಎಂಬಂತೆ ಎಲ್ಲೆ ಮೀರಿ ವರ್ತಿಸತೊಡಗಿದರು. ವಿಕಾರವಾಗಿ ವಿಕಟ ನಗೆ ಬೀರುತ್ತಾ, ಚೇಷ್ಟೆ ಮಾಡುತ್ತಾ ನಿಂದನಾ ವಾಕ್ಯಗಳನ್ನು ಆಡುತ್ತಾ ತಪೋಧನರಾದ ಋಷಿಗಳ ತಾಳ್ಮೆ ಪರೀಕ್ಷೆ ಮಾಡತೊಡಗಿದರು.
ಇನ್ನು ಇವರನ್ನು ಹೀಗೇ ಬಿಟ್ಟರೆ ಮೌನವಾಗಿರುವವರಷ್ಟೆ ಮುನಿಗಳು ಎಂದಾದೀತು. ಮುನಿಗಳು ಮುನಿದರೆ ಪರಿಹಾರ ಇಲ್ಲ ಎಂದು ದೇವರ ವಂಶಜರಿಗೆ ಅರ್ಥವಾಗಲಿ ಎಂದು ಭಾವಿಸಿದರೊ! ಇಲ್ಲಾ ವಿನಾಶ ಕಾಲಕ್ಕೆ ಈ ರೀತಿಯ ವಿಪರೀತ ವರ್ತನೆಯೊ! ಅಂತೂ ಅಂತ್ಯ ಕಾಲ ಕೂಡಿ ಬಂದಾಗಿದೆ. ಕೇವಲ ಕಾಕತಾಳೀಯವಾಗಿ ಈ ಪ್ರಕರಣ ಅಂತಹ ಕಾಲಚಕ್ರದ ಕೈಗೊಂಬೆಯಾಗಿದೆಯೊ? ಯುಗಧರ್ಮದ ಚಲನೆಗೆ ಮುಹೂರ್ತವಾಗಿ ಮೂರ್ತ ಸ್ವರೂಪ ತಳೆದಿದೆಯೊ! ಒಂದೂ ಅರ್ಥವಾಗುತ್ತಿಲ್ಲ. ಕಣ್ವ ಮಹರ್ಷಿಗಳ ಕಣ್ಣು ಕೆಂಪಡರಿ ಕಿಡಿಕಾರುತ್ತಿವೆ. ಎದ್ದು ನಿಂತು ಹೆಣ್ಣು ವೇಷದವನ ಮುಂದೆ ಬಂದರು. ಅಬ್ಬರಿಸುವ ಏರುಸ್ಥಾಯಿ ಸ್ವರದಲ್ಲಿ “ಹೇ ಮೂರ್ಖರೆ ನಮಗೆಲ್ಲವೂ ಗೋಚರಿಸುತ್ತಿದೆ. ಕೇವಲ ಈ ಗರ್ಭದ ಕಪಟ ನಾಟಕದ ಕಥೆಯಷ್ಟೆ ಅಲ್ಲ, ಈ ರೂಪದಲ್ಲಿ ನಿಂತವನ ಕಥೆಯನ್ನೂ ಹೇಳುತ್ತೇನೆ. ಏನು ನಾವು ಏನೂ ಅರಿಯದವರು? ನಮ್ಮನ್ನು ಪೂಜಿಸುವ ಜನರಿಗೆ ಲೋಕಾಪವಾದ ಬರುತ್ತದೆಯೆ? ನಿಮ್ಮ ಮರುಳು ಬುದ್ದಿಗೆ ಏನನ್ನಬೇಕು?” ಎಂದು ಹೇಳುತ್ತಾ ಸಾಂಬನನ್ನು ಎದುರು ಕರೆದರು. “ನೀನು ಗರ್ಭ ತಳೆಯಲು ಹೆಣ್ಣಲ್ಲ. ನೀನು ಹೇಗೆ ಹುಟ್ಟಿದೆ ಗೊತ್ತಿದೆಯಾ ನಿನಗೆ? ಲೋಕಾಪವಾದ ನಮಗಲ್ಲ, ನಿನ್ನ ಜನನದಲ್ಲಿ ಹಿನ್ನೆಲೆಯಾಗಿ ಇದೆ. ತನಗಂಟಿದ ಲೋಕಾಪವಾದ ತೊಳೆಯಲು ಹೊರಟ ಪರಮಾತ್ಮನ ಲೀಲೆ ನಿನ್ನ ಜನನಕ್ಕೆ ಕಾರಣವಾದದ್ದು. ಹಿಂದೆ ಒಮ್ಮೆ ಶ್ರೀಕೃಷ್ಣನು ಶ್ಯಮಂತಕ ಮಣಿಯ ಕಳ್ಳ ಎಂಬ ಅಪವಾದ ಹೊತ್ತು, ಮಹಾರಾಜ ಸತ್ರಾಜಿತನ ಸೋದರ ಪ್ರಸೇನನ ಮರಣದ ರಹಸ್ಯ ಭೇದಿಸಲು ಹೊರಟಿದ್ದನು. ಆ ಸಮಯ ಯುಗಪುರುಷನಾದ ಜಾಂಬವನ ಗುಹೆಯನ್ನು ಹೊಕ್ಕು, ವಜ್ರ ಮುಷ್ಟಿಯ ಜಾಂಬವನೊಡನೆ ಸೆಣಸಾಡಿ ತ್ರೇತಾ ಯುಗದ ಶ್ರೀರಾಮ, ದ್ವಾಪರ ಯುಗದ ಶ್ರೀಕೃಷ್ಣ ಎರಡೂ ಸ್ವಯಂ ನಾನು ಎಂದು ಶ್ರೀರಾಮಕೃಷ್ಣ ನಾಗಿ ದರುಶನ ನೀಡಿ, ಆ ಬಳಿಕ ಜಾಂಬವತಿಯನ್ನು ವರಿಸಿದ್ದನು. ಜಾಂಬವಂತನಿಂದ ಶ್ಯಮಂತಕ ಮಣಿಯನ್ನು ಪಡೆದು ಅದರ ಅಪಹರಣ, ಪ್ರಸೇನನ ಮರಣ, ಅದಕ್ಕೆ ಕಾರಣ ಹೀಗೆ ಎಲ್ಲವನ್ನೂ ಅನಾವರಣಗೊಳಿಸಿದ್ದನು. ಕಾಡ ಬದಿಯ ರೈತರಿಗೆ ವನ್ಯ ಮೃಗಗಳ ಉಪಟಳವಿದೆ ಎಂದು ಮಹಾರಾಜ ಸತ್ರಾಜಿತನಿಗೆ ದೂರು ಬಂದಿತ್ತು. ಬೇಟೆಗೆ ಹೊರಟ ಅಣ್ಣನನ್ನು ತಡೆದು ಚಿಕ್ಕ ಕೆಲಸಕ್ಕೆ ರಾಜನೇಕೆ? ನಾನು ಹೋಗುವೆ ಎಂದು ಅರಸನ ತಮ್ಮನಾದ ಪ್ರಸೇನ ತಾನು ಬೇಟೆಗೆ ಹೊರಟಿದ್ದ. ಆಗ ಸತ್ರಾಜಿತ ತನಗೆ ಸೂರ್ಯದೇವನಿಂದ ಪ್ರದತ್ತವಾದ ದಿವ್ಯ ಶ್ಯಮಂತಕ ಮಣಿಯನ್ನು ರಕ್ಷಣೆಗಾಗಿ ನೀಡಿದ್ದ. ಕಾಡಿನಲ್ಲಿ ಬೇಟೆಯಾಡುತ್ತಾ ಎದುರಾದ ಒಂದು ಘೋರ ಸಿಂಹದ ಪಂಜಿನಾಘಾತಕ್ಕೆ ಪ್ರಸೇನ ಹತ ಪ್ರಾಣನಾಗಿದ್ದನು. ಆ ಶ್ಯಮಂತಕ ಮಣಿ ಸಿಂಹದ ಪಾಲಾಗಿತ್ತು. ನಂತರ ಜಾಂಬವಂತ ಸಿಂಹವನ್ನು ಕೆಡಹಿ ಮಣಿಯನ್ನು ತನ್ನದಾಗಿಸಿದ್ದನು. ಈ ಪ್ರಕರಣ ಭೇದಿಸಿದ ಮಹಿಮಾನ್ವಿತ ದೇವರಿಂದ ಜಾಂಬವತಿಯಲ್ಲಿ ಜನಿಸಿದ ಮಗ ನೀನು. ಹೆಣ್ಣು ವೇಷದಲ್ಲಿರುವ ಪುರುಷನಾದ ನಿನ್ನ ಹೆಸರು ಸಾಂಬ, ಈಗ ರೂಪ ಬದಲಿಸಿ ಮುರಿದ ಒನಕೆ ತುಂಡುಗಳನ್ನು ಹೊಟ್ಟೆಯಲ್ಲಿ ಕಟ್ಟಿಕೊಂಡು ಗರ್ಭಿಣಿಯೆಂದು ಸುಳ್ಳು ಹೇಳುತ್ತಾ, ಹುಟ್ಟುವ ಮಗುವಿನ ಲಿಂಗ ಹೇಳಿ ಎಂದು ಮುನಿಕುಲಕ್ಕೆ ಅಪಮಾನ ಮಾಡಲು ಮುಂದಾಗಿದ್ದೀರಾ? ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಪರಿಭಾವಿಸಿದಿರಾ? ನಿಮಗೆ ಋಷಿಗಳ ಶಕ್ತಿಯ ಅರಿವಾಗ ಬೇಕು. ಅತಿಯಾದರೆ ಅಮೃತವೂ ವಿಷ ಸದೃಶವಾಗುತ್ತದೆ. ನನ್ನ ತಪಸ್ಶ್ಯಕ್ತಿಯ ಬಲದಲ್ಲಿ ಹೊಮ್ಮಲಿರುವ ಭವಿಷ್ಯ ಕೇಳಿರಿ. ಈ ಸಾಂಬನ ಗರ್ಭದಿಂದ ಉಕ್ಕಿನಂತಹ ಒನಕೆ ಜನಿಸಲಿ. ಆ ಒನಕೆ ಅಸಾಮಾನ್ಯ ಶಕ್ತಿ ಸಂಪನ್ನವಾಗಲಿ. ಎಷ್ಟು ಪ್ರಬಲವಾಗುತ್ತದೆ ಎಂದರೆ ಅದು ಮುಂದೆ ಯಾದವರ ವಂಶ ನಿರ್ಮೂಲನೆ ಮಾಡಿ ಬಿಡಲಿ. ಯದುವೃಷ್ಣಿಗಳ ವಂಶ ನಿರ್ವಂಶವಾಗಲಿ, ಸರ್ವನಾಶವಾಗಲಿ” ಎಂದು ನುಡಿದು ಬಿಟ್ಟರು.
ಋಷಿಗಳೆಲ್ಲರೂ ಎದ್ದು ಅರೆಕ್ಷಣವೂ ಅಲ್ಲಿ ನಿಲ್ಲದೆ ಹೊರಟು ಹೋದರು. ಯಾದವ ವೀರರು ತಮ್ಮ ಕುಚೋದ್ಯದಿಂದಾಗಿ ಕುಲನಾಶಕವಾದ ಶಾಪವನ್ನು ಪಡೆದುಕೊಂಡರು. ಈ ಯಾದವರ ವರ್ತನೆ ಹೀಗಿರುವುದು ಆಶ್ಚರ್ಯಕರವೇನೂ ಅಲ್ಲ. ಇವರಿಗೆ ತಮ್ಮತನ, ವಂಶ, ಏಕಸೂತ್ರ ಎಂಬ ನೆಲೆಯಾಗಲಿ, ಅಂತಹ ಭಾವನೆ ಬರುವ ಸಂಸ್ಕಾರವಾಗಲಿ ಇರಲಿಲ್ಲ. ಎಲ್ಲೆಲ್ಲೊ ದನಗಾಹಿಗಳಾಗಿ ತಿರುಗಾಡುತ್ತಾ, ಅಥವಾ ವೈಶ್ಯ, ವ್ಯಾಪಾರಿ, ಅಲೆಮಾರಿಗಳಾಗಿ ಬದುಕು ಸಾಗಿಸುತ್ತಿದ್ದ ಜನರು ಇವರು. ಯಾವಾಗ ಶ್ರೀಕೃಷ್ಣ ಬಲರಾಮರು ಜನಿಸಿದರೊ ಆನಂತರ ಯದು, ವೃಷ್ಣಿಗಳು ತಮ್ಮ ಜೀವನ ಶೈಲಿ ಬದಲಿಸಿಕೊಂಡು ಸಂಸ್ಕಾರ, ಸಂಸಾರ ಎಂಬ ಸೂತ್ರದಡಿ ನಿಯಮ ನಿಯತ್ತಿನಿಂದ ಬದುಕಲು ಆರಂಭಿಸಿದವರು. ಒಂದು ಕಡೆ ನಿಶ್ಚಯವಾಗಿ ನೆಲೆ ನಿಂತು ತಾವು ಒಂದು ವಂಶ ಎಂದು ಪ್ರವರ್ಧಮಾನಕ್ಕೆ ಬಂದವರು. ಕೃಷ್ಣನ ಲೀಲಾಮಾನುಷ ಕಥನಗಳು, ದುಷ್ಟರ ನಿಗ್ರಹ, ರಾಕ್ಷಸರ ವಧೆ, ತಾನು ನಿಂತು ಸೂತ್ರಧಾರಿಯಾಗಿ ಅದೆಷ್ಟು ದುರುಳರ ಪ್ರಾಣ ಹರಣಗಳನ್ನು ನಿಯಂತ್ರಿಸಿರುವನೆಂದು ಯಾರಿಗೂ ಲೆಕ್ಕ ಹಾಕಲಾಗದು. ಅಲೆಮಾರಿಗಳಾದ ಯಾದವರು ಯುದ್ಧ ನೈಪುಣ್ಯತೆ ಕಲಿತು ಕ್ಷತ್ರಿಯೋಚಿತ ವೀರಪುರುಷರಾದುದು ಶ್ರೀ ಕೃಷ್ಣನ ಮಹಿಮೆಯಿಂದ. ಯಾದವರು ಗಣ್ಯ ವ್ಯಕ್ತಿತ್ವವನ್ನು ಸಂಪಾದಿಸಿದ್ದು ಆನಂತರ. ದುಷ್ಟರು ನಾಶವಾಗಿ ಹೋದರೂ ದುಷ್ಟಶಕ್ತಿ ಇಲ್ಲಿಯೆ ಉಳಿದು ಹೋಯಿತೊ? ರಾಕ್ಷಸರು ಅಳಿದಿರುವುದರಿಂದ ಇಲ್ಲಿ ಉಳಿದಿರುವ ಯಾದವರೊಳಗೆ ಅಸುರ ಪ್ರವೃತ್ತಿ ಕ್ರೋಢೀಕರಣಗೊಂಡಿದೆಯೊ? ಯಾದವರು ಮತ್ತೆ ಅದೇ ರೀತಿಯ ದುರ್ವರ್ತನೆ ತೋರಿ ವಿನಾಶಕ್ಕೆ ನಾಂದಿ ಹಾಡಿ ಕೊಂಡಿದ್ದಾರೆ. ಸ್ವಯಂಕೃತ ಅಪರಾಧಕ್ಕಾಗಿ ಮರುಗುತ್ತಾ, ಕೊರಗುತ್ತಾ ವ್ಯಥೆಗೊಳಗಾಗಿದ್ದಾರೆ. ನಾವು ಕೆಲವೇ ಕೆಲವರ ದುರ್ಬುದ್ದಿಯಿಂದ ಅಷ್ಟ ಕುಲಗಳಾಗಿ ಬೆಳೆದು ಸಾಮ್ರಾಟರಾಗಿರುವ ಯಾದವ ವಂಶ, ಮಹಾ ವಿಕ್ರಮಿಗಳಾದ ವೀರರ ಸಂದೋಹ ಎಲ್ಲವೂ ವಿನಾಶವಾಗಲಿದೆ ಎಂದು ಕಣ್ಣೀರ್ಗರೆದರು. ಆದರೇನು ಮಾಡುವುದು ಕಾಲ ಮಿಂಚಿ ಹೋಗಿತ್ತು. ಭಗವಂತನ ಸಂಕಲ್ಪವೂ ಅದೇ ಆಗಿತ್ತೋ? ಪೂರಕ ಎಂಬಂತೆ ಈ ರೀತಿ ಆಗಿದೆಯೊ! ಇದಕ್ಕೂ ಮೊದಲು ಪ್ರಾಪ್ತವಾಗಿದ್ದ ಒಂದು ಶಾಪ ಸಾಕ್ಷಾತ್ಕಾರಕ್ಕಾಗಿ ಕಾಯುತ್ತಿದೆಯಲ್ಲವೆ? ಕುರು ಮಾತೆ ಗಾಂಧಾರಿ “ಚಂದ್ರವಂಶದ ರಾಜಕುಮಾರರು ಅವರವರು ಹೊಡೆದಾಡಿ ಸಾಯುವಂತೆ ಮಾಡಿದೆಯಾ ಕೃಷ್ಣಾ? ನಿನ್ನ ಯಾದವ ವಂಶವೂ ಮುಂದೊಂದು ದಿನ ಪರಸ್ಪರ ಹೊಡೆದಾಡಿಕೊಂಡು ಸಾಯುವಂತಾಗಲಿ” ಎಂದು ಶಪಿಸಿದ್ದಳು
ಅಸುರಾರಿ ಮಾಡಿಕೊಂಡು ಬಂದಿರುವುದು ಭೂಭಾರಹರಣದ ಕಾರ್ಯ. ಆತನನ್ನು ಕೇವಲ ಯಾದವ ವಂಶದವ ಎಂದರೆ ಅದು ಲೌಕಿಕ ತಿಳುವಳಿಕೆಯಾದೀತು. ಲೋಕ ಲೋಕಗಳ ಪಾಲಕನಾದ ಆತ ಒಂದು ವರ್ಗಕ್ಕೆ ಸೀಮಿತವಾಗಿ ಉಳಿಯಲಾದೀತೆ? ನೆರೆ ಬಂದಾಗ ಎಲ್ಲವೂ ಕೊಚ್ಚಿ ಹೋಗುವಂತೆ ಯುಗಪರಿವರ್ತನೆಯಾಗಲು, ಕಾಲಚಕ್ರ ತಿರುಗಲು ಈ ಸಂಧಿಕಾಲದಲ್ಲಿ ವ್ಯವಸ್ಥೆಯಾಗಬೇಕಲ್ಲವೇ? ಹಾಗಾಗಿ ಎಲ್ಲವೂ ಆಗಬೇಕಾಗಿರುವಂತೆ ಆಗಿ ಹೋಗುತ್ತಲಿದೆ.
ಶಾಪಗ್ರಸ್ಥರಾದ ಯಾದವರು ಹೆದರಿ ಕಂಗಾಲಾಗಿದ್ದಾರೆ. ಮುಂದೇನು ಎಂಬ ಭಯದಿಂದ ವಂಶದ ರಕ್ಷಣೆ, ಪರಿಹಾರ ದಾರಿ ಕೇಳಲು ಬಲರಾಮನ ಬಳಿಗೆ ಓಡಿದರು.
ಮುಂದುವರಿಯುವುದು…..

























































































