
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೀರ್ಘಕಾಲ ದೈಹಿಕ ಸಂಬಂಧ ಹೊಂದಿದ್ದ ಬಳಿಕ ಮದುವೆಗೆ ನಿರಾಕರಿಸಿದ ಮಾತ್ರಕ್ಕೆ ಅದನ್ನು ಸುಳ್ಳು ಭರವಸೆ ನೀಡಿ ಮಾಡಿದ ವಂಚನೆ ಎಂದು ಪರಿಗಣಿಸಲಾಗದು. ಪ್ರೀತಿಯ ಸಂಬಂಧವು ಜಾತಿ ತಾರತಮ್ಯದಂತಹ ಕಾರಣಗಳಿಂದ ಮುರಿದುಬಿದ್ದರೂ ಅದನ್ನು ವಂಚನೆ ಎನ್ನಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬಿಹಾರ ಮೂಲದ ವೈದ್ಯ ಡಾ. ರಾಮದಾಸ್ ಪಾಟೀಲ್ ವಿರುದ್ಧ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಇಬ್ಬರೂ ವಯಸ್ಕರು ಸುಮಾರು ಏಳು ವರ್ಷ ಪರಸ್ಪರ ಒಪ್ಪಿಗೆಯಿಂದ ಸಂಬಂಧ ಹೊಂದಿದ್ದರು. ಸಂಬಂಧ ಮುರಿದುಬಿದ್ದಿದೆ ಎಂಬ ಕಾರಣಕ್ಕೆ ಆರಂಭದಿಂದಲೇ ವಂಚಿಸುವ ಉದ್ದೇಶವಿತ್ತು ಎಂದು ನಿರ್ಧರಿಸಲಾಗದು. ದೀರ್ಘಕಾಲದ ಒಪ್ಪಿಗೆಯ ಸಂಬಂಧಗಳು ಕಹಿ ಅಂತ್ಯ ಕಂಡಾಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 ಅನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಮತ್ತು ದೂರುದಾರೆ ಇಬ್ಬರೂ ವೈದ್ಯರಾಗಿದ್ದು, ಮಂಗಳೂರಿನ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. 2017ರಲ್ಲಿ ಬೀದರ್‌ನಲ್ಲಿ ಸ್ನೇಹಿತರ ಮೂಲಕ ಪರಿಚಯವಾದ ಇವರ ನಡುವೆ ಸ್ನೇಹ ಬೆಳೆದು, ಬಳಿಕ ಪ್ರೇಮ ಸಂಬಂಧವಾಗಿ ಮುಂದುವರಿದಿತ್ತು.
2017ರಿಂದ 2023ರವರೆಗೆ ಇಬ್ಬರ ನಡುವೆ ದೈಹಿಕ ಸಂಬಂಧವಿತ್ತು. ಆದರೆ, ದೂರುದಾರೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಕಾರಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಬಳಿಕ ಆರೋಪಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದರು. ಇದರಿಂದ ದೂರುದಾರೆ 2025ರಲ್ಲಿ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.






















