
ಹೊಸದಿಲ್ಲಿ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಹಾನಗರಗಳ ಆಸ್ಪತ್ರೆಗಳ ಕೊಠಡಿ ದರವನ್ನು ಆಯಾ ಆಸ್ಪತ್ರೆಯ ಸಮೀಪದ ತ್ರಿತಾರಾ ಹೋಟೆಲ್‌ಗಳ ಸರಾಸರಿ ಕೊಠಡಿ ದರಕ್ಕೆ ಸೀಮಿತಗೊಳಿಸುವಂತೆ ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸಲಹೆ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ‘ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳ ಕೈಗೆಟುಕುವಿಕೆ ಮತ್ತು ಲಭ್ಯತೆ’ ಕುರಿತು ತನ್ನ 176ನೇ ವರದಿಯನ್ನು ಆಗಸ್ಟ್ 7ರಂದು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದೆ. ಅನಿರೀಕ್ಷಿತ ಆಸ್ಪತ್ರೆ ಬಿಲ್‌ಗಳಿಂದ ರೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆ.
ಹೃದಯ ಕಾಯಿಲೆ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸಾ ಅವಧಿ ಮತ್ತು ವೆಚ್ಚವನ್ನು ಮುಂಚಿತವಾಗಿ ನಿಖರವಾಗಿ ಅಂದಾಜಿಸುವುದು ಕಷ್ಟ. ಹೀಗಾಗಿ ಕೊಠಡಿ ದರದಲ್ಲಿ ನಿವಾಸಿ ವೈದ್ಯರು, ನರ್ಸಿಂಗ್, ಬಳಸಿ ಎಸೆಯುವ ವೈದ್ಯಕೀಯ ಸಾಮಗ್ರಿಗಳು, ಊಟ ಮತ್ತು ಲಾಂಡ್ರಿ ವೆಚ್ಚಗಳನ್ನು ಒಳಗೊಳ್ಳುವಂತೆ ಸಮಿತಿ ಸಲಹೆ ನೀಡಿದೆ.
ಸಂಕೀರ್ಣ ಅಥವಾ ದೀರ್ಘಾವಧಿಯ ಚಿಕಿತ್ಸೆಯನ್ನು ಆರಂಭಿಸುವ ಮುನ್ನ ರೋಗಿಗಳಿಗೆ ಒಟ್ಟು ಚಿಕಿತ್ಸಾ ವೆಚ್ಚದ ಅಂದಾಜು ನೀಡುವುದನ್ನು ತೃತೀಯ ಹಂತದ ಆರೈಕೆ ಆಸ್ಪತ್ರೆಗಳಿಗೆ ಕಡ್ಡಾಯಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ರೋಗಿಗಳು ಹಾಗೂ ಕುಟುಂಬಗಳಿಗೆ ವೆಚ್ಚದ ಮಾಹಿತಿ ನೀಡಲು ಆಸ್ಪತ್ರೆಗಳಲ್ಲಿ ಆರ್ಥಿಕ ಮಾರ್ಗದರ್ಶಕರನ್ನು ನೇಮಿಸುವಂತೆಯೂ ಸೂಚಿಸಿದೆ.
ದೇಶದ ಸುಮಾರು ಶೇ.70ರಷ್ಟು ಜನರು ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಅವಲಂಬಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ 5ರಿಂದ 10 ಪಟ್ಟು ದುಬಾರಿಯಾಗಿರುವುದರಿಂದ, ಜನರ ಸ್ವಂತ ಜೇಬಿನ ವೆಚ್ಚ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.
ವೈದ್ಯಕೀಯ ಹಣದುಬ್ಬರ ಶೇ.12ರಿಂದ 13ರಷ್ಟಿರುವ ಹಿನ್ನೆಲೆಯಲ್ಲಿ, ಚಿಕಿತ್ಸಾ ವೆಚ್ಚದಲ್ಲಿ ಅನಿಯಂತ್ರಿತ ಏರಿಕೆಯನ್ನು ತಡೆಯಲು ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಮತ್ತು ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.




























































