ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿ ಅರೆಸ್ಟ್

ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣದ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯತಮ ಚೇತನ್ ಚೌಧರಿ ಈಗಾಗಲೇ ಬಂಧನಕ್ಕೊಳಗಾಗಿದ್ದು, ಇದೀಗ ಚೇತನ್‌ನ ಸ್ನೇಹಿತ ರಿತೇಶ್ ಹಂಗೆನನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಯ ಸಂಚು ರೂಪಿಸುವಲ್ಲಿ ರಿತೇಶ್ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ತನಿಖೆ ವೇಳೆ ವಶಪಡಿಸಿಕೊಂಡ ಮೊಬೈಲ್‌ಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ ರಿತೇಶ್‌ನ ಪಾತ್ರ ಬೆಳಕಿಗೆ ಬಂದಿದೆ. ಕೇತನ್‌ನನ್ನು ಕೋಟೆಯಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡುವುದು ಹಾಗೂ ಸಾಕ್ಷ್ಯ ನಾಶಪಡಿಸುವ ಕುರಿತು ಚಾಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಜೂನ್ 18ರಂದು ಸಿಯಾ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇತನ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು. ಆದರೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮರುತನಿಖೆ ನಡೆಸಿದಾಗ ಸಿಯಾ ಮತ್ತು ಚೇತನ್ ಹತ್ಯೆ ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು.
ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದು, ಜನವರಿಯಿಂದ ಜೂನ್‌ವರೆಗೆ 2,000ಕ್ಕೂ ಹೆಚ್ಚು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದರು ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




































