
ಬೆಂಗಳೂರು: 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 319 ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಅವಧಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸೆಪ್ಟೆಂಬರ್ 7, 2026ರವರೆಗೆ ವಿಸ್ತರಿಸಿದೆ.
ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 319 ಹುದ್ದೆಗಳಿಗೆ (ಉಳಿಕೆ ಮೂಲ ವೃಂದ 297 ಹಾಗೂ ಹೈದ್ರಾಬಾದ್-ಕರ್ನಾಟಕ ವೃಂದ 22) ಜುಲೈ 31ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಕೆಗೆ ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ಅವಕಾಶ ನೀಡಲಾಗಿತ್ತು.
ಜಾತಿ, ಆದಾಯ ಹಾಗೂ ಒಳ ಮೀಸಲಾತಿ ಪ್ರಮಾಣ ಪತ್ರಗಳ ವಿತರಣೆಯಲ್ಲಿ ನಾಡಕಛೇರಿ ಮತ್ತು ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿತ್ತು. ಅಲ್ಲದೆ, ಗ್ರಾಮೀಣ ಭಾಗದ ಅಭ್ಯರ್ಥಿಗಳು ಇಂಟರ್‌ನೆಟ್ ಸಂಪರ್ಕದ ಕೊರತೆಯಿಂದ ಶುಲ್ಕ ಪಾವತಿಸಲು ತೊಂದರೆ ಅನುಭವಿಸಿದ್ದರು.
ಈ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಕೊನೆಯ ದಿನಾಂಕ ವಿಸ್ತರಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದರು.
ಅಭ್ಯರ್ಥಿಗಳ ಮನವಿಯನ್ನು ಪರಿಶೀಲಿಸಿದ ಕೆಪಿಎಸ್‌ಸಿ, ಅವರ ಹಿತದೃಷ್ಟಿಯಿಂದ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 7, 2026ರವರೆಗೆ ವಿಸ್ತರಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ. ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.






















































































