ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಶುಭದ ರಾವ್

ಕಾರ್ಕಳ: SIR ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕೆಪಿಸಿಸಿ 32ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಅದೇ ರೀತಿ, ಯುವ ಕಾಂಗ್ರೆಸ್ನ ಕಾರ್ಯಸೂಚಿಯಂತೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಉಡುಪಿ ಜಿಲ್ಲೆಯ ನಾಲ್ವರು ಯುವ ಕಾಂಗ್ರೆಸ್ ಅಧ್ಯಕ್ಷರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಅವರಲ್ಲಿ ಕಾರ್ಕಳದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ ಅವರೂ ಒಬ್ಬರು.
ಸೂರಜ್ ಶೆಟ್ಟಿ ಅವರ ತಂದೆಯ ಅನಾರೋಗ್ಯದ ಕಾರಣ ಡಯಾಲಿಸಿಸ್ ಚಿಕಿತ್ಸೆಯ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಾದ ಅನಿವಾರ್ಯತೆ ಇದೆ. ತಂದೆಯ ಆರೈಕೆ ಮತ್ತು ಅವರ ಆರೋಗ್ಯದ ಕಾಳಜಿ ವಹಿಸುವುದು ಮಗನಾಗಿ ಅವರ ಕರ್ತವ್ಯವೂ ಆಗಿದೆ. ಈ ಕಾರಣದಿಂದ ಪಕ್ಷದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ವಿಚಾರವನ್ನು ಅವರು ಈಗಾಗಲೇ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗಮನಕ್ಕೆ ತಂದಿದ್ದಾರೆ.
ಪಕ್ಷದ ಚಟುವಟಿಕೆಗಳ ಜೊತೆಗೆ ತಂದೆಯ ಆರೈಕೆಯೂ ಅವರ ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದ ಸೂರಜ್ ಶೆಟ್ಟಿ ಅವರ ತಾತ್ಕಾಲಿಕ ಅಮಾನತು ಪಕ್ಷದ ಶಿಸ್ತಿನ ಕ್ರಮದ ಒಂದು ಭಾಗವಾಗಿದ್ದು, ಇದನ್ನು ಹೊರತುಪಡಿಸಿ ಯಾವುದೇ ಬೇರೆ ಕಾರಣ ಅಥವಾ ಗೊಂದಲವಿಲ್ಲ.
ಈ ಕುರಿತು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಒಳಗಾಗಬಾರದು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




































