
ತಿರುವನಂತಪುರ: ಗ್ರಾಮೀಣ ಪ್ರದೇಶದ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ ಮತ್ತೊಂದು ಸಿಲಿಂಡರ್ ಪಡೆಯಲು 45 ದಿನ ಕಾಯಬೇಕಿಲ್ಲ. ನಗರ ಪ್ರದೇಶದಂತೆ ಗ್ರಾಮೀಣ ಗ್ರಾಹಕರಿಗೂ 25 ದಿನಗಳ ಬಳಿಕ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಸಿಲಿಂಡರ್ ಬುಕಿಂಗ್ ನಡುವಿನ ಅವಧಿಯನ್ನು ಒಂದೇ ರೀತಿ ನಿಗದಿಪಡಿಸುವಂತೆ ತೈಲ ಮಾರಾಟ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಸೋಮವಾರ ಫೇಸ್‌ಬುಕ್ ಮೂಲಕ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬುಕಿಂಗ್ ಅಂತರವನ್ನು ಜಾರಿಗೆ ತರಲಾಗಿತ್ತು. ನಗರ ಪ್ರದೇಶಗಳಲ್ಲಿ ಈ ಅವಧಿ 25 ದಿನಗಳಾಗಿತ್ತು.
ಸದ್ಯ ಎಲ್‌ಪಿಜಿ ಪೂರೈಕೆ ಸುಧಾರಿಸಿದ್ದು, ಬಾಕಿ ಇರುವ ಸಿಲಿಂಡರ್‌ಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಬುಕಿಂಗ್ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಿಸಿದೆ ಎಂದು ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.




































