
ದೀಪಾವಳಿಯ ಸಡಗರದ ಈ ದಿನ ಕಾರ್ಕಳದ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಸಾಲು ದೀಪಗಳಿಂದ ಮಿನುಗಿತು. ಸಾಂಪ್ರದಾಯಿಕ ರೀತಿಯಲ್ಲಿ ತುಳುನಾಡಿನಲ್ಲಿ ನಡೆಯುವ ಬಲಿಂದ್ರ ಪೂಜೆಗೆ ಶಾಲೆ ಸಾಕ್ಷಿಯಾಯಿತು. ಇಲ್ಲಿ ಆಚರಿಸುವಂತೆ ಬಾಳೆದಿಂಡು ಶೃಂಗರಿಸಿ, ಅದೇ ರೀತಿ ದೀಪ ಕಂಬ ನೆಟ್ಟು ಎರಡು ರೀತಿಯಲ್ಲಿ ಆಚರಿಸುವ ವಿಧಾನವನ್ನು ಮಕ್ಕಳು ಆನಂದಿಸಿದರು. ಬಲೇಂದ್ರನನ್ನು ಕರೆದು, ಕೂ ಹಾಕಿದ ಕ್ಷಣವನ್ನಂತು ವಿದ್ಯಾರ್ಥಿಗಳು ಮೈಮರೆತು ಆಚರಿಸಿದರು. ಕೂ ಶಬ್ದವಂತು ಮುಗಿಲು ಮುಟ್ಟುವಂತಿತ್ತು. ನಂತರ ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ಈ ರೀತಿ ದೀಪಾವಳಿಯ ಸಂಭ್ರಮದ ಸಡಗರ ಜೇಸಿ ಶಾಲೆ ವಿದ್ಯಾರ್ಥಿಗಳನ್ನು ಆನಂದ ತುಂಬಿದವರನ್ನಾಗಿಸಿತು. ಮುಂಡಾಸು ಧರಿಸಿದ ವಿದ್ಯಾರ್ಥಿಗಳು ಹಳ್ಳಿಯ ಗೊಂಡೆ ಹೂ, ಕೇಪುಳ ಹೂ, ಜಮುಗ ಸೊಪ್ಪು ಹಾಗೂ ಕುರ್ಡಿ ಹೂ ಇಟ್ಟು, ಅವಲಕ್ಕಿ ಬಡಿಸಿ, ವೀಳ್ಯದೆಲೆ ಅಡಿಕೆ ಇಟ್ಟು ಅತ್ಯಂತ ಶ್ರದ್ಧೆಯಿಂದ ಭಕ್ತಿಯಿಂದ ಬಲಿಯೇಂದ್ರನನ್ನು ಆರಾಧಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಆಡಳಿತಾಧಿಕಾರಿ ಯವರು, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.





















































































