
ಬೆಂಗಳೂರು: ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಚೇರಿಯಿಂದಲೇ ಬಿಜೆಪಿ ಆರಂಭಿಸಲಿ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ್ಯ ದೊರೆತ ಹಲವು ವರ್ಷಗಳ ಬಳಿಕ ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನಗಳಲ್ಲಿ ಸ್ವಯಂಸೇವಕರು ತ್ರಿವರ್ಣ ಧ್ವಜ ಹಿಡಿದು ಸಾಗಿರುವುದನ್ನು ಯಾರಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ತನ್ನ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ಬದಲು ಭಗವಾ ಧ್ವಜಕ್ಕೆ ಆದ್ಯತೆ ನೀಡಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಇಷ್ಟು ವರ್ಷಗಳೇಕೆ ಬೇಕಾಯಿತು ಎಂದೂ ಪ್ರಶ್ನಿಸಿದ್ದಾರೆ.
‘ಗಣವೇಶದಲ್ಲಿರುವ ಸ್ವಯಂಸೇವಕರು ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಿಡಿದು ಸಾಗುವುದನ್ನು ನಾನು ನೋಡಿಲ್ಲ. ಆದರೆ ದೇಶಭಕ್ತಿಯ ಪ್ರಮಾಣಪತ್ರಗಳನ್ನು ಹಂಚುತ್ತಾ ತಿರುಗುತ್ತಾರೆ’ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಮನವಿ ಮಾಡಿದ್ದರು.




























































