
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಬಳಸಿದ ‘ದಿಮಾಗಿ ನಕ್ಸಲ್’ ಪದಕ್ಕೆ ನಟ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವವರು ಹಾಗೂ ಭಿನ್ನಾಭಿಪ್ರಾಯ ಹೊಂದಿರುವವರನ್ನು ‘ದಿಮಾಗಿ ನಕ್ಸಲರು’ ಎಂದು ಕರೆಯಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಸ್ವಾತಂತ್ರ್ಯ ದಿನದಂದು ದೇಶದಲ್ಲಿ ಎರಡು ವಿಭಿನ್ನ ರೀತಿಯ ಕೆಲಸಗಳನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ಒಂದೆಡೆ ಪ್ರಧಾನಿಯನ್ನು ‘ಸರ್ವೋಚ್ಚ ನಾಯಕ’ ಎಂದು ಉಲ್ಲೇಖಿಸಿದ ಅವರು, ಮತ್ತೊಂದೆಡೆ ಸರ್ಕಾರವನ್ನು ಪ್ರಶ್ನಿಸುವವರನ್ನು ‘ಜಿರಳೆಗಳು’ ಹಾಗೂ ‘ದಿಮಾಗಿ ನಕ್ಸಲರು’ ಎಂದು ಕರೆಯಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
‘ನಗರ ನಕ್ಸಲ್’, ‘ದೇಶವಿರೋಧಿ’, ‘ಕೀಟ’, ‘ಜಿರಳೆ’ ಬಳಿಕ ಇದೀಗ ‘ದಿಮಾಗಿ ನಕ್ಸಲ್’ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಪ್ರಶ್ನಿಸುವ ಜನರಿಗೆ ಬುದ್ಧಿ ಇದೆ ಎಂಬುದನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ ಎಂದು ಪ್ರಕಾಶ್ ರಾಜ್ ಟೀಕಿಸಿದರು.
‘ದಿಮಾಗಿ ಬನೋ, ಬೇವಕೂಫ್ ನಹಿ, ಅಂಧಭಕ್ತ್ ನಹಿ. ಸವಾಲ್ ಕರೋ, ಗುಲಾಮಿ ನಹಿ’ ಎಂದು ಹೇಳಿದ ಅವರು, ಬುದ್ಧಿವಂತರಾಗಿ, ಅಂಧಭಕ್ತರಾಗದೆ ಸರ್ಕಾರವನ್ನು ಪ್ರಶ್ನಿಸುವಂತೆ ಕರೆ ನೀಡಿದರು.
ಕೆಂಪುಕೋಟೆಯನ್ನು ಕೇವಲ ನಾಮಕರಣ ಸಮಾರಂಭಗಳಿಗೆ ಬಳಸುವುದನ್ನು ಬಿಟ್ಟು, ದೇಶದ ನೈಜ ಸಮಸ್ಯೆಗಳತ್ತ ಗಮನಹರಿಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದರು.
ಇದೇ ವೇಳೆ ‘ಶಾಲಾ ಥೀಕ್ ಕರೋ’ ಅಭಿಯಾನದ ಸ್ವಯಂಸೇವಕರ ಕಾರ್ಯವನ್ನು ಪ್ರಸ್ತಾಪಿಸಿದ ಅವರು, ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ತೆರಳಿ ಶೌಚಾಲಯ, ಶಿಕ್ಷಕರ ಕೊರತೆ ಹಾಗೂ ಕಟ್ಟಡಗಳ ದುಸ್ಥಿತಿಯನ್ನು ಜನರ ಗಮನಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.
ಒಂದೆಡೆ ಭಾಷಣಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಯುವಜನರು ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಶೌಚಾಲಯಗಳ ಕೊರತೆ, ಶಿಕ್ಷಕರ ಕೊರತೆ ಹಾಗೂ ಕಟ್ಟಡಗಳ ದುಃಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಈ ಇಬ್ಬರಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ನೀವೇ ನಿರ್ಧರಿಸಿ. ಯಾರಿಗೂ ಅಂಧ ಭಕ್ತರಾಗಬೇಡಿ, ಗುಲಾಮರಾಗದೆ ನೈಜ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ ಎಂದು ಜನತೆಗೆ ಕರೆ ನೀಡಿದ್ದಾರೆ.


















































































