
ರಾಯಚೂರು: ರಾಯಚೂರು ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಜುಲೈ 28 ರಂದು 3 ನೇ ತರಗತಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಇದೇ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಚಾಲಕ ಗುರೂಜಿಯಾಗಿದ್ದ ವೇಣುಗೋಪಾಲ್ ಎಂಬಾತ ಸೈಕೋಪಾತ್ ರೀತಿ ವರ್ತಿಸಿ ಸತತ ಮೂರು ದಿನ ಆ ಮೂರನೇ ತರಗತಿ ವಿದ್ಯಾರ್ಥಿ ಮೇಲೆ ನಿರಂತರ ಹಲ್ಲೆ ನಡೆಸಿದ್ದ. ಜುಲೈ 31ರಂದು ಹಲ್ಲೆಗೊಳಗಾಗಿದ್ದ ಬಾಲಕನ ತಾಯಿ ಮಗನ ಬಗ್ಗೆ ವಿಚಾರಿಸಲು ಅಕಸ್ಮಾತ್ ಆ ಆಶ್ರಮಕ್ಕೆ ಹೋಗಿದ್ದ ವೇಳೆ ಹೆತ್ತ ಮಗನಿಗೆ ಚಿತ್ರಹಿಂಸೆ ನೀಡಿದ್ದ ವಿಚಾರ ಬಯಲಾಗಿದೆ.
ಹಲ್ಲೆಗೊಳಗಾದ 3 ನೇತರಗತಿ ಬಾಲಕ ಬೇರೊಬ್ಬ ವಿದ್ಯಾರ್ಥಿಯ ಪೆನ್ ಕದ್ದಿದ್ದು ಈ ಬಗ್ಗೆ ಆ ವಿದ್ಯಾರ್ಥಿ ಗುರೂಜಿ ವೇಣುಗೋಪಾಲ್ಗೆ ಹೇಳಿದ್ದ. ಆ ಬಳಿಕ ವೇಣುಗೋಪಾಲ್, ಪೆನ್ನು ಕದ್ದ ವಿಚಾರವಾಗಿ ಆ ಮೂರನೇ ತರಗತಿ ವಿದ್ಯಾರ್ಥಿಗೆ ಅಕ್ಷರಶಃ ನರಕ ತೋರಿಸಿದ್ದ. 3ನೇ ತರಗತಿ ಬಾಲಕನ ಕಣ್ಣಿಗೆ ಖಾರದ ಪುಡಿ ಹಾಕಿದ್ದ ಆರೋಪಿ, ಬಾಯಿಯಿಂದ ಬಾಲಕನ ಎಡಗೈ, ಮುಂಗೈಗೆ ಬಲವಾಗಿ ಕಚ್ಚಿ ವಿಕೃತಿ ಮೆರೆದಿದ್ದ. ಮುಖಕ್ಕೆ ಉಗುರಿನಿಂದ ಪರಚಿ, ಕಟ್ಟಿಗೆ-ಬ್ಯಾಟ್ನಿಂದ ಹಲ್ಲೆ ನಡೆಸಿದ್ದ. ಕಣ್ಣೀರಿಟ್ಟರೇ ಜಾಸ್ತಿ ಹೊಡೆಯೋದಾಗಿ ಬೆದರಿಸಿ ಮನಸೋ ಇಚ್ಛೆ ಹೊಡೆದಿದ್ದ. ಇದೇ ಕಾರಣಕ್ಕೆ ಆರೋಪಿ ಹೊಡೆಯೋ ಭಯದಲ್ಲಿ ಬಾಲಕ ಮೂರು ದಿನ ಕಣ್ಣೀರು ಹಾಕದೇ ಉಸಿರು ಬಿಗಿಹಿಡಿದು ಬದುಕಿದ್ದ.
ಈ ಬಗ್ಗೆ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೇಣುಗೋಪಾಲ್ನನ್ನ ಬಂಧಿಸಲಾಗಿದೆ. ಘಟನೆ ಬಗ್ಗೆ ರಾಯಚೂರು ಎಸ್ಪಿ ಪುಟ್ಟಮಾದಯ್ಯ ಹೇಳಿಕೆ ನೀಡಿದ್ದು, ಪೋಷಕರು ಮಕ್ಕಳನ್ನ ಆಶ್ರಮಕ್ಕೆ ಬಿಡುವ ಮೊದಲು ಎಚ್ಚರವಹಿಸಿ. ಆಶ್ರಮಗಳ ಬಗ್ಗೆ ತಿಳಿದುಕೊಂಡು ಸೇರಿಸಿ ಎಂದು ಪೋಷಕರಿಗೆ ಎಸ್ಪಿ ಸಲಹೆ ನೀಡಿದ್ದಾರೆ.













