
ಬೆಂಗಳೂರು: ಮನೆಯೂಟ ಬೇಕೆಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದ್ದು,ಮನೆಯೂಟ,ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಜುಲೈ 25 ರಂದು ವಜಾಗೊಳಿಸಿತ್ತು. ಈ ಹಿನ್ನಲೆ ದರ್ಶನ್ ಪರ ವಕೀಲ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದೆ.
ದರ್ಶನ್ ವಿಚಾರದಲ್ಲಿ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಮಾಡಲಿಲ್ಲ,ಜೈಲಿನಲ್ಲಿ ಗುಣಮಟ್ಟದ ಆಹಾರವೇ ನೀಡಲಾಗಿದೆ. ವಿಶೇಷ ಡಯಟ್ ಆಹಾರ ನೀಡ ಬೇಕಾದರೆ ಜೈಲು ವೈದ್ಯರ ಅನುಮತಿ ಬೇಕಾಗುತ್ತದೆ. ದರ್ಶನ್ ಗೆ ವೈದ್ಯರು ವಿಶೇಷ ಆಹಾರಕ್ಕೆ ಶಿಫಾರಸು ಮಾಡಿಲ್ಲ. ದರ್ಶನ್ ಬೆನ್ನು ನೋವು ಹಾಗೂ ಕಾಲು ನೋವಿನಿಂದ ಬಳಲುತ್ತಿರುವ ಕಾರಣ ಬೆಡ್ ರೆಸ್ಟ್ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ವ್ಯಕ್ತಿ ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ ಜೈಲಿನಲ್ಲಿ ತಾರತಮ್ಯ ಮಾಡಲಾಗುವುದಿಲ್ಲ. ಇಲ್ಲಿ ಎಲ್ಲರೂ ಸಮಾನರೇ. ಜಾತಿ ಧರ್ಮ ಅಸ್ತಿ ಅಂತಸ್ತು ಲೆಕ್ಕಕ್ಕೆ ಬರುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿದೆ











