25.5 C
Udupi
Tuesday, June 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 560

ಭರತೇಶ ಶೆಟ್ಟಿ, ಎಕ್ಕಾರು

ಬಬ್ರುವಾಹನನಿಗೆ ತನ್ನ ತಂದೆಯನ್ನು ಕೊಂದ ಪಾತಕದ ದುಃಖ ಒಂದೆಡೆಯಾದರೆ, ತಂದೆಯೂ ತಾಯಿಯೂ ಆಗಿ ಸಾಕಿ ಸಲಹಿದ ತಾಯಿಗೆ ಕಡು ದುಃಖ ನೀಡಿದ ವೇದನೆಯ ಬೇಗೆ ಅಸಹನೀಯವಾಗಿ ದಹಿಸುತ್ತಿದೆ. ಮಗನ ಪಶ್ಚಾತ್ತಾಪದ ಮುಖವನ್ನು ಕಂಡು ಚಿತ್ರಾಂಗದೆ ಸಂತೈಸುತ್ತಾ “ಮಗನೇ! ದುಃಖಿಸಬೇಡ, ದುಡುಕಬೇಡ. ನೀನೇನಾದರು ದುಡುಕಿ ಅಗ್ನಿಪ್ರವೇಶ ಮಾಡಿ ಪ್ರಾಣ ತ್ಯಾಗ ಮಾಡಿದೆ ಎಂದಾದರೆ ಅನರ್ಥವಾದೀತು. ಯಾಕೆಂದರೆ ಶ್ರೀಕೃಷ್ಣನ ಒಲುಮೆಯಿಂದ ನಿನ್ನ ಪಿತ ಅರ್ಜುನ ಮರು ಜೀವ ಪಡೆದರೆ ಆ ಹೊತ್ತು ನೀನು ಇಲ್ಲದೇ ಹೋದರೆ ಏನು ಪ್ರಯೋಜನ ಹೇಳು. ಹಾಗಾಗಿ ಎಲ್ಲವೂ ದೈವ ಸಂಕಲ್ಪ ಎಂದು ಬಗೆದು ತಾಳ್ಮೆ ವಹಿಸು” ಎಂದು ಸಂತೈಸಿದಳು.

ಹೀಗಾಗುತ್ತಿದ್ದಂತೆ ಶೂನ್ಯ ಮನಸ್ಕಳಾಗಿ ದುಃಖಿಸುತ್ತಿದ್ದ ಉಲೂಪಿಗೆ ಜ್ಞಾನೋದಯವಾದಂತೆ ಎಚ್ಚೆತ್ತಳು. “ಮಗೂ ಬಬ್ರುವಾಹನ, ನೀನು ಅವಸರ ಪಡಬೇಡ. ಸಮಸ್ಯೆಗಳನ್ನು ಎರಡು ವಿಧಾನದಿಂದ ಅವಲೋಕಿಸುವುದು ಜಾಣರ ಲಕ್ಷಣ. ಮೊದಲನೆಯದು ಒದಗಿರುವ ಸಮಸ್ಯೆಗೆ ಪರಿಹಾರವೇನು? ಒಂದು ವೇಳೆ ಪರಿಹಾರ ಇದೆ ಎಂದಾದರೆ ಅದಕ್ಕಾಗಿ ಶ್ರಮಿಸಬೇಕೇ ಹೊರತು ಪರಿತಪಿಸಿ ಕೂರಬಾರದು. ಎರಡನೆಯ ವಿಧಾನ ಏನೆಂದರೆ, ಸಮಸ್ಯೆ ಜಟಿಲವಾಗಿದ್ದು ಪರಿಹರಿಸಲು ಅಸಾಧ್ಯವೇ ಹೌದೆಂದಾದರೆ ಆಗ ಚಿಂತಿಸಿ, ದುಃಖಿಸಿ ಪ್ರಯೋಜನವಿಲ್ಲ. ಒಂದುವೇಳೆ ದುಃಖಿಸಿದರೂ, ವ್ಯಥೆ ಪಟ್ಟರೂ ನಿಷ್ಪ್ರಯೋಜಕವಾಗಿರುವ ಅಂತಹ ಸಮಸ್ಯೆಯ ಬಗ್ಗೆ ಹೆಚ್ಚಿನದ್ದಾದ ಚಿಂತೆ ಮಾಡದೆ ಬಿಟ್ಟು ಬಿಡಬೇಕು ಈಗ ನಮಗೊದಗಿರುವ ಸಮಸ್ಯೆ ನಮ್ಮವರಾದ ಅರ್ಜುನನ ಮೃತ್ಯು. ಸತ್ತವರನ್ನು ಮತ್ತೆ ಬದುಕಿಸುವುದು ಸುಲಭ ಸಾಧ್ಯವಾದ ವಿಚಾರವೇ ಅಲ್ಲ. ಹಾಗೆಂದು ಈ ಜಟಿಲತೆಗೆ ಪರಿಹಾರ ಇಲ್ಲವೇ ಕೇಳಿದರೆ ಖಂಡಿತಾ ಇದೆ. ನಮ್ಮ ಪಾರ್ಥ ಮಹಾಶಯನ ಪುನರುಜ್ಜೀವನಕ್ಕೆ ಅನುಕೂಲವಾಗುವ ಒಂದು ವಿಷಯವಿದೆ. ನಾನು ಆ ಕುರಿತಾಗಿ ನಿನಗೆ ತಿಳಿಯಪಡಿಸುತ್ತೇನೆ. ಎಂದಳು. ಹಿಂದೆ ಕಶ್ಯಪಬ್ರಹ್ಮರ ಹದಿಮೂರು ಮಂದಿ ಪತ್ನಿಯರಲ್ಲಿ ಈರ್ವರು ಕದ್ರು ಮತ್ತು ವಿನತೆ ಯರು. ಸೃಷ್ಟಿ ಕಾರ್ಯಕ್ಕೆ ನಿಯೋಜಿತರಾದ ಕಶ್ಯಪ ಬ್ರಹ್ಮರು ದಕ್ಷ ಪುತ್ರಿಯರ ಮಾಧ್ಯಮದಿಂದ ವಿಧ ವಿಧ ಸಂತತಿ ಸೃಷ್ಟಿಸಿದರು. ದಿತಿ ದೇವಿಯಲ್ಲಿ ದೈತ್ಯರು, ಅದಿತಿಯಲ್ಲಿ ದೇವತೆಗಳು, ದನುವಿನಲ್ಲಿ ದಾನವರು, ದನಾಯುವಿನಲ್ಲಿ ಸಿದ್ಧರು, ಪಾದಳಲ್ಲಿ ಗಂಧರ್ವರು, ಮುನಿ ಎಂಬವಳಲ್ಲಿ ಅಪ್ಸರೆಯರು, ಸುರಸೆಯಲ್ಲಿ ಯಕ್ಷರು ಮತ್ತು ಮಹಾನಾಗರು, ಇಲಾ ಎಂಬವಳಲ್ಲಿ ವೃಕ್ಷ ಲತಾದಿಗಳು, ಕ್ರೋಧವಶಾಳಲ್ಲಿ ಮಾಂಸಾಹಾರಿ ಮೃಗಗಳು, ತಾಮ್ರಾ ಎಂಬವಳಲ್ಲಿ ಅಶ್ವ ಮತ್ತು ತತ್ಸಮಾನ ಗರ್ಭಧಾರಣೆ ಮಾಡುವ ಪ್ರಾಣಿಗಳು, ಕಪಿಲಾ ಎಂಬವಳಲ್ಲಿ ಗೋವುಗಳು. ಹಾಗೆಯೇ ವಿನತೆಯಲ್ಲಿ ಅರುಣ ಮತ್ತು ಗರುಡಾದಿಗಳು. ಕದ್ರುವಿನಲ್ಲಿ ಸರ್ಪಗಳು… ಹೀಗೆ ನಾನಾ ವಿಧ ಸೃಷ್ಟಿಗಳಾದವು.

ಹೀಗಿರಲು ಸೋದರಿಯರಾದ ಕದ್ರು ಮತ್ತು ವಿನತೆಯ ಮಧ್ಯೆ ಒಂದು ದಿನ ಅನಪೇಕ್ಷಿತ ವಿವಾದ ಏರ್ಪಟ್ಟಿತು. ಆ ದಿನ ದೇವೇಂದ್ರ ಆಕಾಶ ಮಾರ್ಗದಲ್ಲಿ ಹಾರುವ ಬಿಳಿಗುದುರೆ- “ಉಚ್ಚೈಶ್ರವ” ಏರಿ ಸವಾರಿ ಮಾಡುತ್ತಾ ಎತ್ತಲೋ ಸಾಗುತ್ತಿದ್ದ. ಹಾಗೆ ತುರಗಾರೂಢನಾಗಿ ಗಗನ ಮಾರ್ಗದಲ್ಲಿ ಸಾಗುತ್ತಿದ್ದ ಇಂದ್ರನನ್ನು ನೋಡಿ ಅದರ ಬಾಲದ ಬಣ್ಣದ ಕುರಿತಾಗಿ ವಾದ ಬೆಳೆಯತೊಡಗಿತಂತೆ. ಕದ್ರು ಕುದುರೆಯ ಬಾಲ ಕಪ್ಪೆಂದೂ, ವಿನತೆ ಬಿಳಿಯೆಂದೂ ವಾದಿಸತೊಡಗಿದರಂತೆ. – ವಾದ ಬೆಳೆದು ವಿವಾದ ನಂತರ ಪಂಥವಾಗಿ ಮಾರ್ಪಾಡಾಯಿತಂತೆ. ಪಂಥ ಪ್ರಕಾರ ಸೋತವರು ಗೆದ್ದವರ ದಾಸಿಯಾಗಿ ಬದುಕುವವರೆಗಿನ ಮಟ್ಟಕ್ಕೆ ಬೆಳೆಯಿತು. ನಿಜವಾಗಿಯೂ ಬಿಳಿ ಕುದುರೆಯ ಬಾಲವೂ ಬಿಳಿಯೇ ಆದರೂ ಸರ್ಪ ಸಂಕುಲಗಳ ಮಾತೆ ಕದ್ರುವಿಗೆ ಸತ್ಯ ಗೊತ್ತಿದ್ದರೂ ಸುಳ್ಳು ವಾದ ಮಾಡಿದ್ದಳಂತೆ. ತನ್ನ ವಾದದ ಸಮರ್ಥನೆ ಮಾಡುವ ತಂತ್ರಕ್ಕೆ ತನ್ನ ಮಕ್ಕಳಾದ ಸರ್ಪ ಸಂಕುಲದ ಸಹಾಯ ಕೇಳಿದಳಂತೆ. ‘ಮಕ್ಕಳೇ ನೀವು ಗಗನ ಮಾರ್ಗಕ್ಕೆ ನೆಗೆದು ಹಾರಿ ಕುದುರೆಯ ಬಾಲಕ್ಕೆ ಸುತ್ತಿಕೊಳ್ಳಿ ಆಗ ಅದು ಕಪ್ಪಾಗಿ ಕಾಣಿಸಿ ತನಗೆ ಗೆಲುವಾಗುತ್ತದೆ’ ಎಂಬ ಉಪಾಯ ಆಕೆಯದ್ದು. ಉಪಾಯದ ಅನುಷ್ಠಾನಕ್ಕಾಗಿ ಮಕ್ಕಳಿಗೆ ಆಜ್ಞೆ ಮಾಡಿದಾಗ, ಹಲವು ನಾಗ, ಸರ್ಪಗಳು ಇದು ಅನ್ಯಾಯ ಸರಿಯಲ್ಲ ಎಂದು ಪ್ರತಿರೋಧಿಸಿ ಆಕ್ಷೇಪಿಸಿದರಂತೆ. ಉಳಿದ ಕೆಲವರು ತಾಯಿಯ ಮಾತಿನಂತೆ ನಡೆದು ಪಂಥದಲ್ಲಿ ಕದ್ರು ಗೆಲ್ಲುತ್ತಾಳೆ. ವಿನತೆ ಸೋತು ದಾಸ್ಯದ ಬದುಕಿಗೆ ಶರಣಾಗಬೇಕಾಯಿತಂತೆ.

ಹೀಗೆ ದಾಸ್ಯದ ಸಂಕೋಲೆಗೆ ಸಿಲುಕಿ ಬಹುವಿಧ ಪೀಡನೆಗೆ ಗುರಿಯಾದ ಮಾತೆ ವಿನತೆಯ ಕಷ್ಟವನ್ನು ಕಂಡು ಸಹಿಸದ ಪುತ್ರ ಗರುಡ ತಾಯಿಯಲ್ಲಿ ಪೂರ್ಣ ವಿಚಾರ ತಿಳಿದನಂತೆ. ತನ್ನ ತಾಯಿಗೆ ವಂಚನೆ ಮಾಡಿ, ಬಹುವಿಧ ಪೀಡನೆ ನೀಡುತ್ತಿದ್ದ ಸರ್ಪಗಳನ್ನು ಬಿಡಲಾರೆ. ಕುಕ್ಕಿ ಕುಕ್ಕಿ ತಿಂದು ನಿರ್ನಾಮ ಮಾಡುವೆ ಎಂದು ಗರುಡ ಪ್ರತಿಜ್ಞೆ ಮಾಡಿದನಂತೆ. ಅಂತೆಯೇ ಸರ್ಪಗಳನ್ನು ಬೆನ್ನಟ್ಟಿ ಬೆನ್ನಟ್ಟಿ ಬಲಶಾಲಿಯಾದ ಗರುಡ ಕುಕ್ಕಿ ಕೊಲ್ಲ ತೊಡಗಿದನಂತೆ.ಈ ರೀತಿ ಗರುಡನಿಂದ ಸರ್ವನಾಶ ಗೊಳ್ಳುತ್ತಿದ್ದ ಸರ್ಪಗಳು ರಕ್ಷಣೆಗಾಗಿ ಮಹಾದೇವ ಪರಮೇಶ್ವರನ ಮೊರೆ ಹೋದವಂತೆ. ಆಗ ಶಿವನಾಜ್ಞೆಮತೆ ಷಣ್ಮುಗನ ಮುಖೇನ ಬಗೆಹರಿಸಲ್ಪಟ್ಟಿತು. ಅದಕ್ಕಾಗಿ ಕೃತಜ್ಞತಾ ಭಾವ ತಳೆದ ನಾಗಗಳು ಸುಬ್ರಹ್ಮಣ್ಯನಿಗೆ ಒಂದು ವಾಗ್ದಾನವನ್ನು ನೀಡಿದರಂತೆ. ಏನೆಂದರೆ ಯಾರು ನಿನ್ನನ್ನು ಪೂಜಿಸುತ್ತಾರೋ, ನಿನ್ನ ಭಕ್ತರೋ ಅಂತಹವರಿಗೆ ನಾಗಗಳಾದ ನಾವು ಯಾವ ದೋಷವನ್ನೂ ನೀಡಲಾರೆವೆಂದು. ಜೊತೆಗೆ ಅಂದೇ ಪರಮೇಶ್ವರನಿಂದ ಒಂದು ವರಪ್ರಸಾದವೂ ಪ್ರಾಪ್ತವಾಯಿತು. ಅದೇನೆಂದರೆ ಗರುಡನಿಂದ ಸತ್ತ ಸರ್ಪಗಳಿಗೆ ಮರು ಜೀವ ನೀಡಬಲ್ಲ ಸಂಜೀವಕ ಮಣಿಯನ್ನು ಪರಶಿವನು ಆದಿಶೇಷನಿಗೆ ಕರುಣಿಸಿದ್ದು. ಆ ಮಣಿಯನ್ನು ತಂದು ಅರ್ಜುನನ ಮಡಿದ ಶರೀರಕ್ಕೆ ಸ್ಪರ್ಶ ಮಾಡಿದರೆ ಹೋದ ಪ್ರಾಣ ಪುನರಪಿ ಪ್ರಾಪ್ತವಾಗಬಲ್ಲುದು”.

ಬಬ್ರುವಾಹನ ಇಷ್ಟು ಕಥೆ ಕೇಳುತ್ತಿದ್ದಂತೆಯೇ “ಮಾತೆ ಉಲೂಪಿಯೇ! ನೀವು ಇತ್ತಿರುವ ಪರಿಹಾರೋಪಾಯ ಅದ್ಬುತವಾಗಿದೆ. ನನ್ನ ತಾಯಿ ನನ್ನನ್ನು ಹೆತ್ತದ್ದು ಸಾರ್ಥಕವಾಯಿತು. ನಾಗಗಳ ಲೋಕಕ್ಕೆ ತೆರಳಿ ಆ ಸಂಜೀವಕ ಮಣಿಯನ್ನು ತಾರದೆ ಹೋದರೆ ನಾನು ಚಿತ್ರಾಂಗದೆಯ ಮಗನೇ ಅಲ್ಲ” ಎಂದು ಶಪಥಗೈದನು.

ಮುಂದುವರಿಯುವುದು…….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page