
ಪ್ಯಾರಿಸ್: ಫ್ರಾನ್ಸ್ ನ ಪ್ಯಾರಿಸ್ ನಲ್ಲಿ 33ನೇ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ದೊರಕಿದ್ದು, ಸೆನ್ ನದಿಯ ಮೇಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಟ್ ಮೂಲಕ ಸ್ಪರ್ಧಿಗಳು 6 ಕಿ.ಮೀ ನಷ್ಟು ಪಥ ಸಂಚಲನ ನಡೆಸಿದ್ದಾರೆ. ಇದರಲ್ಲಿ ಭಾರತ 14ನೇ ತಂಡವಾಗಿ ಆಗಮಿಸಿದ್ದು, ಬೋಟ್ ಮೂಲಕ ಆಗಮಿಸಿದ ಎಲ್ಲಾ ತಂಡಗಳಿಗೆ ಕಾರಂಜಿಯ ಮೂಲಕ ವಾಟರ್ ಸೆಲ್ಯೂಟ್ ನೀಡಲಾಗಿದೆ.
ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾರತದ ಒಟ್ಟು 78 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದು, ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮತ್ತು ಟೇಬಲ್ ಟೆನ್ನಿಸ್ ಪಟು ಶರತ್ ಕಮಾಲ್ ಭಾರತದ ಧ್ವಜಧಾರಿಗಳಾಗಿ ಪಥ ಸಂಚಲನವನ್ನು ಮುನ್ನಡೆಸಿದರು. ಈ ಒಲಂಪಿಕ್ಸ್ ಆಗಸ್ಟ್ 11ರವರೆಗೆ ನಡೆಯಲಿದ್ದು 206 ದೇಶಗಳ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.


































