✍🏻ರೇಷ್ಮಾ ಶೆಟ್ಟಿ ಗೊರೂರು.

ತಾಯ ಗರ್ಭದಿಂದ ಭೂಮಿಗಿಳಿದ ಕಂದನಿಗೆ ಪ್ರಪಂಚದ ಅರಿವಿರುವುದಿಲ್ಲ, ತಾಯಿಯ ಗರ್ಭವೇ ಅದರ ಅತಿ ದೊಡ್ಡ ಪ್ರಪಂಚ, ಹೊರ ಜಗತ್ತಿಗೆ ಕಾಲಿಟ್ಟಾಗ ಅದಕ್ಕೆ ಅಳುವುದಲ್ಲದೆ ಮತ್ತಿನ್ನೇನು ಅರಿಯದಾಗಿರುತ್ತದೆ. ಕ್ರಮೇಣ ಹೊರ ಪ್ರಪಂಚದ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಅರಿತು ಸಮಾಜದೊಂದಿಗೆ ಹೆತ್ತವರೊಂದಿಗೆ ಬೆರೆಯಲಾರಂಬಿಸುತ್ತದೆ.
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು”, ಎಂಬಂತೆ ತಾಯಿ ಮಡಿಲೇ ಮೊದಲ ಪಾಠಶಾಲೆಯಾಗಿ ನಂತರದ ದಿನಗಳಲ್ಲಿ ಮಗು ಅದರ ಭವಿಷ್ಯ ನಿರ್ಮಾಣಕ್ಕೆ ಅಡಿಪಾಯವಾಗಿ ಶಿಕ್ಷಣ ಕ್ಷೇತ್ರ ಎಂಬ ವಿದ್ಯಾದೇಗುಲಕ್ಕೆ ಆಡಿಯಿಡಲಾರಂಭಿಸುತ್ತದೆ.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ವಾಣಿಯಂತೆ ನಾವು ಯಾರೇ ಆದರೂ ನಮ್ಮಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವ ಆದರ್ಶ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು,ಗುರುವಿನ ಮಾರ್ಗದರ್ಶನದಂತೆ ಬದುಕಿನಲ್ಲಿ ಮುನ್ನಡೆದಾಗ ನಮಗೊಂದು ಸತ್ಪಥ ದೊರೆತು ಬದುಕು ಬೆಳಕು ಕಂಡುಕೊಳ್ಳಲು ಸಾಧ್ಯವಾದೀತು. ನಮ್ಮ ಸರಿ ತಪ್ಪುಗಳನ್ನು ತಿದ್ದಿ ,ಅಂಕುಡೊಂಕುಗಳಿಗೆ ಕಡಿವಾಣ ಹಾಕಿ ನಮ್ಮನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಶ್ರಮ ಅನವರತ, ಹೆತ್ತು ಹೊತ್ತು ಸಾಕಿ ಸಲಹದಿದ್ದರೂ ನಮ್ಮ ಏಳಿಗೆಯಲ್ಲಿ ಅತ್ಯುನ್ನತ ಕೊಡುಗೆ ನೀಡುವವರು ಶಿಕ್ಷಕರೇ.. ಅಲ್ಲದೆ ಒಬ್ಬ ಉತ್ತಮ ಶಿಕ್ಷಕ ಎನಿಸಿಕೊಂಡವರು ತಮ್ಮ ವಿದ್ಯಾರ್ಥಿಗಳಲ್ಲಿ ಗುರುವನ್ನು ಮೀರಿಸುವ ಸಾಧನೆಯನ್ನು ಬಯಸುತ್ತಾರೆ ಎಂದರೆ ತಪ್ಪಾಗಲಾರದು,ಹಾಗೊಮ್ಮೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಂಡರೆ ಅಂತಹ ಗುರುಗಳು ಮನದೊಳಗೆ ಹಿರಿಹಿರಿ ಹಿಗ್ಗಿ ಬಿಡುತ್ತಾರೆ.
ನಾವು ಯಾವುದೇ ಜಾತಿ ಧರ್ಮ ಪಂಗಡಗಳಿಂದ ಬೆಳೆದು ಬಂದಿದ್ದರೂ ವಿದ್ಯಾ ದೇಗುಲವೆಂದಾಗ ಅಲ್ಲಿ ಯಾವುದೇ ಧರ್ಮಸಂಕಲೆಗಳು, ಕಟ್ಟುಪಾಡುಗಳಿಲ್ಲದೆ ಕೇವಲ ಶಿಕ್ಷಣಕ್ಕಷ್ಟೇ ಪ್ರಾಮುಖ್ಯತೆ ಕೊಟ್ಟು ವಿದ್ಯಾಭ್ಯಾಸದಲ್ಲಿ ತೊಡಗುಕೊಳ್ಳುತ್ತೇವೆ ಅದು ಶಿಕ್ಷಣಕ್ಕಿರುವ ತಾಕತ್ತು ಎನ್ನಬಹುದು, ಅಂತಹ ಮನಸ್ಥಿತಿ ಹುಟ್ಟುಹಾಕುವಲ್ಲಿ ಶಿಕ್ಷಕರು ಪೂರ್ಣ ಪ್ರಮಾಣದ ವಿಶಾಲ ಹೃದಯಂತಿಕೆಯುಳ್ಳವ ರಾಗಿರುತ್ತಾರೆ.
ಶಿಕ್ಷಕರು ನಮ್ಮೆಲ್ಲ ವಿದ್ಯಾರ್ಥಿಗಳನ್ನು ಅತ್ಯುತ್ತಮ ವಿದ್ಯಾರ್ಥಿಗಳನ್ನಾಗಿಸುವಲ್ಲಿ ಪರಿಶ್ರಮ ಪಡುತ್ತಾರೆಯೇ ವಿನಹ ಅವರು ಯಾವ ಜಾತಿ, ಧರ್ಮ ಪಂಥಗಳಿಂದ ಬಂದವರೆಂದು ಭಾವಿಸಲಾರರು,ಯಾಕೆಂದರೆ ಒಂದು ಮಗು ಶಿಕ್ಷಕರೊಂದಿಗೆ ಶೈಕ್ಷಣಿಕವಾಗಿ ಬೆರೆಯುವುದರೊಂದಿಗೆ ಭಾವನಾತ್ಮಕವಾದ ಬಾಂಧವ್ಯವನ್ನು ಬೆಸೆದುಕೊಳ್ಳುತ್ತದೆ, ಅಂಥ ಬಾಂಧವ್ಯದಲ್ಲಿ ಜಾತಿ ಧರ್ಮ ಮತ ಪಂಥಗಳನ್ನು ಮೀರಿದ ಭಾವೈಕ್ಯತೆ ಮೊಳಕೆಯೊಡೆದಿರುತ್ತದೆ.
ಒಬ್ಬ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ ಹಾಗೂ ಅತ್ಯಂತ ಕಡಿಮೆ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗೂ ಏಕ ಕಾಲದಲ್ಲಿ ಒಂದೇ ವಿಧವಾಗಿ ಬೋಧನೆಯನ್ನು ಮಾಡುವ ಶಿಕ್ಷಕರು ಅವರಲ್ಲಿ ತಾರತಮ್ಯ ಮಾಡಲು ಹೇಗೆ ಸಾಧ್ಯವಾದಿತು..? ಒಂದೇ ಸೂರಿನಡಿಯಲ್ಲಿ ಎಲ್ಲಾ ಧರ್ಮಗಳ, ಬಡವರು ಶ್ರೀಮಂತರು ಎಂಬ ಮನಸ್ಥಿತಿ ಇಲ್ಲದ ಯಾವುದೇ ಪರಿಸ್ಥಿತಿಯ ಸರ್ವ ಮಕ್ಕಳಿಗೂ ಬೋಧನೆ ಮಾಡುತ್ತಾ ಅವರ ಭವಿಷ್ಯಕ್ಕಾಗಿ ಪರಿಶ್ರಮ ವಿನಿಯೋಗಿಸುವುದು ಗುರುಗಳು ಮಾತ್ರವಲ್ಲವೇ…
ಪೋಷಕರಾದರು ನನ್ನ ಮಗು ಅತ್ಯಂತ ಹೆಚ್ಚು ಅಂಕ ಗಳಿಸಬೇಕು ಉನ್ನತ ಹುದ್ದೆ ಅಲಂಕರಿಸಬೇಕು ಎಂಬಿತ್ಯಾದಿ ಮನಸ್ಥಿತಿ ಹೊಂದಿದರೂ ಕೂಡ ಶಿಕ್ಷಕರಿಗೆ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮದೇ ಮಕ್ಕಳೆಂಬ ಮನಸ್ಥಿತಿಯಿಂದ ಅವರ ಪ್ರತಿನಿತ್ಯದ ಜವಾಬ್ದಾರಿಯನ್ನು ಶೈಕ್ಷಣಿಕ ಸಮಯದಲ್ಲಿ ಸರಿದೂಗಿಸುವಲ್ಲಿ ಶ್ರಮಿಸುತ್ತಿರುತ್ತಾರೆ.
ವಿದ್ಯಾರ್ಥಿಗಳಲ್ಲಿ ನಿಶ್ಚಿತ ಗುರಿ ಇದ್ದಾಗ ಆ ಗುರಿಯ ಗಮ್ಯ ತಲುಪುವಲ್ಲಿ ಶ್ರೇಷ್ಠ ಗುರುವರ್ಯರ ಮಾರ್ಗದರ್ಶನ ಲಭಿಸಿದಾಗ ಬದುಕು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ,ಭವ್ಯ ಭವಿಷ್ಯಕ್ಕೆ ಭದ್ರತಳಪಾಯ ಕಟ್ಟಬಲ್ಲ ಗುರುಗಳೆಲ್ಲರಿಗೂ ಭಕ್ತಿ ಪೂರ್ವಕವಾಗಿ ಗೌರವ ಪೂರ್ವಕವಾಗಿ ನಮನಗಳನ್ನು ಸಲ್ಲಿಸುವ ಮನಸ್ಥಿತಿಯುಳ್ಳ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೋಲು ಕಾಣುವ ಪ್ರಮೇಯ ಬರದು, ಹಾಗೊಮ್ಮೆ ಸೋಲುವ ಸಂದರ್ಭ ಎದುರಾದರೂ ಶಿಕ್ಷಕರೇ ಹಾಕಿಕೊಟ್ಟ ಪ್ರೋತ್ಸಾಹದ ಬಿನ್ನುತಟ್ಟುವಿಕೆ, ಧೈರ್ಯದ ನುಡಿ, ಆತ್ಮಸ್ಥೈರ್ಯವೆಂಬ ಮನೋಬಲ ತುಂಬಿದ ಅವರನ್ನು ದುರ್ಬಲರನ್ನಾಗಿಸದೇ ಗೆಲುವಿನ ದಾರಿಯಲ್ಲಿ ಮುನ್ನಡೆಸುತ್ತದೆ..
ಉತ್ತಮ ಭವಿಷ್ಯಕ್ಕೆ ತಮ್ಮ ಶ್ರಮವಿನಿಯೋಗಿಸಿದ ಸರ್ವ ಗುರು ಪೂಜ್ಯರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ ಸರ್ವರಿಗೂ ಗುರುಪೂರ್ಣಿಮೆಯ ಶುಭಾಶಯಗಳನ್ನು ಸಲ್ಲಿಸುತ್ತ ಈ ನನ್ನ ಬರಹವನ್ನು ನನ್ನನ್ನು ತಿದ್ದಿ ತೀಡಿದ ಸರ್ವ ಗುರುದೇವರುಗಳಿಗೆ ಅರ್ಪಿಸುತ್ತೇನೆ…









