
ಮಹಾರಾಷ್ಟ್ರದಲ್ಲಿ ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪಸರಿಸುತ್ತಾ, ಪ್ರಕಾಶ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್‌ನ ಮೀರಾ ರೋಡ್ ಶಿಬಿರದ 2026–2027ನೇ ಸಾಲಿನ ಕನ್ನಡ ತರಗತಿಯ ಪ್ರಾರಂಭೋತ್ಸವ ಜೂನ್ 14ರಂದು ಮಧ್ಯಾಹ್ನ 2:30ಕ್ಕೆ ಮೀರಾ ರೋಡ್ ಪೂರ್ವದ ಸೈಂಟ್ ಜೇವಿಯರ್ ಶಾಲೆಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು, ಚಿಣ್ಣರ ಬಿಂಬ ಸಂಸ್ಥೆ ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕನ್ನಡ ತರಗತಿಯ ಜೊತೆಗೆ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ವಿವಿಧ ವೇದಿಕೆಗಳನ್ನು ಒದಗಿಸುತ್ತಿರುವುದು ಸಂಸ್ಥೆಯ ವಿಶೇಷತೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಲು ಬಂಟ್ಸ್ ಸಂಘ ಮುಂಬೈ ಮೀರಾ-ಭಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ರಮೇಶ್ ಎಂ. ಶೆಟ್ಟಿ ಸಿದ್ದಕಟ್ಟೆ ಹಾಗೂ ಬಂಟ್ಸ್ ಫೋರಂ ಮೀರಾ-ಭಯಂದರ್ ಸಮಿತಿಯ ಅಧ್ಯಕ್ಷ ಉದಯ್ ಎಂ. ಶೆಟ್ಟಿ ಮಲಾರಬೀಡು ಉಪಸ್ಥಿತರಿದ್ದರು.
ರಮೇಶ್ ಎಂ. ಶೆಟ್ಟಿ ಮಾತನಾಡಿ, ಸಂಸ್ಥೆಯ ಒಗ್ಗಟ್ಟು ಹಾಗೂ ಮಕ್ಕಳಲ್ಲಿ ಕನ್ನಡ ಮತ್ತು ಭಜನೆಯ ಮೇಲಿನ ಆಸಕ್ತಿ ಕಂಡು ಸಂತಸ ವ್ಯಕ್ತಪಡಿಸಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಂಸ್ಕಾರವಂತರಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು. ಜೊತೆಗೆ ಚಿಣ್ಣರ ಬಿಂಬದ 25ನೇ ವರ್ಷದ ಬೆಳ್ಳಿ ಹಬ್ಬಕ್ಕೂ ಶುಭಾಶಯ ಕೋರಿದರು.
ಉದಯ್ ಎಂ. ಶೆಟ್ಟಿ ಮಾತನಾಡಿ, ಕನ್ನಡ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಮೀರಾ ರೋಡ್ ಶಿಬಿರ ಇನ್ನಷ್ಟು ಬೆಳೆಯಲಿ ಹಾಗೂ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದರು.
ಮಕ್ಕಳು ಗಣಪತಿ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರ ಬಿಂಬದ ಸಂಚಾಲಕಿ ಆಶಾಲತಾ ದಿನಕರ್ ಕೊಠಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಜನೆ ಶಿಕ್ಷಕಿ ಶಾಂತ ಮುರುಳಿಧರ್ ಆಚಾರ್ಯ, ಕನ್ನಡ ಶಿಕ್ಷಕಿ ಸುಲೋಚನ ಜಯರಾಜ್ ಶೆಟ್ಟಿ ಹಾಗೂ ಶಿಬಿರ ಮುಖ್ಯಸ್ಥೆ ಸಂಧ್ಯಾ ಸುನಿಲ್ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2026–2027ನೇ ಸಾಲಿನ ಶಿಬಿರದ ಮುಖ್ಯಸ್ಥೆಯಾಗಿ ಪ್ರಿಯಾಂಕ ಅಶೋಕ್ ಪೂಜಾರಿ, ಉಪ ಮುಖ್ಯಸ್ಥೆಯಾಗಿ ಪೂಜಾ ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆಯಾಗಿ ನಿಶಾ ಯೋಗೀಶ್ ಶೆಟ್ಟಿ ಹಾಗೂ ಉಪಸಾಂಸ್ಕೃತಿಕ ಮುಖ್ಯಸ್ಥೆಯಾಗಿ ಸೌಮ್ಯ ಸುರೇಶ್ ಶೆಟ್ಟಿ ಆಯ್ಕೆಯಾದರು.
ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


































