
ಬೆಂಗಳೂರು: ಗೌರವಧನವನ್ನು 15,000 ರೂ.ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ 10ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ನಟರು, ಸಾಹಿತಿಗಳು, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ನಡುವೆ ಹಲವು ಕಾರ್ಯಕರ್ತೆಯರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜುಬೇದಾ ಬೇಗಂ (36) ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ, ದೊಡ್ಡಬಳ್ಳಾಪುರದ ಲಕ್ಷಮ್ಮ (50) ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಯಾದಗಿರಿಯ ಚಂದಾಬಿ ಅವರಿಗೂ ತೀವ್ರ ಎದೆನೋವು ಉಂಟಾದ ಹಿನ್ನೆಲೆಯಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಟ ವಿನೋದ್ ರಾಜ್, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತೆಯರು ತಮ್ಮ ಮತ್ತು ತಮ್ಮ ತಾಯಿಯ ಆರೈಕೆ ಮಾಡಿದ ಸಂದರ್ಭವನ್ನು ಸ್ಮರಿಸಿದರು. “ನನ್ನ ತಾಯಿ ಇಂದು ನಮ್ಮೊಂದಿಗಿಲ್ಲ. ಆದರೆ ನಿಮ್ಮಲ್ಲಿ ಸಾವಿರಾರು ಮಂದಿ ನನಗೆ ತಾಯಿಯ ಸಮಾನ. ನಿಮ್ಮ ಬೇಡಿಕೆಗಳು ಶೀಘ್ರ ಈಡೇರಲಿ” ಎಂದು ಆಶಿಸಿದರು.
ನಟಿ ಮಾಳವಿಕಾ ಅವಿನಾಶ್ ಕೂಡ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಇತರರ ಆರೋಗ್ಯ ಕಾಪಾಡಿ ಅವರಿಗೆ ಧೈರ್ಯ ತುಂಬುವ ಮಹತ್ವದ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಟೀಕಿಸಿದರು. ಬರಹಗಾರರಾದ ಜಾಣಗೆರೆ ವೆಂಕಟರಾಮಯ್ಯ ಹಾಗೂ ಡಾ. ವಸುಂಧರಾ ಭೂಪತಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರು. ಸಚಿವರ ವೇತನ ಹೆಚ್ಚಳ ಹಾಗೂ ‘ಕುಮಾರ ಕೃಪಾ’ ಅತಿಥಿ ಗೃಹದ ನವೀಕರಣಕ್ಕೆ ಹಣ ಖರ್ಚು ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಗೌರವಧನ ನೀಡಲು ಹಣವಿಲ್ಲವೇ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದರು.
ಇನ್ನೊಂದೆಡೆ, ರಾಜ್ಯ ಸರ್ಕಾರದ ಪ್ರಸ್ತಾವಿತ ‘ಕ್ಲಸ್ಟರ್ ಕಿಚನ್’ ವ್ಯವಸ್ಥೆ ವಿರೋಧಿಸಿ ಮಧ್ಯಾಹ್ನದ ಬಿಸಿಯೂಟ ನೌಕರರು ಕೂಡ ಬುಧವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ವ್ಯವಸ್ಥೆ ಜಾರಿಗೆ ತರುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದರೂ ನೌಕರರು ಹೋರಾಟ ಮುಂದುವರಿಸಿದ್ದಾರೆ.
ಸಚಿವರ ಭರವಸೆಯ ಬಗ್ಗೆ ವಿಶ್ವಾಸವಿಲ್ಲದ ಕಾರಣ ಅಧಿಕೃತವಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ನೌಕರರೊಬ್ಬರು ತಿಳಿಸಿದ್ದಾರೆ.

























































































