
ಬೆಂಗಳೂರು: ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿತರಿಸುವ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಆಹಾರದ ಪೌಷ್ಟಿಕಾಂಶ, ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶೇಷ ಆಡಿಟ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಿದೆ.
ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ 1,591 ಕೋಟಿ ರೂ. ನೆರವು ದೊರೆತಿದೆ. ರಾಜ್ಯ ಸರ್ಕಾರವೂ ಯೋಜನೆಗೆ ಅನುದಾನ ನೀಡುತ್ತಿರುವುದರಿಂದ ಮಕ್ಕಳಿಗೆ ವಿತರಿಸುವ ಆಹಾರ ನಿಗದಿತ ಗುಣಮಟ್ಟ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ಆಡಿಟ್ ನಡೆಸುವ ಕುರಿತು ಇಲಾಖೆ ಚರ್ಚಿಸುತ್ತಿದೆ. ಆಹಾರ ತಯಾರಿಕೆ, ವಿತರಣೆ ಹಾಗೂ ಪೌಷ್ಟಿಕಾಂಶದ ಪ್ರಮಾಣದ ಮೇಲೆ ನಿರಂತರ ನಿಗಾ ಇಡುವುದು ಇದರ ಉದ್ದೇಶವಾಗಿದೆ.
ಪ್ರಸ್ತುತ ವಾರದ ಮೆನ್ಯೂ ಪ್ರಕಾರ ಸೋಮವಾರದಿಂದ ಗುರುವಾರದವರೆಗೆ ತರಕಾರಿ ಸಾಂಬಾರು, ಶುಕ್ರವಾರ ಬಿಸಿಬೇಳೆ ಬಾತ್ ಹಾಗೂ ಶನಿವಾರ ಉಪ್ಪಿಟ್ಟು, ಗೋಧಿ ಪೊಂಗಲ್, ವಾಂಗಿಬಾತ್, ಚಪಾತಿ ಅಥವಾ ಪೂರಿ ಸಾಗು ನೀಡಲಾಗುತ್ತಿದೆ. ಇದರೊಂದಿಗೆ ವಾರದಲ್ಲಿ ಐದು ದಿನ ಹಾಲು, ನಿಗದಿತ ದಿನಗಳಲ್ಲಿ ರಾಗಿ ಮಾಲ್ಟ್ ಹಾಗೂ ಆರು ದಿನ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದೆ.
ತಜ್ಞರ ಸಲಹೆ ಪಡೆದು ಆಹಾರ ಪಟ್ಟಿಯಲ್ಲಿ ಬದಲಾವಣೆ ತರಲು ಇಲಾಖೆ ಚಿಂತಿಸಿದೆ. ಜಿಲ್ಲೆಗಳ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ ಮುದ್ದೆ, ಜೋಳದ ರೊಟ್ಟಿಯಂತಹ ಸ್ಥಳೀಯ ಆಹಾರಗಳನ್ನೂ ಮೆನ್ಯೂಗೆ ಸೇರಿಸುವ ಪ್ರಸ್ತಾವನೆಯಿದೆ.
ಈ ಕುರಿತು ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಸಿಯೂಟದಲ್ಲಿ ಗುಣಮಟ್ಟದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಿಕ್ಷಣದಲ್ಲಿ ಸಮಾನತೆ ಇರುವಂತೆಯೇ ಮಕ್ಕಳಿಗೆ ನೀಡುವ ಆಹಾರದಲ್ಲೂ ಸಮಾನತೆ ಇರಬೇಕು. ಆಹಾರದ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

























































































