ನಿರಂತರ ಅಭ್ಯಾಸವೇ ಯಶಸ್ಸಿನ ಮೆಟ್ಟಿಲು – ಡಾ. ಶೋಭಿತಾ ಸತೀಶ್

ಕಾರ್ಕಳ: ಕುಟುಂಬ ವ್ಯವಸ್ಥೆಯೂ ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಮಕ್ಕಳಲ್ಲಿ ಭಾವನಾತ್ಮಕ ಗಟ್ಟಿತನ ಕಡಿಮೆಯಾಗುತ್ತಿದೆ. ಆದ್ದರಿಂದ ಮಕ್ಕಳಲ್ಲಿ ಭಾವನಾತ್ಮಕ ಸಾಮರ್ಥ್ಯವನ್ನು ಬೆಳೆಸುವುದು ಅಗತ್ಯ. ಲಲಿತಕಲೆಗಳ ಅಭ್ಯಾಸವು ಭಾವನೆಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಸಾಮರ್ಥ್ಯವಿರುತ್ತದೆ. ಬೇರೆಯವರ ವ್ಯಕ್ತಿತ್ವದೊಂದಿಗೆ ಹೋಲಿಕೆ ಮಾಡಿಕೊಳ್ಳುವ ಬದಲು, ಹತ್ತಿರದಲ್ಲಿರುವ ಸಾಧಕರನ್ನು ಗುರುತಿಸಿ, ಅವರ ಸಾಧನೆ ಮತ್ತು ಜೀವನಮೌಲ್ಯಗಳಿಂದ ಸ್ಫೂರ್ತಿ ಪಡೆಯಬೇಕು. ಮಕ್ಕಳು ಮೌಲ್ಯಗಳು, ಶಿಸ್ತು ಮತ್ತು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಜ್ಞಾನ ಸಂಭ್ರಮ – 2026ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿ.ಎ. ಫೈನಲಿಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ಸಿ.ಎ. ಸಾತ್ವಿಕ್ ಪ್ರಭು ಮಾತನಾಡಿ, “ಪ್ರತಿಭೆಗಿಂತ ಪರಿಶ್ರಮವೇ ಶ್ರೇಷ್ಠ. ಪ್ರಯತ್ನವಿಲ್ಲದೆ ಯಶಸ್ಸು ಸಾಧಿಸುವ ಪ್ರತಿಭೆಗಿಂತ, ನಿರಂತರ ಪರಿಶ್ರಮದಿಂದ ಸಾಧನೆ ಮಾಡುವ ವ್ಯಕ್ತಿಯೇ ನಿಜವಾದ ವಿಜೇತ. ನಮ್ಮ ಪ್ರತಿಭೆ ಎಷ್ಟೇ ಇರಲಿ, ಅದನ್ನು ಯಶಸ್ಸಾಗಿ ಪರಿವರ್ತಿಸುವುದು ನಮ್ಮ ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಸಾಧ್ಯ. ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬೇಕೆಂದರೆ ನಾವು ನಮ್ಮ ಶ್ರಮವನ್ನು ಹಾಕಲೇಬೇಕು” ಎಂದರು.
ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು, ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಸಿ.ಎ. ಕೆ. ನಿತ್ಯಾನಂದ ಪ್ರಭು, ವಿದ್ಯಾರ್ಥಿ ನಾಯಕ ಪ್ರದ್ಯೋತ್ ಪ್ರಮಲ್ ಹಾಗೂ ವಿದ್ಯಾರ್ಥಿ ನಾಯಕಿ ಸಿನಿ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಹಾಗೂ ಉಷಾ ರಾವ್ ಯು., ಡೀನ್ ಆಫ್ ಸ್ಟೂಡೆಂಟ್ ಅಫೇರ್ಸ್ ಶಕುಂತಳಾ ಎಂ. ಸುವರ್ಣ ಮತ್ತು ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2026ನೇ ಸಾಲಿನಲ್ಲಿ ಸಾಧನೆಗೈದ ಕ್ರೀಡಾಪಟುಗಳು ಹಾಗೂ ಶಾಲಾ ಹಂತದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಕಳ ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ವಾಣಿ ಕೆ. ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ದಿವ್ಯಾ ಕೆ. ವಾರ್ಷಿಕ ವರದಿಯನ್ನು ವಾಚಿಸಿದರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪವಿತ್ರ ಹಾಗೂ ಕ್ರೀಡಾ ಸಾಧಕರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕಿ ರೇಷ್ಮಾ ಸಾಲಿಸ್ ವಾಚಿಸಿದರು. ಸಹ ಶಿಕ್ಷಕಿಯಾದ ಕುಮಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪ್ರಿಯಾ ವಂದಿಸಿದರು.

























































































