
ಕಾರ್ಕಳ: ಬಜಗೋಳಿ ರವೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರತಿವರ್ಷ ನಡೆಯುವ ಗೋದಾನ ಕಾರ್ಯಕ್ರಮವು ನ.28ರಂದು ಬಜಗೋಳಿಯಲ್ಲಿ ಜರುಗಲಿದೆ.
ಈ ಕುರಿತು ಭಾನುವಾರ ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯೋಜಕ ರವೀಂದ್ರ ಶೆಟ್ಟಿ, ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೆ ‘ಬೆದರದ ಕಾಮಧೇನು’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ, ಮೂವರು ವಿದ್ಯಾರ್ಥಿನಿಯರಿಗೆ ‘ಅಂಬಾಶ್ರೀ’ ಗೌರವ ನೀಡಿ ಸನ್ಮಾನಿಸಲಾಗುವುದು ಎಂದರು.
ಯಕ್ಷದ್ರುವ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ನರ ಶಾರ್ದೂಲ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯತೀಶ್ ಶೆಟ್ಟಿ, ಸಂತೋಷ್ ನಂದಳಿಕೆ, ಶ್ರೇಯಾಂಕ್ ಶೆಟ್ಟಿ, ಶಿಕ್ಷಕರಾದ ನಾಗೇಶ್ ಮತ್ತು ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

























































































