23.4 C
Udupi
Saturday, November 21, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 705

ಭರತೇಶ ಶೆಟ್ಟಿ,ಎಕ್ಕಾರು

ಕಾರ್ಯವೆಂದರೆ ಕೆಲಸ ಎಂದು ಹೇಳಬಹುದು. ಆದರೆ ಇಹದಲ್ಲಿ ಪರಿಣಾಮ ಅಥವಾ ಲಾಭ ನೀಡಬಲ್ಲ ಅಂತಹ ಪ್ರಯತ್ನವನ್ನು ಕೆಲಸ ಅಥವಾ ಕಾರ್ಯ ಎಂದು ಹೇಳಬಹುದು. ಹಾಗಾದರೆ ಕರ್ಮ ಎಂದರೇನು? ಇಹಲೋಕಕ್ಕೆ ಮಾತ್ರ ಸೀಮಿತವಾಗದೆ ಅದರ ಫಲ ಪುಣ್ಯ ಅಥವಾ ಪಾಪವಾಗಿ ಬದಲಾದರೆ ಅಂತಹ ಕಾರ್ಯವನ್ನು ಕರ್ಮ ಎಂದು ವ್ಯಾಖ್ಯಾನಿಸಬಹುದು‌. ಅದು ಉತ್ತಮ ಫಲ ನೀಡುವಂತಹುದಾದರೆ ಸತ್ಕರ್ಮ, ತದ್ವಿರುದ್ಧವಾದರೆ ದುಷ್ಕರ್ಮ ಎಂದು ಪರಿಗಣಿತವಾಗುತ್ತದೆ ಇಲ್ಲಿಯೂ ವಾನಪ್ರಸ್ಥದಲ್ಲಿ ದಹಿಸಲ್ಪಟ್ಟು ಹತರಾದವರ ಸ್ಥಿತಿ ಕರ್ಮಫಲದಿಂದ ನಿರ್ದೇಶಿತವಾಗಿ ಈ ರೀತಿ ಆಗಿ ಹೋಗಿದೆ.

ಹಿನ್ನೆಲೆಯನ್ನು ಅವಲೋಕಿಸಿದರೆ, ಹಿಂದೆ ಚಂದ್ರವಂಶೀಯರು ಪಾಂಡು ಪುತ್ರರಾದ ಪಾಂಡವರಿಗೂ, ಧೃತರಾಷ್ಟ್ರ ಪುತ್ರರಾದ ಧಾರ್ತರಾಷ್ಟ್ರರಿಗೂ ದಾಯಾದಿ ಕಲಹ ಉಲ್ಬಣಿಸಿದ್ದ ಸಮಯದಲ್ಲಿ ಅತಿರೇಕದ ಹುನ್ನಾರವೊಂದು ನಡೆದು ಹೋಗಿತ್ತು. ಅಂದರೆ ರಾಜಕಾರಣ ತಂತ್ರ ಮತ್ತು ಅಧಿಕಾರವನ್ನು ಬಳಸಿಕೊಂಡು ಹಸ್ತಿನಾವತಿಯಲ್ಲಿ ಜೊತೆಯಾಗಿ ಇದ್ದ ಪಾಂಡವರನ್ನು ಪ್ರತ್ಯೇಕ ಸ್ಥಾನಮಾನ ನೀಡಿ ಅರಮನೆಯಿಂದ ಹೊರಗೆ ವಾರಣಾವತಕ್ಕೆ ಕಳುಹಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗೆ ರಾಜಕುಮಾರರನ್ನು ವಿಭಾಜಿಸಿ ಪ್ರತ್ಯೇಕಿಸುವಲ್ಲಿ ತೋರಿಕೆಗೆ ನೀಡಿದ್ದ ಕಾರಣ ವಾರಣಾವತ ಪ್ರದೇಶ ರಾಕ್ಷಸರು ವಾಸಿಸುವ ಘೋರ ಕಾನನಕ್ಕೆ ಸಮೀಪದಲ್ಲಿತ್ತು ಮಾತ್ರವಲ್ಲ ಸಾಮ್ರಾಜ್ಯದ ಗಡಿ ಪ್ರದೇಶವೂ ಆಗಿತ್ತು. ಈ ಭಾಗದ ಪ್ರಜೆಗಳಿಗೆ ರಾಕ್ಷಸರು, ವನ್ಯ ಮೃಗಗಳು, ವೈರಿ ರಾಜರು, ಕಳ್ಳ ಕಾಕರು ಒಂದೊಂದು ವಿಧಾನದಿಂದ ಉಪಟಳ ನೀಡುವುದು ಸಾಮಾನ್ಯವಾಗಿತ್ತು. ಈ ಸಮಸ್ಯೆಯ ನಿವಾರಣೆಗೆ ಪ್ರಜೆಗಳ ದೂರು ಬಂದಾಗ ಹಸ್ತಿನೆಯಿಂದ ಭೀಷ್ಮಾಚಾರ್ಯರು ಹೋಗಿ ಪರಿಹರಿಸಿ ಬರುವುದು ಆ ಸಮಯದ ವಾಸ್ತವ ಸತ್ಯ. ಈ ನೆಪವನ್ನು ಬಳಸಿಕೊಂಡು ಯೋಜನೆ ರೂಪಿಸಿ, ಪಾಂಡವರ ನಾಶದ ಉದ್ದೇಶ ಹೊಂದಿದವರಾಗಿ ತಮ್ಮ ಕಾರ್ಯಸಾಧನೆಗೆ ಆಯುಧವಾಗಿಸಿದ್ದವನು ಶಕುನಿ ಮಾಮ, ದುರ್ಯೋಧನ ಮತ್ತವನ ಸೋದರರು. ವಾರಣಾವತದಲ್ಲಿ ಪಾಂಡವರ ವಾಸ್ತವ್ಯಕ್ಕಾಗಿ ಪುರೋಚನ ಎಂಬ ಮಾಂಡಳಿಕನನ್ನು ನೇಮಿಸಿ ಅರಗು ಮತ್ತು ಶೀಘ್ರ ಜ್ವಲನಶೀಲ ಕಚ್ಚಾವಸ್ತುಗಳನ್ನು ಬಳಸಿ ವೈಭವೋಪೇತವಾದ ರಾಜ ವಾಸಯೋಗ್ಯ ಅರಮನೆಯನ್ನು ನಿರ್ಮಿಸಿದ್ದರು. ಪಾಂಡವರು ಅಲ್ಲಿ ವಾಸ್ತವ್ಯ ಹೂಡಿದ ಬಳಿಕ ಸಮಯ ಸಾಧಿಸಿ ಆ ಅರಗಿನ ಅರಮನೆಯನ್ನು ಬೆಂಕಿಗಾಹುತಿಗೊಳಿಸಿ ಪಾಂಡವರನ್ನು ಸುಟ್ಟು ಭಸ್ಮಗೊಳಿಸುವುದು ಶಕುನಿ ಹಾಗು ದುರ್ಯೋಧನಾದಿಗಳ ತಂತ್ರ. ಇಂತಹ ಅಮಾನವೀಯ ಕೃತ್ಯದ ಬಗ್ಗೆ ಸ್ಪಷ್ಟ ವಿಚಾರ ಗೊತ್ತಿದ್ದರೂ ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದ ಗಾಂಧಾರಿ ಹಾಗು ಧೃತರಾಷ್ಟ್ರ ಮಕ್ಕಳಿಗೆ ಬುದ್ಧಿ ಹೇಳುವ, ತಿದ್ದಿ ಸರಿ ದಾರಿಗೆ ತರುವ ಕನಿಷ್ಠ ಪ್ರಯತ್ನವನ್ನೂ ಮಾಡಿರಲಿಲ್ಲ. ಕಣ್ಣು ಕಾಣಿಸದೆ ಕುರುಡಾಗಿದ್ದರೂ, ಅವರ ಮನಸ್ಸು ಮತ್ತು ಬುದ್ಧಿಯೂ ಮಕ್ಕಳ ಮೋಹದಿಂದ ಅಂಧತ್ವವನ್ನು ತನ್ನದಾಗಿಸಿಕೊಂಡಿತ್ತು. ಅಂದು ಮಾತಾ ಪಿತರಾದ ಗಾಂಧಾರಿ ಧೃತರಾಷ್ಟ್ರರು ತಮ್ಮ ಮಕ್ಕಳನ್ನು ತಡೆದು ಬುದ್ಧಿ ಹೇಳುತ್ತಿದ್ದರೆ ಕೇಳುತ್ತಿದ್ದರೋ ಬಿಡುತ್ತಿದ್ದರೋ ಬೇರೆ ವಿಚಾರ ಆದರೆ, ತಾವು ಈ ಮಾರಣಹೋಮಕ್ಕೆ ಬೆಂಬಲಿಗರು ಎಂಬಂತೆ ಕಣ್ಮುಚ್ಚಿ ತುಟಿ ಪಿಟಿಕ್ಕೆನ್ನದೆ ಕುಳಿತು ಈ ಪ್ರಕರಣದ ನೇರ ದೋಷಿಗಳಾಗಿ ಹೋದರು. ಮಕ್ಕಳು ಎಸಗುವ ಪಾಪ ಕರ್ಮವನ್ನು ತಡೆದು ನಿಲ್ಲಿಸುವ ಹೊಣೆಗಾರಿಕೆ ಹಾಗು ಪೂರ್ಣಾಧಿಕಾರವುಳ್ಳ ಮಾತಾಪಿತರು ಹಾಗೆ ಮಾಡದೆ ಹಿಂದುಳಿದು ಸುಮ್ಮನಿದ್ದರೆ ಅದು ಅವರ ಪಾಲಿಗೆ ಮಹಾಪರಾಧ ಆಗುತ್ತದೆ. ತತ್ಪರಿಣಾಮದ ಪಾಪ ಕರ್ಮ ಫಲ ಅವರಿಗೂ ಅಂಟಿಕೊಳ್ಳುತ್ತದೆ. ಅರಿತು ಬುದ್ಧಿ ಹೇಳದ ಅಪ್ಪ ಅಮ್ಮ ಇಬ್ಬರೂ ಮಹಾ ಪಾತಕಿಗಳಾಗಿ ಬಿಡುತ್ತಾರೆ ಇಲ್ಲಿ ಧೃತರಾಷ್ಟ್ರ ಗಾಂಧಾರಿಯರೂ ದೋಷಿಗಳಾಗಿಬಿಟ್ಟರು.

ಪ್ರಕರಣ ಮುಂದುವರಿದು ಪಾಂಡವರ ಮಾತೆ ಕುಂತಿ ಸಹಿತರಾಗಿ ವಾರಣಾವತದ ಅರಗಿನ ಅರಮನೆಯಲ್ಲಿ ವಾಸ ಮಾಡಲು ಅಲ್ಲಿಗೆ ತೆರಳಿದರು. ಅವರ ವಾಸ್ತವ್ಯ ಈ ಸಂಚಿನ ಮನೆಯೊಳಗೆ ಸಾಗತೊಡಗಿತು. ದಿನಗಳೆದಂತೆ ಬುದ್ಧಿವಂತರಾದ ಪಾಂಡವರಿಗೆ ಸಂಶಯ ಬಂದು ದುರ್ಯೋಧನನ ತಂತ್ರವೇನಿರಬಹುದು ಎಂದು ಅರಿತು ಕೊಂಡರು. ವಾರಣಾವತಕ್ಕೆ ಬರುವ ಸಮಯ ಧರ್ಮರಾಯನನ್ನು ಕರೆದು ಬುದ್ಧಿ ಮಾತು ಹೇಳಿದ್ದ ಮಹಾಮಂತ್ರಿ ವಿದುರ ಸೂಚ್ಯವಾಗಿ ಏನೋ ಹೇಳಿದ್ದನು. ಈ ಸಂಕಷ್ಟ ಸಮಯದಲ್ಲಿ ನೆನಪಾಗಿ ಆ ಕುರಿತು ಧರ್ಮರಾಯ ಯೋಚಿಸಿ ವಿದುರನ ಸಲಹೆಯನ್ನು ವಿಮರ್ಷಿಸುತ್ತಾ ವಿವೇಚಿಸತೊಡಗಿದ್ದನು. ಘೋರಾರಣ್ಯ ಕಾಡ್ಗಿಚ್ಚಿಗೆ ಆಹುತಿಯಾದಾಗ ಆ ಕಾಡಿನಲ್ಲಿ ವಾಸಿಸುವ ಮರ ಬಳ್ಳಿಗಳ ಜೊತೆ ಹೊರಗಿರುವ ಪ್ರಾಣಿ, ಪಕ್ಷಿ, ಸರ್ಪಗಳೆಲ್ಲವೂ ಸುಟ್ಟು ಭಸ್ಮವಾಗುತ್ತವೆ. ಆದರೆ ಆ ಸಮಯ ಆಳವಾದ ಬಿಲದೊಳಗೆ ವಾಸಿಸುವ ಇಲಿ ಹೆಗ್ಗಣಗಳು ಬದುಕಿ ಸುರಂಗ ಕೊರೆದು ಮತ್ತೊಂದೆಡೆ ಹೊರ ಬಂದು ಪ್ರಾಣ ಉಳಿಸಿಕೊಳ್ಳುತ್ತವೆ. ಇದೇ ರೀತಿ ನೀವೂ ಜಾಗೃತರಾಗಿರಿ ಎಂಬ ಸೂಚ್ಯ ಕಥೆಯನ್ನು ವಿದುರ ಧರ್ಮರಾಯನಿಗೆ ರಾಜರು ಗೌಪ್ಯ ವಿಚಾರವನ್ನು ಸಂವಹನ ಮಾಡಲು ಬಳಸುವ ವ್ಯಾವಾಹಾರಿಕವಲ್ಲದ ವಿಭಿನ್ನ ಸಂಜ್ಞಾ ಭಾಷೆಯಲ್ಲಿ ಹೇಳಿದ್ದನು. ಪ್ರಸ್ತುತ ವಾರಣಾವತದ ಬೆಳವಣಿಗೆಗೂ ವಿದುರನ ಸಲಹೆಗೂ ಸಾಮ್ಯತೆ ಇರುವುದನ್ನು ಅರಿತು ಜಾಗೃತನಾದ ಧರ್ಮರಾಯ ತನ್ನ ತಮ್ಮಂದಿರು ಮತ್ತು ಮಾತೆ ಕುಂತಿಯೊಡನೆ ಸಮಾಲೋಚಿಸಿ ಪರಿಹಾರೋಪಾಯ ತರ್ಕಿಸಿದ್ದನು. ಭೀಮಾರ್ಜುನರು ನಕುಲ ಸಹದೇವರು ಸೇರಿ ಅರಮನೆಯೊಳಗಿನ ಅಂತಃಪುರದ ಕೋಣೆಯಿಂದ ಬಹುದೂರದವರೆಗೆ ಸುರಂಗ ಮಾರ್ಗ ಕೊರೆದು ತಪ್ಪಿಸಿಕೊಳ್ಳುವ ವ್ಯವಸ್ಥೆಗೆ ತೊಡಗಿ ಸಿದ್ಧತೆ ಮಾಡಿಕೊಂಡಿದ್ದರು.

ಪರಿಸ್ಥಿತಿ ಹೀಗಿರಲು ಬಹಳ ಎಚ್ಚರಿಕೆಯಿಂದ ಹೊರಗಿನ ಎಲ್ಲ ಚಲನವಲನ, ಸಂದೇಶ ರವಾನೆ, ಬದಲಾವಣೆಗಳನ್ನು ನಿಕಟವಾಗಿ ಗಮನಿಸುತ್ತಿದ್ದ ಪಾಂಡವರು ಇನ್ನು ಒಂದೆರಡು ದಿನದಲ್ಲಿ ಈ ಅರಮನೆಯ ಜೊತೆ ನಮ್ಮನ್ನೂ ಸುಟ್ಟು ಹಾಕುವ ದುಷ್ಕೃತ್ಯ ಆಗಲಿದೆ ಎಂಬ ವಿದ್ಯಮಾನಗಳನ್ನು ತಿಳಿದುಕೊಂಡು, ಅಲ್ಲಿಂದ ತಪ್ಪಿಸಿಕೊಳ್ಳ ಬೇಕೆಂದು ನಿರ್ಣಯಿಸಿದರು. ಹೀಗೆ ತೀರ್ಮಾನಿಸಿದ ದಿನ ಕಾಕತಾಳಿಯವಾಗಿ ಅನಾಥಳಾದ ಓರ್ವಳು (ಬೇಡತಿ) ತನ್ನ ಬಳಗ ಅಥವಾ, ಮಕ್ಕಳೋ, ಕುಟುಂಬವೋ ಅಂತೂ ಐದಾರು ಮಂದಿ ಭಿಕ್ಷಾರ್ಥಿಗಳಾಗಿ ಬಂದಿದ್ದರು. ಕುಂತಿ ಅವರಿಗೆ ಊಟೋಪಚಾರವಿತ್ತು, ಆತಿಥ್ಯ ನೀಡಿ ಅರಮನೆಯಲ್ಲಿ ಉಳಿಸಿಕೊಂಡಿದ್ದಳು. ರಾತ್ರಿಯೂಟದ ಬಳಿಕ ಅವರೆಲ್ಲರಿಗೂ ಒಂದು ಕೋಣೆಯಲ್ಲಿ ಮಲಗಿ ನಿದ್ರಿಸುವ ವ್ಯವಸ್ಥೆ ಮಾಡಿಸಿದ್ದಳು. ಅವರೆಲ್ಲ ರಾಜಾಶ್ರಯವನ್ನು ನಂಬಿ ಸುಖವಾದ ಗಾಢ ನಿದ್ರೆಯಲ್ಲಿದ್ದರು. ಅದೇ ರಾತ್ರಿ ಅರಮನೆಯನ್ನು ಬೆಂಕಿಗೆ ಆಹುತಿಗೊಳಿಸಿ ಪಾಂಡವರು ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡು ಬದುಕುಳಿದಿದ್ದರು. ತನ್ನ ಮಕ್ಕಳಾದ ಪಾಂಡವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಯೋಚಿಸಿ ಕೈಗೊಂಡ ಪ್ರತಿತಂತ್ರ ಅರಮನೆಯನ್ನು ತಾವೇ ಸುಟ್ಟು ಹಾಕಿ ತಪ್ಪಿಸಿಕೊಳ್ಳುವುದು. ಇದನ್ನು ತಿಳಿದಿದ್ದ ಕುಂತಿ ಅತಿಥಿಗಳಾಗಿ ಬಂದು ಉಂಡು ಮಲಗಿದ್ದ ನಿರ್ಗತಿಕ ಕುಟುಂಬವನ್ನು ನಿದ್ದೆಯಿಂದ ಎಬ್ಬಿಸಿ ಪ್ರಾಣ ರಕ್ಷಣೆ ಮಾಡಲು ಮುಂದಾಗಲಿಲ್ಲ. ತನ್ನ ಮಕ್ಕಳಿಗೆ ಅವರು ಅರಮನೆಯಲ್ಲಿರುವ ವಿಚಾರ, ಅವರ ಜೀವವನ್ನು ಉಳಿಸಿ ಎಂಬ ಬುದ್ಧಿ ಮಾತು ಯಾವುದನ್ನೂ ಹೇಳಲಿಲ್ಲ. ಪರಿಣಾಮವಾಗಿ ನಿರ್ದೋಷಿಗಳೂ, ಅನಾಥರೂ ಆದ ಆ ಕುಟುಂಬ ಸಜೀವ ದಹನವಾಗಿ ಭಸ್ಮಗೊಂಡಿತು. ಆ ಅನಾಥ ಕುಟುಂಬದ ಸುಟ್ಟ ಶರೀರಾವಶೇಷಗಳು ಪಾಂಡವರದ್ದು ಎಂದು ಭ್ರಮಿಸಿ ಬಳಿಕ ಅಪರಕ್ರಿಯೆಗಳು ಹಸ್ತಿನಾವತಿಯವರಿಂದ ನಡೆಸಲ್ಪಟ್ಟಿತ್ತು. ಪಾಂಡವರು ಬದುಕುಳಿದ ಸತ್ಯವಾಗಲಿ, ಅನುಮಾನವಾಗಲಿ ದುರ್ಯೋಧನಾದಿಗಳಿಗೆ ಆ ಸಮಯ ಬಂದಿರಲಿಲ್ಲ.

ದುರ್ಯೋಧನನಿಗೆ ದ್ವೇಷವಿದ್ದುದು ಪಾಂಡವರ ಮೇಲೆ ಮಾತ್ರ. ಈ ಪ್ರಕರಣದಲ್ಲಿ ಜೀವಂತ ಭಸ್ಮವಾದ ನಿರ್ಗತಿಕ ಕುಟುಂಬದ ಪರಿಚಯವಾಗಲಿ ಪ್ರತಿಕಾರವಾಗಲಿ ಆತನಿಗಿರಲಿಲ್ಲ. ಅವರ ಮರಣದ ಅಗತ್ಯವೂ ದುರ್ಯೋಧನನಿಗಿರಲಿಲ್ಲ. ಆತನ ಗುರಿ ನಿಷ್ಪಾಂಡವ ಪೃಥ್ವಿ ಮಾತ್ರ. ದಾಯಾದಿ ಕಲಹದಲ್ಲಿ ಬೆಂದು ಕರಟಿ ಸುಟ್ಟು ಹೋದದ್ದು ಮಾತ್ರ ಒಂದು ಅನಾಥ ಸಂಸಾರ. ಈ ದುರಂತ ಸಂಭವಿಸುವಲ್ಲಿನ ವ್ಯವಸ್ಥೆ ಅಂದರೆ ಅರಮನೆ ನಿರ್ಮಾಣ ಮತ್ತು ಉದ್ದೇಶಿತ ದುಷ್ಕರ್ಮದ ಬೆಳವಣಿಗೆಗಳನ್ನು ತಡೆಯದ ಧೃತರಾಷ್ಟ್ರ ಗಾಂಧಾರಿ ಮತ್ತು ತಮ್ಮ ಉಳಿವಿಗಾಗಿ ಗೊತ್ತು ಗುರಿಯಿಲ್ಲದ ಯಾರನ್ನೋ ಹೋಮಿಸಿದ ಕುಂತಿ ನೇರ ಅಪರಾಧಿಗಳಾಗಿ ಕರ್ಮಫಲವನ್ನು ಸಂಪಾದಿಸಿಕೊಂಡರು. ಯಾರ ವಿಳಾಸ ತಪ್ಪಿದರೂ ಕರ್ಮಫಲದ ದಾರಿ ತಪ್ಪುವುದಿಲ್ಲ. ಕೃತ ಕರ್ಮ ಫಲವನ್ನು ಅನುಭವಿಸುವಲ್ಲಿ ಕಿಂಚಿತ್ ವಿಳಂಬವಾದರೂ, ಪರಿಣಮಿಸದೆ ವಿರಮಿಸುವುದಿಲ್ಲ. ಅದು ಯಾರೇ ಆಗಿರಲಿ ಅವರವರು ಮಾಡಿದ ಕರ್ಮಫಲ ಅವರನ್ನು ಬೆನ್ನು ಬಿಡದೆ ಬೆಂಬತ್ತಿ ಪರಿಣಾಮ ನೀಡಿಯೇ ನೀಡುತ್ತದೆ ಜೀವನವನ್ನು ತಪಸ್ಸನ್ನಾಗಿಸಿ ಬದುಕಿದ್ದ ಕುಂತಿಯ ಪುಣ್ಯ ಕರ್ಮಗಳೆಷ್ಟೋ ಹೇಳಲು ಅಸಾಧ್ಯ ಏಕೆಂದರೆ ಅದು ಅಗಣಿತ – ಅಮಿತ. ತತ್ಫಲವಾಗಿ ಆಕೆಗೆ ಮುಕ್ತಿ ಪ್ರಾಪ್ತವಾಗಿ ದಿವ್ಯಲೋಕ ಸದ್ಗತಿಯಾಗಿ ಒದಗಿ ಬಂದಿದೆ. ಆದರೆ ಈ ಮೂವರ ಕರ್ಮಫಲ ಸ್ವರೂಪವಾಗಿ ಕೊನೆಯ ಕಾಲಕ್ಕೆ ಜೀವಂತವಾಗಿ ದಹಿಸಲ್ಪಟ್ಟು ಅಂತ್ಯ ಕಂಡದ್ದು ಲೋಕಕ್ಕೆ ಎಚ್ಚರಿಕೆಯ ಪಾಠವಾಗಿದೆ. ಶಾಸ್ತ್ರ ಖಚಿತ ಆಧಾರದಂತೆ ಕರ್ಮ ಫಲ ಯಾವ ರೀತಿ ವ್ಯವಹರಿಸುತ್ತದೆ ಎಂದರೆ ಒಬ್ಬನು ಒಂದು ಅಪರಾಧವನ್ನು ಮಾಡುವಾಗ ತಡೆಯುವ ಶಕ್ತಿ ಇದ್ದೂ ತಡೆಯದೆ ಉಳಿದವರಿಗೆ, ಹಾಗೆಯೇ ಆ ಅಪರಾಧವನ್ನು ಪ್ರೋತ್ಸಾಹಿಸಿದವರಿಗೆ ಆ ಕರ್ಮ ಫಲ ಬಾಧಿಸುತ್ತದೆ. ಮಾತ್ರವಲ್ಲ ಅಪರಾಧ ಮಾಡಿದವನಿಗೆ, ಮಾಡಿಸಿದವನಿಗೆ, ಸಹಕಾರ ಇತ್ತವನಿಗೆ, ನೋಡಿಯೂ, ಗೊತ್ತಿದ್ದೂ ನನಗ್ಯಾಕೆ ಎಂದು ಸುಮ್ಮನುಳಿಯುವವನಿಗೆ, ಏನೂ ಮಾಡದಿದ್ದರೂ ಆ ವಿಷಯ ತಿಳಿದು ತಡೆಯುವಲ್ಲಿ ತಾನು ಅಸಮರ್ಥನಾಗಿದ್ದರೆ ಬೇರೆಯವರಿಗೆ/ ತಡೆಯಬಲ್ಲವರಿಗೆ ತಿಳಿಸಿ ತಡೆಯುವ ಪ್ರಯತ್ನವನ್ನು ಮಾಡದೆ ತಟಸ್ಥನಾಗಿ ಉಳಿದವರಿಗೆ, ಈ ಕುರಿತು ಗೊತ್ತಾದ ವಿಚಾರವನ್ನು ಗುಟ್ಟಾಗಿ ಮುಚ್ಚಿಟ್ಟು ಸುಮ್ಮನುಳಿಯುವವನಿಗೆ, ಮತ್ತು ಇದೆಲ್ಲಾ ಬೆಳವಣಿಗೆಗಳ ಮಾಹಿತಿ ದೊರೆತಿದ್ದರೂ ಅಂತಹ ದುಷ್ಟರಿಗೆ ಆಶ್ರಯ ಕೊಡುವವರಿಗೂ ಕರ್ಮಫಲ ಅಂಟಿಕೊಳ್ಳುತ್ತದೆ. ರಾಜದಂಡಧರನಾದ ರಾಜ/ ನ್ಯಾಯಾಂಗ ವ್ಯವಸ್ಥೆ ಈ ಅಪರಾಧಿಗಳಿಗೆ ಶಿಕ್ಷೆ ನೀಡದೆ ಉಳಿದರೂ, ಸತ್ಯ ಪ್ರಪಂಚಕ್ಕೆ ಜಾಹೀರಾಗದೆ ಉಳಿದು ಹೋದರೂ ಕೃತ ಕರ್ಮ ಫಲ ಯಾವ ಪಕ್ಷಪಾತವನ್ನೂ ಮಾಡುವುದಿಲ್ಲ. ಅಪರಾಧಿ ಬಲಿಷ್ಠ ಪ್ರಭಾವವನ್ನು ಬಳಸಿ ಗೌಪ್ಯವಾಗಿ ಕಾರ್ಯ ಸಾಧಿಸಿದ್ದರೂ, ಮುಚ್ಚಿಟ್ಟು ಸುಜನರಂತೆ ತಿರುಗಾಡಿದ್ದರೂ ಕರ್ಮಫಲ ಎದ್ದು ತನ್ನ ಬೇಟೆಗೆ ಹೊರಟು ನಿಂತಾಗ ಯಾವ ಬಲವೂ, ಪ್ರಭಾವವೂ, ಜಾಣ್ಮೆಯೂ ಕೆಲಸಕ್ಕೆ ಬರುವುದಿಲ್ಲ. ಒಂದು ಜನ್ಮದಲ್ಲಿ ಮಾತ್ರವಲ್ಲ ಆ ಕರ್ಮದ ಫಲ ಎಷ್ಟು ತೀವ್ರವಾಗಿ ಅಂಟಿಕೊಂಡಿದೆಯೊ ಅದು ಪೂರ್ಣ ಜೀರ್ಣವಾಗುವವರೆಗೆ ಜನ್ಮ ಜನ್ಮಾಂತರವಾದರೂ ಬೆಂಬಿಡದೆ ಆತ್ಮದ ಬೆನ್ನತ್ತಿ ಹೋಗಿ ಬಿಡುತ್ತದೆ. ಅದು ಮುಂದೆ ಮರಣಕ್ಕೂ, ಪುನರ್ಜನ್ಮಕ್ಕೂ ಕಾರಣವಾಗಿ ಫಲ ಸ್ವರೂಪವಾದ ಜೀವನವನ್ನು ಒದಗಿಸಿ ಅನುಭವಿಸುವಂತೆ ಮಾಡದೆ ಬಿಡುವುದಿಲ್ಲ

ಪುಣ್ಯಾತ್ಮರಾದ ಈ ಮೂವರು (ಧೃತರಾಷ್ಟ್ರ, ಗಾಂಧಾರಿ, ಕುಂತಿ) ಮಹಾತ್ಮರು ಸಾಧಿಸಿದ ಸತ್ಕರ್ಮಗಳ ಪುಣ್ಯ ಫಲ ಸ್ವರೂಪವಾಗಿ ಅವರ ಭಸ್ಮ, ಅವಶೇಷಗಳು ಪೃಕೃತಿಯ ಅವ್ಯಕ್ತ ಕಾರ್ಯದಿಂದ ಪಾಪನಾಶಿನಿ ಗಂಗೆಯಲ್ಲಿ ಸೇರಿ ಅಪರ ಕ್ರಿಯೆಯನ್ನು ಅತಿಮಾನುಷ ಶಕ್ತಿ ನೆರವೇರಿಸಿದಂತಾಗಿತ್ತು.

ಹಿನ್ನೆಲೆ ಹೀಗಿದ್ದರೂ ಮಾತೆಯನ್ನು ಕಳಕೊಂಡು ಮಾತೃವಿಯೋಗದಿಂದ ಪಾಂಡವರು ತೀವ್ರ ದುಃಖಕ್ಕೊಳಗಾಗಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page