
ಹೊಸದಿಲ್ಲಿ: ದೇಶದಲ್ಲಿ ಸುಮಾರು 50 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿರುವುದು ಹಾಗೂ ಮಾವೋವಾದಿ ಚಟುವಟಿಕೆಗಳನ್ನು ನಿಯಂತ್ರಿಸಿರುವುದು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ದೇಶದ ಮುಂದಿನ ಗುರಿ ಭಾರತವನ್ನು ಮಾದಕ ವ್ಯಸನ ಮುಕ್ತಗೊಳಿಸುವುದಾಗಿದ್ದು, ಈ ನಿಟ್ಟಿನಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಬುಧವಾರ ಕರೆ ನೀಡಿದ್ದಾರೆ.
ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವ ಅಗತ್ಯವನ್ನು ಒತ್ತಿಹೇಳಿದ ಮೋದಿ, ಭಾರತದಲ್ಲಿ ‘ತಿನ್ನು, ಕುಡಿ, ಮಜಾ ಮಾಡು’ ಎಂಬ ಸಂಸ್ಕೃತಿಯಿಲ್ಲ. ಉಳಿತಾಯಕ್ಕೆ ಹೆಚ್ಚಿನ ಮಹತ್ವವಿದೆ. ಬಡತನದಿಂದ ಹೊರಬಂದವರು ದುಂದು ವೆಚ್ಚದ ಕಾರಣ ಮತ್ತೆ ಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆಯಿರುವುದರಿಂದ ಹಣ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
2011ರಿಂದ 2023ರ ಅವಧಿಯಲ್ಲಿ ದೇಶದಲ್ಲಿ ಬಡತನ ಗಣನೀಯವಾಗಿ ಇಳಿಕೆಯಾಗಿದ್ದು, ಸರ್ಕಾರ, ಅಧಿಕಾರಿಗಳು, ಉದ್ಯಮಗಳು ಹಾಗೂ ಜನರ ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈ ಸಾಧನೆಯನ್ನು ಇಡೀ ದೇಶ ಸಂಭ್ರಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಗ್ಗಟ್ಟಿನ ಪ್ರಯತ್ನದಿಂದ ಬಡತನವನ್ನು ಕಡಿಮೆ ಮಾಡಲು ಮತ್ತು ಎಡಪಂಥೀಯ ಉಗ್ರವಾದದ ಬೆದರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಇದೇ ರೀತಿಯಲ್ಲಿ ಮಾದಕ ವ್ಯಸನವನ್ನೂ ನಿರ್ಮೂಲನೆ ಮಾಡಬಹುದು. ಯುವಜನರ ಭವಿಷ್ಯವನ್ನು ಕಾಪಾಡಲು ಪ್ರತಿಯೊಬ್ಬರೂ ಮಾದಕ ವ್ಯಸನದ ವಿರುದ್ಧದ ಹೋರಾಟವನ್ನು ತಮ್ಮ ವೈಯಕ್ತಿಕ ಜವಾಬ್ದಾರಿಯಾಗಿ ಪರಿಗಣಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.























































































