ಮಹಾಭಾರತ ಭಾವದೀಪ ಉಪನ್ಯಾಸ ಕಾರ್ಯಕ್ರಮ

ಹಸ್ತಿನಾಪುರಕ್ಕೆ ಅಶಾಂತಿಯನ್ನು ಸೃಷ್ಟಿಸಿದ ಕೌರವರ ನಾಶದ ನಂತರವೇ ಅಲ್ಲಿ ಶಾಂತಿ ನೆಲೆಗೊಳ್ಳಲು ಪ್ರಾರಂಭವಾಗುತ್ತದೆ. ರಾಜಧರ್ಮ, ಆಪದ್ಧರ್ಮ ಮತ್ತು ಮೋಕ್ಷ ಧರ್ಮವನ್ನು ಹೇಳಿದ ಕೃಷ್ಣ ಲೋಕಹಿತವನ್ನು ಬಯಸುವ ಕಾರ್ಯಗಳೆಲ್ಲವೂ ಧರ್ಮವೇ ಆಗಿದೆ ಎನ್ನುತ್ತಾನೆ. ದೇವರ ಕೃಪೆಗೆ ನಾವು ಪಾತ್ರರಾದರೆ ನಾವು ಕೇಳದೇ ಇದ್ದರೂ ಆತ ನಮ್ಮ ರಕ್ಷಣೆಗೆ ನಿಲ್ಲುತ್ತಾನೆ ಅನ್ನುವ ಸಂದೇಶವನ್ನೂ ಮಹಾಭಾರತ ನಮಗೆ ನೀಡುತ್ತದೆ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಏಕದಶ ಸೋಪಾನದಲ್ಲಿ ಅವರು ‘ಯುದ್ಧ – ಸ್ತ್ರೀ – ಶಾಂತಿ ಪರ್ವಗಳು’ ಎಂಬ ಕುರಿತಾಗಿ ನವೆಂಬರ್ ೧೪ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಭಾರತ ಅಂದರೆ ಯುದ್ಧ ಮಾತ್ರವಲ್ಲ. ಶಾಂತಿಯನ್ನು ಬಯಸುವ ಮಾರ್ಗವೂ ಹೌದು. ಯುದ್ಧ ನಿಂತ ಕೂಡಲೇ ಶಾಂತಿ ಲಭಿಸುತ್ತದೆ ಎಂದಲ್ಲ. ಜಯಾಪಜಯಗಳನ್ನು ಮೀರಿ, ಷಡ್ವೈರಿಗಳನ್ನು ಮಣಿಸಿ ಮನಸ್ಸನ್ನು ಶಾಂತಗೊಳಿಸಿ ಪಾರಮಾರ್ಥಿಕ ಸುಖವನ್ನನುಭವಿಸುವುದರಲ್ಲಿಯೇ ಶಾಂತಿ ಇದೆ ಎಂಬುದನ್ನು ಮಹಾಭಾರತ ತಿಳಿಸುತ್ತದೆ ಅಂದರು.
ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ‘ ಮಂಜನ ಬೈಲ್ ರಂಗಸನ್ಮಾನ್ ‘ ದತ್ತಿನಿಧಿ ಪ್ರಶಸ್ತಿಯನ್ನು ಪಡೆದ ಕಾರ್ಕಳ ‘ಕರಾವಳಿ ರಂಗಾಯಣ’ದ ನಿರ್ದೇಶಕರೂ ಆಗಿರುವ ಶ್ರೀ ಬಿ. ಆರ್. ವೆಂಕಟ್ರಮಣ ಐತಾಳ್ ಅವರಿಗೆ ಹಾರ, ಶಾಲು, ತಾಮ್ರಪತ್ರ , ಸ್ಮರಣಿಕೆ ಮತ್ತು ಹತ್ತು ಸಾವಿರ ರೂಪಾಯಿ ನಗದಿನೊಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಡಾ.ಬಿ.ಪದ್ಮನಾಭ ಗೌಡ ಅವರು ನ.೧೪ರಂದು ನಿಧನರಾಗಿದ್ದು ಅವರಿಗೆ ಶ್ರೀ ನಿತ್ಯಾನಂದ ಪೈಗಳು ನುಡಿನಮನ ಸಲ್ಲಿಸಿ ನಂತರ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಮತ್ತು ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ.ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.























































































