
ದಿನಾಂಕ 13.11.2026ರಂದು ಪದವಿ ಪೂರ್ವ ವಸತಿ ಸಹಿತ ಕಾಲೇಜು, ಮಿಯಾರು , ಇಲ್ಲಿನ ಇಂಟರಾಕ್ಟ್ ಕ್ಲಬ್ , ಸಂಸ್ಥೆಯ ಪ್ರಾಂಶುಪಾಲರು, ವಿದ್ಯಾರ್ಥಿಗಳು,ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ಅಡುಗೆ ಸಿಬ್ಬಂದಿಯವರ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಭಾಗದ ಹಲವಾರು ಶಿಕ್ಷಣ ಸಂಸ್ಥೆಗಳ ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಹರಿಕಾರ ಕಾರ್ಕಳ ಕಮಲಾಕ್ಷ ಕಾಮತ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿ ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆಯವರು ವಹಿಸಿದ್ದು ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಈ ಪರಿಸರದ ಉದಯೋನ್ಮುಖ ಉದ್ಯಮಿ ಶ್ರೀ ಪ್ರವೀಣ್ ಕುಮಾರ್ ಹೆಗ್ಡೆ ಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಶ್ರೀಯುತರು ತಮ್ಮ ಯಶಸ್ಸಿನ ಹಾದಿಯಲ್ಲಿ ಅನುಭವಿಸಿದ ಎಡರು ತೊಡರುಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಕುರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮವನ್ನು ತಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದಕ್ಕಾಗಿ ಅಭಿಮಾನ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ನ ಮಾರ್ಗ ದರ್ಶಕರಾದ ಪಿಡಿಜಿ ಡಾ.ಭರತೇಶ್ ಆದಿರಾಜ್ ರವರು ಇಂತಹ ಕಾರ್ಯಕ್ರಮಗಳು ರೋಟರಿ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಪ್ರತಿಪಾದಿಸಿದರು.






















































































