ಮುಂದಿನ 7 ದಿನಗಳ ಕಾಲ ರಾಜ್ಯಾದ್ಯಂತ ಒಣ ಹವೆ ಮುಂದುವರಿಯುವ ಸೂಚನೆ ನೀಡಿದ ಹವಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ನಿರೀಕ್ಷೆಯಿದ್ದು, ಕನಿಷ್ಠ ಉಷ್ಣಾಂಶ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಇರಲಿದೆ. ಹಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಚಳಿ ಹಾಗೂ ಮಂಜು ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ತಿಂಗಳ ಮೊದಲ 11 ದಿನಗಳಲ್ಲೇ ಹಲವು ಜಿಲ್ಲೆಗಳಲ್ಲಿ ಹಗಲಿನ ತಾಪಮಾನ 34ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದರಿಂದ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಬಿಸಿಯಾದ ನವೆಂಬರ್ ತಿಂಗಳುಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಹಗಲಿನ ಸರಾಸರಿ ತಾಪಮಾನ 30ರಿಂದ 38 ಡಿಗ್ರಿ ಸೆಲ್ಸಿಯಸ್ ಇತ್ತು.
ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 1.5ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕನಿಷ್ಠ ತಾಪಮಾನ ಮಾತ್ರ 10ರಿಂದ 18 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ಮೋಡರಹಿತ ಆಕಾಶ ಹಾಗೂ ಎಲ್ ನಿನೋ ಪ್ರಭಾವದಿಂದ ಹಗಲಿನ ಉಷ್ಣಾಂಶ ಹೆಚ್ಚಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 8ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ ಗರಿಷ್ಠ ತಾಪಮಾನದಲ್ಲಿ ಕಂಡುಬಂದಿರುವ ಏರಿಕೆ ಗಮನಾರ್ಹವಾಗಿದೆ. ಹೀಗಾಗಿ ಈ ನವೆಂಬರ್ ಕಳೆದ ಕೆಲವು ವರ್ಷಗಳಲ್ಲೇ ಹೆಚ್ಚು ಬಿಸಿಯಾದ ತಿಂಗಳಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ನವೆಂಬರ್ ಚಳಿಗಾಲ ಆರಂಭವಾಗುವ ಸಂಕ್ರಮಣ ಕಾಲ. ಈ ಅವಧಿಯಲ್ಲಿ ಮುಂಗಾರು ನಂತರದ ಮೋಡಗಳು ಕಡಿಮೆಯಾಗಿ, ಹಿಮಾಲಯ ಭಾಗದಿಂದ ತಂಪಾದ ಈಶಾನ್ಯ ಮಾರುತಗಳು ಬೀಸುತ್ತವೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಲಿದ್ದು, ಫೆಬ್ರವರಿ ಮಧ್ಯಭಾಗದಿಂದ ಕ್ರಮೇಣ ಕಡಿಮೆಯಾಗುತ್ತದೆ.
ಆದರೆ, ಎಲ್ ನಿನೋ ಪರಿಣಾಮದಿಂದ ಈ ಬಾರಿ ಹಗಲಿನ ಬಿಸಿಲು ಮುಂದುವರಿಯುವ ಸಾಧ್ಯತೆಯಿದೆ. ಮತ್ತೊಂದೆಡೆ, ಸಂಜೆ ಮತ್ತು ಬೆಳಗಿನ ಜಾವದ ನಡುವೆ ತಾಪಮಾನ ಗಣನೀಯವಾಗಿ ಇಳಿಯಬಹುದು ಎಂದು ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.






















































































