ಸಂಚಾರ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ..!
ನ.21ರಿಂದ ಡಿ.11ರವರೆಗೆ ಅವಕಾಶ

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಈ ಸೌಲಭ್ಯ ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ಲಭ್ಯವಿರಲಿದೆ.
ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಈ ಹಿಂದೆ ನೀಡಿದ್ದ ರಿಯಾಯಿತಿ ಸೌಲಭ್ಯವನ್ನು ಮತ್ತೆ ಜಾರಿಗೊಳಿಸುವಂತೆ ಸಲ್ಲಿಸಲಾದ ಮನವಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರಂತೆ, ಬಾಕಿ ದಂಡ ಹೊಂದಿರುವ ವಾಹನ ಸವಾರರು ನಿಗದಿತ ಅವಧಿಯಲ್ಲಿ ಶೇ.50ರಷ್ಟು ಮೊತ್ತ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ದೀರ್ಘಕಾಲದಿಂದ ಬಾಕಿ ಉಳಿದಿರುವ ದಂಡದ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಅವಕಾಶ ಕಲ್ಪಿಸಿದೆ. ಹೀಗಾಗಿ, ವಾಹನ ಸವಾರರು ಡಿಸೆಂಬರ್ 11ರೊಳಗೆ ರಿಯಾಯಿತಿ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.





















































































