ಭಾಗ 687
ಭರತೇಶ್ ಶೆಟ್ಟಿ ಎಕ್ಕಾರು

ಹೀಗೆ ಅರಣ್ಯಕ್ಕೆ ಹೋಗಿ ತಮ್ಮ ಹಿರಿಯರನ್ನು ನೋಡಲು ಸಿದ್ಧರಾಗುತ್ತಿದ್ದ ಪಾಂಡವರು, ದ್ರೌಪದಿ ಸುಭದ್ರೆ ತಮ್ಮ ತಮ್ಮೊಳಗೆ ಸಮಾಲೋಚನೆ ಮಾಡುವಾಗ ಕಾಡು ಸೇರಿರುವವರ ಬಗ್ಗೆ ಕಲ್ಪನೆ ಮಾಡುತ್ತಾ ಚರ್ಚಿಸತೊಡಗಿದರು. ಈಗ ಕಾಡಿನಲ್ಲಿ ಅವರು ಹೇಗಿರಬಹುದು? ಏನು ಆಹಾರ ತಿನ್ನುತ್ತಿದ್ದಾರೊ? ತಿನ್ನಲು ಏನು ಸಿಗುತ್ತಿರಬಹುದು? ಕೃಶ ಶರೀರಿಗಳಾಗಿರಬಹುದೆ? ಹೀಗೆ ಒಬ್ಬೊಬ್ಬರ ಒಂದೊಂದು ಪ್ರಶ್ನೆಗಳು ಏರುತ್ತಾ.. ಕೊನೆಗೆ ಅವರೈವರೂ ಈಗ ಬದುಕಿರಬಹುದೆ? ಅಥವಾ ಯಾರಿಗಾದರು ಏನಾದರು ಆಗಿರಬಹುದೆ? ನಾವು ಹೋದರೂ ಕಾಣ ಸಿಕ್ಕಾರೆ? ಹೀಗೆ ಉದ್ಭವಿಸತೊಡಗಿದ ಪ್ರಶ್ನೆಗಳು ಕ್ಷಣ ಕ್ಷಣಕ್ಕೂ ಆತಂಕವನ್ನು ಉಲ್ಬಣಿಸತೊಡಗಿದವು ಹೊರತು ನೊಂದ ಮನಸ್ಸಿಗೆ ಸಾಂತ್ವಾನ ಯಾವ ವಿಧಾನದಲ್ಲೂ ಸಿಗಲಿಲ್ಲ. ಹೀಗಿರಲು ತಕ್ಷಣ ಅರಮನೆಯಿಂದ ಹೊರಟು ತಮ್ಮ ಹಿರಿಯರನ್ನು, ತಾಯಿಯನ್ನು ನೋಡಿ ಬರಲು ಹೊರಡುವುದೆಂಬ ನಿರ್ಧಾರ ಪಾಂಡವರು ಕೈಗೊಂಡರು. ರಥ, ಸೈನ್ಯ, ಪರಿವಾರ ಎಲ್ಲವನ್ನೂ ಸಜ್ಜುಗೊಳಿಸಿದರು. ಪಲ್ಲಕ್ಕಿ, ಬಂಡಿ ಬಂಡಿ ಆಹಾರ, ಸುವಸ್ತುಗಳು, ಶಿಲ್ಪಿಗಳು, ಪರಿಕರಗಳು ಹೀಗೆ ಏನೇನು ಬೇಕೆಂದು ಧರ್ಮರಾಯ ಬಯಸಿದನೊ ಅದೆಲ್ಲವೂ ಸನ್ನದ್ಧವಾಯಿತು. ಪಾಕ ಪ್ರವೀಣರು, ವನಸ್ಪತಿ, ದವಸ ಧಾನ್ಯಗಳು, ಭಕ್ಷ್ಯ, ಭೋಜ್ಯಗಳು ಹೀಗೆ ಎಲ್ಲವೂ ವ್ಯವಸ್ಥೆಗೊಂಡವು. ಮರುದಿನ ಬೆಳಿಗ್ಗೆ ಪ್ರಯಾಣವೆಂದು ನಿರ್ಣಯವೂ ಆಯಿತು. ಅಂತೆಯೆ ಹೊರಟು ಬಿಟ್ಟರು. ಸುದ್ದಿ ತಿಳಿದ ಸಾವಿರಾರು ಪ್ರಜೆಗಳೂ ಅನುಸರಿಸಿ ಹೊರಟರು.
ಗಂಗಾ ನದಿಯನ್ನು ದಾಟಿ ಉತ್ತರಕ್ಕೆ ಹೋಗುತ್ತಿದ್ದಾರೆ. ದೂರದಲ್ಲಿ ಜಿಂಕೆಗಳು ಹಿಂಡು ಹಿಂಡಾಗಿ ಓಡುತ್ತಿರುವುದು ಕಾಣ ಸಿಕ್ಕಿತು. ಆದರೆ ಆ ಕಾಡಿನಲ್ಲಿ ಜನ ಸಂಚಾರವಿಲ್ಲ. ಪ್ರಕೃತಿಯ ಸಿರಿ ಮೈದಳೆದು ನಿಂತಿದೆ. ಮುಂದೆ ಮುಂದೆ ಹೋಗುತ್ತಾ ಯಮುನಾ ತೀರ ತಲುಪಿದರು. ನಿಸರ್ಗ ಸಹಜವಾದ ಕಾಡಿನ ಸೊಬಗು ಕಣ್ಮುಂದೆ ರಾರಾಜಿಸುತ್ತಿದ್ದರೂ ಪಾಂಡವರ ಮನಸ್ಸು ಯಾವುದನ್ನೂ ಆಸ್ವಾದಿಸುತ್ತಿಲ್ಲ. ಅವರಿಗೆ ತಾಯಿಯನ್ನು ಕಾಣುವ ತವಕದಲ್ಲಿ ಅನ್ಯ ಯಾವ ಸಂಗತಿಯೂ ಗಣನೆಗೆ ಬರುತ್ತಿಲ್ಲ. ಹೀಗೆ ಪ್ರಯಾಣ ಮುಂದುವರಿದಾಗ ಕೆಲವು ಆಶ್ರಮಗಳು, ತಪಸ್ವಿಗಳು ಕಾಣ ಸಿಕ್ಕರು. ಪಾಂಡವರ ಕುತೂಹಲ ಹೆಚ್ಚಿತು. ಮೆರವಣಿಗೆಯಂತೆ ಬರುತ್ತಿದ್ದ ಹಸ್ತಿನೆಯ ರಾಜ ಪರಿವಾರವನ್ನು ಕಂಡು ತಾಪಸರು ನೋಡುತ್ತ ನಿಂತುಕೊಂಡಿದ್ದಾರೆ. ಪರಿವಾರ ಸಹಿತನಾಗಿ ಯುವಕನಾದ ಮಹಾರಾಜನೋರ್ವ ತಪೋವನಕ್ಕೆ ಪ್ರವೇಶ ಮಾಡಿದ್ದನ್ನು ಈ ತನಕ ಕಂಡಿರದ ಅವರೆಲ್ಲರಿಗೂ ವಿಚಿತ್ರವಾಗುತ್ತಿದೆ. ಕಣ್ಣೆತ್ತಿ ನೋಡಿದರೆ ರಥಗಳ ಸಾಲು, ಪ್ರಜಾ ಪರಿವಾರ ಹಿಂಬಾಲಿಸಿ ಬರುತ್ತಿದೆ. ಏನಿದು ಸೋಜಿಗ! ಯಾಕಾಗಿ ಇವರೆಲ್ಲ ಇಲ್ಲಿಗೆ ಬರುತ್ತಿದ್ದಾರೆ? ಎಂದು ಮನದಲ್ಲಿ ತರ್ಕಿಸತೊಡಗಿದ್ದಾರೆ. ಆಗ ಸಹದೇವನು ತಮ್ಮ ತಾಯಿಯೇನಾದರು ಇವರ ಮಧ್ಯೆ ಇರಬಹುದೆ? ಎಂದು ರಥದಿಂದಿಳಿದು ಹುಡುಕುತ್ತಾ ಅವರ ಬಳಿಗೆ ಹೋದನು. “ಪೂಜ್ಯರೇ, ಹಸ್ತಿನಾವತಿಯ ಮಹಾರಾಜ ಧೃತರಾಷ್ಟ್ರರ ಜೊತೆ ರಾಣಿ ಗಾಂಧಾರಿ, ಕುಂತೀದೇವಿ, ವಿದುರ, ಸಂಜಯಾದಿಗಳು ವಾನಪ್ರಸ್ಥ ಕೈಗೊಂಡು ಆಶ್ರಮವಾಸಿಗಳಾಗಿದ್ದಾರೆ. ಅವರು ಎಲ್ಲಿದ್ದಾರೆ? ಅವರ ಆಶ್ರಮ ಯಾವ ಕಡೆಗಿದೆ? ಎಂದೇನಾದರು ತಿಳಿದಿದೆಯೆ? ನಾವು ಅವರ ಪುತ್ರರಾದ ಪಾಂಡವರು. ಪ್ರಜಾಪರಿವಾರದ ಜೊತೆ ಅವರನ್ನು ಕಾಣಲು ಬಂದವರು” ಎಂದು ಪರಿಚಯ ಹೇಳಿ, ಕೇಳಿದನು. ಆಗ ಸಮಗ್ರ ವಿಚಾರ ತಿಳಿದ ತಪಸ್ವಿಗಳು “ಅಯ್ಯಾ! ಇಲ್ಲಿಯೆ ಮುಂದೆ ಅನತಿ ದೂರದಲ್ಲಿ ಧೃತರಾಷ್ಟ್ರನ ಆಶ್ರಮವಿದೆ. ದಣಿದವರಂತೆ ಕಾಣಿಸುತ್ತಿದ್ದೀರಿ. ಸ್ವಲ್ಪ ಹೊತ್ತು ವಿರಮಿಸಿ ವಿಶ್ರಾಂತಿ ಪಡೆದು ಮುಂದುವರಿಯಿರಿ” ಎಂದು ಹೇಳಿದರು.
ಆಗ ವಿಷಯ ಕೇಳಿಸಿಕೊಂಡ ಧರ್ಮರಾಯನು “ಮಹಾತ್ಮರೇ, ತಾವು ಕೃಪೆ ತೋರಿದ್ದಕ್ಕಾಗಿ ಕೃತಜ್ಞತೆಗಳು. ನಾವು ತುರ್ತು ಕಾರ್ಯ ತತ್ಪರರಾಗಿರುವ ಕಾರಣ ವಿರಮಿಸುವಷ್ಟು ವ್ಯವಧಾನ ಹೊಂದಿಲ್ಲ. ಹಾಗಾಗಿ ಮುಂದುವರಿಯಲು ಅಪ್ಪಣೆ ನೀಡಬೇಕು” ಎಂದು ಕೇಳಿಕೊಂಡನು. ಅನುಮತಿ ಪಡೆದು ಅವರು ತೋರಿದ ದಾರಿಯಲ್ಲಿ ಮುಂದುವರಿದರು.
ಮುಂದುವರಿಯುವುದು…





















































































