ಭಾಗ – 683
ಭರತೇಶ್ ಶೆಟ್ಟಿ ಎಕ್ಕಾರು

ಕಾಡಿನ ಮಧ್ಯದಲ್ಲಿ ಅದೆಷ್ಟು ತಪಸ್ವಿಗಳು, ಆಶ್ರಮಗಳು ಕಣ್ಣಾಡಿಸಿದಷ್ಟೂ ಕಾಣುತ್ತಿವೆ. ದೂರ ದೂರದಲ್ಲಿ ಆಶ್ರಮವಾಸಿಗಳಾಗಿ ಪ್ರತಿಷ್ಟಾಪಿಸಿರುವ ಅಗ್ನಿಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು. ಇವರು ಐವರು ಅಂದರೆ ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯಾದಿಗಳು ಗಂಗಾ ತೀರದ ಸನಿಹದ ತಪೋವನದಲ್ಲಿ ಅಗ್ನಿಹೋತ್ರ ನಿರತರಾಗಿರುವವರ ಜೊತೆ ಕೆಲ ಸಮಯ ಕಳೆಯುವ ನಿರ್ಧಾರ ಮಾಡಿದರು. ಸ್ವಾಧ್ಯಾಯ ನಿರತರಾದವರು, ಯಾಜಕರು, ಅಗ್ನಿಹೋತ್ರಿಗಳು ಹೀಗೆ ಅಲ್ಲಿದ್ದ ಅನೇಕರ ಜೊತೆ ಇವರೂ ಸೇರಿ ಕೊಂಡರು. ಅಂದಿನ ರಾತ್ರಿ ಅಲ್ಲಿಯೆ ನೆಲದ ಮೇಲೆ ದರ್ಬೆ ಹಾಸಿ ಮಲಗಿದರು. ವಿದುರ ಸಂಜಯರು ಸ್ವಲ್ಪ ದೂರದಲ್ಲಿ ಅಂದರೆ ಕೂಗಳತೆಯ ಅಂತರದಲ್ಲಿ ದರ್ಬೆ ಹಾಸಿ ಮಲಗಿದರು. ಪ್ರಾತಃಕಾಲದಲ್ಲಿ ಎದ್ದು ನೈಮಿತ್ತಿಕ ಆಹ್ನಿಕಾದಿಗಳನ್ನು ( ದಿನ ನಿತ್ಯದ ಆಚಾರಗಳು) ಮಾಡಿ ಪೂರೈಸಿ ಉಪವಾಸ ವೃತ ನಿಷ್ಠರಾಗಿದ್ದುಕೊಂಡು ಅಲ್ಲಿಂದ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿದರು.
ಕಾಡ ದಾರಿ, ಗಂಗಾ ತೀರದಲ್ಲಿ ಪ್ರಯಾಣ ಮುಂದುವರಿಸುವಾಗ ವಿದುರನು ದಣಿದು ಬಸವಳಿದಿರುವ ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿಯನ್ನು ಕಂಡು ಮರುಗಿದನು. ತನ್ನ ಅಣ್ಣ ಪೂರ್ವಾಶ್ರಮದಲ್ಲಿ ಹಸ್ತಿನೆಯ ಅರಸನಾಗಿದ್ದ ಧೃತರಾಷ್ಟ್ರನನ್ನು ಉದ್ದೇಶಿಸಿ “ನಾವು ಇನ್ನು ಹೆಚ್ಚು ದೂರ ಪ್ರಯಾಣ ಬೆಳೆಸುವುದು ಬೇಡ. ಇಲ್ಲಿಯೆ ಎಲ್ಲಾದರೂ ಪ್ರಶಸ್ತ ಸ್ಥಳ ನೋಡಿ ಆಶ್ರಮ ರಚಿಸೋಣ” ಎಂಬ ಅಭಿಪ್ರಾಯವಿತ್ತನು. ಆಗ ಅವರೊಳಗೆ ಸಮಾಲೋಚನೆ ನಡೆದು ಭಾಗೀರಥಿ ತೀರದಲ್ಲಿ ( ಭಗೀರಥ ಧರೆಗಿಳಿಸಿದ ಕಾರಣ ಗಂಗಾ ನದಿಯ ಹೆಸರು) ಬಿಡಾರ ನಿರ್ಮಿಸಿದರು.
ಹೀಗೆ ಹಸ್ತಿನೆಯ ಚಂದ್ರವಂಶದವರು ಆಶ್ರಮವಾಸಿಗಳಾದಾಗ ಆ ಕಾಡಿನಲ್ಲಿದ್ದ ವನವಾಸಿಗಳು, ಈಗಾಗಲೆ ವಾನಪ್ರಸ್ಥ ಸ್ವೀಕರಿಸಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಾದಿ ಚತುರ್ವರ್ಣೀಯರೂ ಗುಂಪು ಗುಂಪಾಗಿ ಧೃತರಾಷ್ಟ್ರಾದಿಗಳನ್ನು ನೋಡಲು ಬಂದರು. ಅವರೆಲ್ಲರನ್ನೂ ಧೃತರಾಷ್ಟ್ರನ ಆಣತಿಯಂತೆ ಕುಂತಿ ಗಾಂಧಾರಿ ವಿದುರಾದಿಗಳು ಆಶ್ರಮ ಧರ್ಮಾನುಸಾರ ದರ್ಭಾಸನವಿತ್ತು ಸತ್ಕರಿಸಿದರು. ಬಹಳಷ್ಟು ಕುಶಲೋಪಚರಿ, ಆಶ್ರಮವಾಸ ಕ್ರಮ, ಆ ಪರಿಸರದ ವಿಚಾರ, ಪರಸ್ಪರ ಪರಿಚಯ ಹೀಗೆ ಹತ್ತು ಹಲವು ವಿಷಯಗಳ ಮಾತು -ಕಥೆಗಳಿಂದ ಹೊತ್ತು ಹೋದದ್ದು ತಿಳಿಯಲಿಲ್ಲ. ನಂತರ ಬಂದವರೆಲ್ಲರೂ ಧೃತರಾಷ್ಟ್ರಾದಿಗಳನ್ನು ಹರಸಿ ತಮ್ಮ ತಮ್ಮ ಆಶ್ರಮಗಳತ್ತ ಹೊರಟರು.
ಸಾಯಂಕಾಲವಾದಾಗ ಇವರೈವರು ಗಂಗಾ ತೀರಕ್ಕೆ ಹೊರಟರು. ಗಾಂಧಾರಿ ಕುಂತಿ ಪ್ರತ್ಯೇಕವಾಗಿ ಬೇರೆ ಸ್ನಾನ ಘಟ್ಟದಲ್ಲಿ ಸ್ನಾನಾದಿಗಳನ್ನು ಪೂರೈಸಿ ಶುಚಿರ್ಭೂತರಾದರೆ, ಧೃತರಾಷ್ಟ್ರ ವಿದುರ ಸಂಜಯಾದಿಗಳು ತುಸು ಕೆಳಗೆ ಗಂಗೆಯ ತೀರ್ಥದಲ್ಲಿ ಮಿಂದು ಶುದ್ಧರಾದರು. ಬಳಿಕ ಸಂಧ್ಯೋಪಾಸನಾದಿ ಶುಭಕಾರ್ಯಗಳನ್ನು ಪೂರೈಸಿದರು. ನಂತರ ವಿದುರ ಮತ್ತು ಕುಂತಿ ಉಳಿದವರನ್ನು ಕರೆದುಕೊಂಡು ಅಲ್ಲಿಯೆ ಸನಿಹವಿದ್ದ ಬ್ರಾಹ್ಮಣರ ಆಶ್ರಮಕ್ಕೆ ಹೋದರು. ಯಾಜಕರಾದ ಬ್ರಾಹ್ಮಣರು ರಾಜ ಧೃತರಾಷ್ಟ್ರನ ಶ್ರೇಯಸ್ಸಿಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ಯಜ್ಞವನ್ನು ಮಾಡಿದರು.
ಮರುದಿನ ದೈನಂದಿನ ಆಚಾರಗಳನ್ನು ಪೂರೈಸಿ ಪುಣ್ಯ ಭೂಮಿ ಕುರುಕ್ಷೇತ್ರ ಇರುವ ದಿಕ್ಕಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿ ಬುದ್ಧಿವಂತನೂ, ವೃದ್ಧನೂ, ವಾನಪ್ರಸ್ಥಾಶ್ರಮಿಯೂ ಆದ ಶತಯೂಪ ಎಂಬ ರಾಜರ್ಷಿಯೊಬ್ಬನು ಆಶ್ರಮವಾಸಿಯಾಗಿದ್ದನು. ಕೇಕಯ ದೇಶಗಳಿಗೆ ರಾಜನಾಗಿದ್ದು ಪ್ರಜಾರಂಜಕನಾಗಿ ಆಳ್ವಿಕೆ ನಡೆಸಿದ ಸಚ್ಚಾರಿತ್ರ್ಯವಂತ ಅರಸ. ಮಗ ಬೆಳೆದು ಸಮರ್ಥನಾದಾಗ ಮಗನಿಗೆ ಪಟ್ಟಾಭಿಷೇಕ ಮಾಡಿಸಿ, ರಾಜ್ಯಭಾರದ ಅಧಿಕಾರ ವಹಿಸಿ ವೃದ್ಧನಾದ ತಾನು ಧರ್ಮಾನುಸಾರ ತಪೋವನ ಸೇರಿದ್ದನು. ಶತಯೂಪನನ್ನು ಭೇಟಿಯಾಗಿ ಧೃತರಾಷ್ಟ್ರಾದಿಗಳು ಬಹು ವಿಚಾರದಲ್ಲಿ ಸಂವಾದ ನಿರತರಾದರು. ಬಳಿಕ ಧೃತರಾಷ್ಟ್ರನ ಬಯಕೆಯಂತೆ ಶತಯೂಪನ ಜೊತೆ ಇವರೈವರು ಪೂಜ್ಯರಾದ ವ್ಯಾಸರ ಆಶ್ರಮಕ್ಕೆ ಹೊರಟರು.
ಮುಂದುವರಿಯುವುದು…

























