ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ದರ ಹೆಚ್ಚಳ…!

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳದ ಬೆನ್ನಲ್ಲೇ ಇದೀಗ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಯನ್ನೂ ಕೆಎಂಎಫ್ ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.
ಕೆಎಂಎಫ್ ಬಿಡುಗಡೆ ಮಾಡಿರುವ ಹೊಸ ದರಪಟ್ಟಿಯ ಪ್ರಕಾರ, ನಂದಿನಿ ತುಪ್ಪದ ಬೆಲೆ ಲೀಟರ್ಗೆ ₹ 100ರಷ್ಟು ಹೆಚ್ಚಳವಾಗಿದೆ. ಬೆಣ್ಣೆ ಮತ್ತು ಪನ್ನೀರ್ ದರಗಳಲ್ಲೂ ಗಣನೀಯ ಏರಿಕೆ ಮಾಡಲಾಗಿದೆ.
ನಂದಿನಿ ತುಪ್ಪದ ಲೀಟರ್ ಬೆಲೆ ₹ 750ರಿಂದ ₹ 850ಕ್ಕೆ ಏರಿಕೆಯಾಗಿದ್ದು, ಬೆಣ್ಣೆಯ ಪ್ರತಿ ಕೆಜಿ ದರ ₹ 700ರಿಂದ ₹ 780ಕ್ಕೆ ಹೆಚ್ಚಳವಾಗಿದೆ. ಪನ್ನೀರ್ ಬೆಲೆ ಕೆಜಿಗೆ ₹ 408ರಿಂದ ₹ 485ಕ್ಕೆ ಏರಿಕೆಯಾಗಿದೆ.
ನಂದಿನಿ ಉತ್ಪನ್ನಗಳ ಪರಿಷ್ಕೃತ ದರಗಳು:
- ತುಪ್ಪ 1 ಲೀಟರ್ ಸ್ಯಾಚೆಟ್: ₹ 715ರಿಂದ ₹ 850ಕ್ಕೆ
- ತುಪ್ಪ 1 ಲೀಟರ್ ಪೆಟ್ ಜಾರ್: ₹ 735ರಿಂದ ₹ 870ಕ್ಕೆ
- ತುಪ್ಪ 15 ಕೆಜಿ ಟಿನ್: ₹ 11,625ರಿಂದ ₹ 14,100ಕ್ಕೆ
- ಉಪ್ಪು ಬೆಣ್ಣೆ 500 ಗ್ರಾಂ: ₹ 310ರಿಂದ ₹ 380ಕ್ಕೆ
- ಉಪ್ಪಿಲ್ಲದ ಬೆಣ್ಣೆ 500 ಗ್ರಾಂ: ₹ 330ರಿಂದ ₹ 390ಕ್ಕೆ
- ಉಪ್ಪಿಲ್ಲದ ಬೆಣ್ಣೆ 200 ಗ್ರಾಂ: ₹ 135ರಿಂದ ₹ 160ಕ್ಕೆ
- ಬೆಣ್ಣೆ ಬ್ಲಿಸ್ಟರ್ ಪ್ಯಾಕ್: ₹ 80ರಿಂದ ₹ 90ಕ್ಕೆ
ಈಗಾಗಲೇ ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಹಲವು ಹೋಟೆಲ್ಗಳು ಟೀ ಮತ್ತು ಕಾಫಿ ಬೆಲೆಯನ್ನು ₹ 5ರವರೆಗೆ ಏರಿಕೆ ಮಾಡಿವೆ. ಇದೀಗ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರವೂ ಹೆಚ್ಚಾಗಿರುವುದರಿಂದ ಹೋಟೆಲ್, ಬೇಕರಿ ಮತ್ತು ಸಿಹಿ ತಿಂಡಿ ಮಳಿಗೆಗಳ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ.
ದೀಪಾವಳಿ ಸಂದರ್ಭದಲ್ಲಿ ಸಿಹಿತಿಂಡಿ ಹಾಗೂ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಿರುವಾಗಲೇ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ.

























