
ಕಾರ್ಕಳ, ನವೆಂಬರ್ 4: ಶಾಲಾ ಮಕ್ಕಳಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಜಲಮೂಲಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್ (ರಿ), ಕಾರ್ಕಳ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜೆಕಾರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಣ್ಣೆಹೊಳೆಗಳಲ್ಲಿ ಸ್ವಚ್ಛತಾ ಸಂವಾದ ಹಾಗೂ ಜೀವಜಲ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ, ಶಾಲಾ ಪರಿಸರದ ನೈರ್ಮಲ್ಯ, ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು, ಪರಿಸರ ಸಂರಕ್ಷಣೆ, ನೀರಿನ ಮಿತಬಳಕೆ ಹಾಗೂ ಜಲಮೂಲಗಳ ರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.
ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆಯ ಚೀಲಗಳನ್ನು (Cotton Bags) ಪ್ರದರ್ಶಿಸಿ, ಅವುಗಳ ಉಪಯುಕ್ತತೆಯನ್ನು ವಿವರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಪೋಷಕರಿಗೂ ಬಟ್ಟೆಯ ಚೀಲಗಳ ಬಳಕೆಯ ಮಹತ್ವವನ್ನು ತಿಳಿಸುವಂತೆ ಹಾಗೂ ಕುಟುಂಬದ ಸದಸ್ಯರು ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳುವಾಗ ಬಟ್ಟೆಯ ಚೀಲಗಳನ್ನು ಕೊಂಡೊಯ್ಯುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಲಾಯಿತು. ಪರಿಸರ ಸ್ನೇಹಿ ಜೀವನಶೈಲಿಯ ಬದಲಾವಣೆ ಪ್ರತಿಯೊಂದು ಮನೆಯಲ್ಲಿಯೂ ಆರಂಭವಾಗಬೇಕು ಎಂಬ ಸಂದೇಶವನ್ನು ಈ ಮೂಲಕ ನೀಡಲಾಯಿತು.
ಕಾರ್ಯಕ್ರಮವನ್ನು ಸಂವಾದಾತ್ಮಕವಾಗಿ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ ಮತ್ತು ಜಲಸಂರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮೂಡಿಸಲಾಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಅವರ ಅಭಿಪ್ರಾಯಗಳನ್ನು ಆಲಿಸಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ವಹಿಸಬೇಕಾದ ಜವಾಬ್ದಾರಿಯನ್ನು ಮನದಟ್ಟು ಮಾಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಜೀವಜಲ ಅಭಿಯಾನದ ಅಂಗವಾಗಿ ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯವಾಗಿದ್ದು, ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಬೇಕು. ಕೆರೆ, ಬಾವಿ, ನದಿ ಸೇರಿದಂತೆ ಜಲಮೂಲಗಳಿಗೆ ಕಸ ಮತ್ತು ಅನಗತ್ಯ ತ್ಯಾಜ್ಯಗಳನ್ನು ಎಸೆಯದೆ ಅವುಗಳನ್ನು ಸ್ವಚ್ಛವಾಗಿರಿಸಬೇಕು ಎಂಬುದರ ಕುರಿತು ಅರಿವು ಮೂಡಿಸಲಾಯಿತು. ಮುಂದಿನ ಪೀಳಿಗೆಗೆ ಶುದ್ಧ ನೀರಿನ ಸಂಪನ್ಮೂಲಗಳನ್ನು ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಇದರೊಂದಿಗೆ, ಬೇಸಿಗೆಯ ಸಂದರ್ಭದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳ ದಾಹ ತಣಿಸಲು ಮನೆಯ ಸುತ್ತಮುತ್ತ ನೀರಿನ ಪಾತ್ರೆಗಳನ್ನು ಇರಿಸುವುದು ಹಾಗೂ ಜೀವಜಲದ ಮಹತ್ವವನ್ನು ಅರಿತು ಎಲ್ಲ ಜೀವಿಗಳಿಗೂ ನೀರು ಲಭ್ಯವಾಗುವಂತೆ ನೋಡಿಕೊಳ್ಳುವ ಮಾನವೀಯ ಕಾಳಜಿಯ ಬಗ್ಗೆಯೂ ತಿಳಿಸಲಾಯಿತು.
ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆಯ ಅಭ್ಯಾಸ, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಜಲಸಂರಕ್ಷಣೆಯ ಜವಾಬ್ದಾರಿಯನ್ನು ಬೆಳೆಸುವ ಮೂಲಕ ಭವಿಷ್ಯದ ಪರಿಸರ ಸ್ನೇಹಿ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದು ಈ ಅಭಿಯಾನದ ಮುಖ್ಯ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯರಾದ ಮನಿಷಾ ಕಾಮತ್, ಶ್ರೀನಿವಾಸ್ ಸುಧಾಳ, ಪ್ರಕಾಶ್ ರಾವ್ ಹಾಗೂ ಕುಕ್ಕುಜೆ ಲಕ್ಷ್ಮಣ್ ಮೇಷ್ಟ್ರು ಭಾಗವಹಿಸಿದ್ದರು.

























