ಅಂಬಾರಿ ಮತ್ತು ಸಿಂಹಾಸನ ಸೇರಿದಂತೆ ಕೆಲವು ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕೆ ಹೋಗಿಲ್ಲ
ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಮೈಸೂರು: ಮೈಸೂರು ಅರಮನೆಯ ಭೂಮಿ ಹಸ್ತಾಂತರ ಹಾಗೂ ದಸರಾ ಸಂಪ್ರದಾಯಗಳ ಕುರಿತು ಉಂಟಾಗಿರುವ ಚರ್ಚೆಗಳ ನಡುವೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಅರಮನೆಯ ಸಂಪೂರ್ಣ ಜಾಗವನ್ನು ಸರ್ಕಾರಕ್ಕೆ ನೀಡಿಲ್ಲ. ಅರಮನೆಯ ವಾಸದ ವಿಭಾಗ ಇಂದಿಗೂ ರಾಜಮನೆತನದ ಖಾಸಗಿ ಸ್ವತ್ತಾಗಿಯೇ ಉಳಿದಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಮನೆಯಲ್ಲಿ ವಾಸಿಸಲು ಸರ್ಕಾರ ನಮಗೆ ಜಾಗ ನೀಡಿಲ್ಲ. ಅದು ನಮ್ಮ ಪೂರ್ವಜರ ಸ್ವಂತ ಆಸ್ತಿ ಎಂದು ಸ್ಪಷ್ಟಪಡಿಸಿದರು. ಅರಮನೆ ಹಾಗೂ ಅದರ ಜಾಗ ಸರ್ಕಾರಕ್ಕೆ ಸೇರಿದ್ದು, ರಾಜಮನೆತನಕ್ಕೆ ವಾಸಿಸಲು ಸ್ವಲ್ಪ ಜಾಗ ನೀಡಲಾಗಿದೆ ಎಂಬ ಸಚಿವ ಯತೀಂದ್ರ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಅಂಬಾರಿ ಮತ್ತು ಸಿಂಹಾಸನ ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೆ ಬಾರದ ಖಾಸಗಿ ಆಸ್ತಿಗಳಾಗಿವೆ. 1947ರಲ್ಲೇ ಖಾಸಗಿ ಸ್ವತ್ತುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, 1951ರಲ್ಲಿ ವಿ.ಪಿ. ಮೆನನ್ ಅವರು ಅದಕ್ಕೆ ಅಧಿಕೃತ ಅನುಮೋದನೆ ನೀಡಿದ್ದರು. ಹೀಗಾಗಿ ಈ ವಸ್ತುಗಳು ಹಿಂದಿನಿಂದಲೂ ನಮ್ಮ ಸುಪರ್ದಿಯಲ್ಲಿದ್ದು, ಮುಂದೆಯೂ ನಮ್ಮದೇ ಆಗಿರಲಿವೆ ಎಂದರು.
ಅರಮನೆಯ ವಾಸದ ಭಾಗ ರಾಜಮನೆತನದ ನಿಯಂತ್ರಣದಲ್ಲಿದ್ದರೆ, ಸಾರ್ವಜನಿಕರು ವೀಕ್ಷಿಸುವ ಮುಂಭಾಗದ ಪ್ರದೇಶವನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದೆ. ಅಂಬಾರಿ, ಸಿಂಹಾಸನ ಸೇರಿದಂತೆ ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕೆ ಹೋಗಿಲ್ಲ ಎಂದು ಪ್ರಮೋದಾದೇವಿ ತಿಳಿಸಿದರು.
ಜಯಚಾಮರಾಜ ಒಡೆಯರ್ ನಿಧನದ ಬಳಿಕ 8 ಕೋಟಿ ರೂ.ಗೂ ಅಧಿಕ ತೆರಿಗೆ ಪಾವತಿಸುವ ಪರಿಸ್ಥಿತಿ ಎದುರಾದಾಗ, ಅರಮನೆಯ ನಿರ್ವಹಣೆ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಂಡಿತ್ತು. ಆದರೆ ಒಪ್ಪಂದದಂತೆ ನಡೆದುಕೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. 30 ದಿನಗಳೊಳಗೆ ಅರಮನೆಯನ್ನು ಹಿಂದಿರುಗಿಸುವಂತೆ ಆದೇಶ ಬಂದಿದ್ದರೂ ಸರ್ಕಾರ ಅದನ್ನು ಪಾಲಿಸಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳಿಗೆ ರಾಜಮನೆತನದ ಖಾಸಗಿ ಆಸ್ತಿಗಳ ಕುರಿತು ಸಮರ್ಪಕ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಸರಾ ಸಂದರ್ಭದಲ್ಲಿ ಪೊಲೀಸರ ಅತಿಯಾದ ನಿರ್ಬಂಧಗಳಿಂದ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗಿದೆ ಎಂದು ಅವರು ದೂರಿದರು. ಬ್ರಹ್ಮಪುರಿ ಗೇಟ್ ಬಳಿ ಕರ್ತವ್ಯ ಲೋಪ ಎಸಗಿದ ಎಸಿಪಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಟ್ಟಿ ಕಾಳಗ ಹಾಗೂ ಪಟ್ಟದ ಕತ್ತಿಯಿಂದ ಕುಂಬಳಕಾಯಿ ಕತ್ತರಿಸುವುದು ರಾಜಮನೆತನದ ಧಾರ್ಮಿಕ ಸಂಪ್ರದಾಯಗಳಾಗಿದ್ದು, ಅವುಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಅಂಬಾರಿ ಬಳಕೆಗೆ ಸರ್ಕಾರ ನೀಡುತ್ತಿರುವ ಹಣ ಬಾಡಿಗೆಯಲ್ಲ, ಅದು ರಾಯಲ್ಟಿ. ರಾಜಮನೆತನದ ವಸ್ತುವನ್ನು ಬಳಸಿಕೊಂಡು ಸರ್ಕಾರ ಪ್ರಚಾರ ಪಡೆಯುತ್ತದೆ. ಅದಕ್ಕಾಗಿ ರಾಯಲ್ಟಿ ನೀಡಲಾಗುತ್ತದೆ. ಎಷ್ಟು ಮೊತ್ತ ಪಡೆಯಲಾಗುತ್ತದೆ ಎಂಬುದನ್ನು ನಾನು ಬಹಿರಂಗಪಡಿಸುವುದಿಲ್ಲ. ಸರ್ಕಾರವೇ ಮಾಹಿತಿ ನೀಡಿದರೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದರು.
ಸರ್ಕಾರ ಯದುವಂಶದ ಸಂಪ್ರದಾಯಗಳನ್ನು ಮುಂದುವರಿಸುತ್ತಿಲ್ಲ, ಅದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಯದುವಂಶದ ವಾರಸುದಾರ ಸರ್ಕಾರವಲ್ಲ. ದಸರಾ ಆಚರಿಸಲು ನಮ್ಮ ಅಂಬಾರಿಯನ್ನೇ ಏಕೆ ಕೇಳಬೇಕು? ಸರ್ಕಾರವೇ ಪ್ರತ್ಯೇಕ ಅಂಬಾರಿ ತಯಾರಿಸಿಕೊಂಡು ಉತ್ಸವ ನಡೆಸಿದರೆ ನಮ್ಮ ವಿರೋಧವಿಲ್ಲ ಎಂದು ಪ್ರಮೋದಾದೇವಿ ಅಭಿಪ್ರಾಯಪಟ್ಟರು.
1998ರಲ್ಲಿ ಒಂದು ಕೋಟಿ ರೂ. ಹಾಗೂ ಒಂದು ಎಕರೆ ಜಾಗ ನೀಡುವುದಾಗಿ ಹೇಳಿ ಆರು ತಿಂಗಳಲ್ಲಿ ಅರಮನೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಅದಕ್ಕೆ ನಮ್ಮ ಪತಿ ದಿವಂಗತ ಶ್ರೀಕಂಠದತ್ತ ಒಡೆಯರ್ ಒಪ್ಪಿರಲಿಲ್ಲ. ಇಂದಿನ ಕಾಲದಲ್ಲಿ ಒಂದು ಕೋಟಿ ರೂ. ಅರಮನೆಯ ಒಂದು ಕಂಬದ ಮೌಲ್ಯಕ್ಕೂ ಸಮನಾಗುವುದಿಲ್ಲ ಎಂದು ಹೇಳಿದರು.
ಅರಮನೆ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಚರ್ಚಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ ಅವರು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದರು. ತಮ್ಮ ಹೇಳಿಕೆಗಳನ್ನು ತಿರುಚದೆ, ತಾವು ಹೇಳಿರುವ ವಿಚಾರಗಳನ್ನಷ್ಟೇ ಜನರಿಗೆ ತಲುಪಿಸುವಂತೆ ಮನವಿ ಮಾಡಿದರು.
ಅರಮನೆಯ ವಾಸದ ವಿಭಾಗದ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿದೆ. ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾದಲ್ಲಿ ನ್ಯಾಯಾಲಯದ ಮೊರೆ ಹೋಗುವ ಹಕ್ಕು ರಾಜಮನೆತನಕ್ಕಿದೆ ಎಂದು ಪ್ರಮೋದಾದೇವಿ ತಿಳಿಸಿದರು. ಅಂತಿಮವಾಗಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಈ ಕುರಿತು ಮಾತನಾಡಲು ಬಯಸಿದರೆ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಾವು ಸಂಪೂರ್ಣ ಸಿದ್ಧವಿರುವುದಾಗಿ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

























