ಭಯದಿಂದ ಪೊಲೀಸರಿಗೆ ಶರಣಾದ ಆರೋಪಿ!

ಮುಂಬೈ: ಕೊಲೆ ಮಾಡಿದ ಬಳಿಕ ಮೃತಪಟ್ಟ ಸ್ನೇಹಿತ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದಾನೆ ಎಂಬ ಭಯದಿಂದ ಯುವಕನೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿಯಲ್ಲಿ ನಡೆದಿದೆ.
ಡೊಂಬಿವ್ಲಿ ನಿವಾಸಿ, ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರಭು ಕಾರ್ಕಡೆ (24) ಪೊಲೀಸರಿಗೆ ಶರಣಾದ ಆರೋಪಿ. ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಅವರ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಮುಂದೆ ಪ್ರಭು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸ್ನೇಹಿತನೊಂದಿಗೆ ಮದ್ಯಪಾನ ಮಾಡುವ ವೇಳೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ಆತನನ್ನು ಮನೆಯಲ್ಲೇ ಹೊಡೆದು ಕೊಂದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಕೋಪರ್ ಲಿಂಕ್ ರಸ್ತೆ ಸಮೀಪದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದನು.
ಆದರೆ, ಕೊಲೆ ನಡೆದ ಮರುದಿನದಿಂದಲೇ ಮೃತ ಸ್ನೇಹಿತ ವಿಶಾಲ್ ಪದೇಪದೇ ಕನಸಿನಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದ ಎಂದು ಪ್ರಭು ಪೊಲೀಸರಿಗೆ ಹೇಳಿದ್ದಾನೆ. ಸತತ 15 ದಿನಗಳ ಕಾಲ ಕನಸಿನಲ್ಲಿ ಕಾಡುತ್ತಿದ್ದ ಕಾರಣ ನೆಮ್ಮದಿಯಿಂದ ನಿದ್ರಿಸಲೂ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಕನಸಿನ ಭಯ ಮತ್ತು ಪಶ್ಚಾತ್ತಾಪದಿಂದ ಮಾನಸಿಕವಾಗಿ ಕುಗ್ಗಿದ ಪ್ರಭು, ಕೊನೆಗೆ ಪೊಲೀಸರ ಬಳಿ ತೆರಳಿ ತನ್ನ ಕೃತ್ಯವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1)ರ ಅಡಿಯಲ್ಲಿ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

























