
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಆರ್ಥಿಕ ದುಸ್ಥಿತಿ ಹಾಗೂ ಖಾಲಿ ಬೊಕ್ಕಸದ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಒಂದು ಲೀಟರ್ ಮೊಸರಿನ ಬೆಲೆಯನ್ನು 54 ರೂ.ನಿಂದ 68 ರೂ.ಗೆ ಹೆಚ್ಚಿಸಲಾಗಿದ್ದು, ಶೇ.25.93ರಷ್ಟು ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರಿನ ದರವೂ 28 ರೂ.ನಿಂದ 34 ರೂ.ಗೆ ಏರಿಕೆಯಾಗಿದೆ. ಈಗಾಗಲೇ ಹಾಲಿನ ದರವನ್ನು ಲೀಟರ್ಗೆ 8 ರೂ. ಹೆಚ್ಚಿಸಿರುವ ಸರ್ಕಾರ, ಮೊಸರಿನ ಬೆಲೆಯನ್ನೂ ಏಕಾಏಕಿ ಶೇ.21ರಿಂದ 26ರಷ್ಟು ಹೆಚ್ಚಿಸಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆ ಉಂಟುಮಾಡಿದೆ ಎಂದು ಜೋಶಿ ಟೀಕಿಸಿದ್ದಾರೆ.
ಮೊಸರು ದಿನನಿತ್ಯದ ಆಹಾರ ಪದಾರ್ಥವೇ ಹೊರತು ಐಷಾರಾಮಿ ವಸ್ತುವಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ವಿಫಲವಾಗಿರುವ ಸರ್ಕಾರ ತನ್ನ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೇರುತ್ತಿದೆ. ಇದು ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ಸರ್ಕಾರದ ನೀತಿಗೆ ಹಿಡಿದ ಕೈಗನ್ನಡಿ ಎಂದು ಅವರು ಕಿಡಿಕಾರಿದ್ದಾರೆ.
ಇದೇ ವೇಳೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ದರ ಏರಿಕೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕನೇ ಬಾರಿಗೆ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಈ ಸರ್ಕಾರ ಬಹಳ ದಿನ ಇರಲ್ಲ ಎಂದಿದ್ದಾರೆ.
























