24.5 C
Udupi
Sunday, November 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 676

ಭರತೇಶ ಶೆಟ್ಟಿ,ಎಕ್ಕಾರು

“ಮಹಾರಾಜಾ! ನೀವು ಹೇಳಿದುದೆಲ್ಲಾ ಒಪ್ಪುವಂತಹ ವಿಚಾರಗಳೇ ಆಗಿವೆ. ಆತ್ಮಸಾಕ್ಷಿಯಾಗಿ ನಿಮ್ಮ ಮನದಲ್ಲಿ ಏನೇನು ವಿಷಯಗಳಿದ್ದವೋ ಅದೆಲ್ಲವನ್ನೂ ಹೊರ ಹಾಕಿದ್ದೀರಿ. ಆದರೆ ಹಸ್ತಿನೆಯ ಸಾಮ್ರಾಜ್ಯದ ಪ್ರಜೆಯಾಗಿ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ನೀವು ಅನುಮತಿ ನೀಡಬೇಕು” ಎಂದನು. ಆಗ ಧೃತರಾಷ್ಟ್ರನು “ಪೂಜ್ಯರೇ! ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯವೇನಿದೆಯೊ ಅದನ್ನು ಯಥಾವತ್ತಾಗಿ ತಿಳಿಸಿ. ಯಾವ ರೀತಿಯ ಭಯ, ದಾಕ್ಷಿಣ್ಯ ಹೊಂದದಿರಿ” ಎಂದು ಸಮ್ಮತಿ ಸೂಚಿಸಿದನು. ಆಗ ಆ ವೃದ್ಧನು “ಪ್ರಭುಗಳೇ! ನಿಮ್ಮ ಮಗ ದುಷ್ಟನಾಗಿ ವ್ಯವಹರಿಸಿದ ಎಂದು ಹೇಳುತ್ತಿದ್ದೀರಿ. ಧರ್ಮಾತ್ಮರಾದ ಪಾಂಡವರಿಗೆ ಕೇಡು ಬಯಸಿದ ಎಂದೂ ಹೇಳಿರುವಿರಿ. ಆ ವಿಷಯ ಸತ್ಯವೇ ಹೌದು. ಕೌಟುಂಬಿಕವಾಗಿ ರಾಜ ಪರಿವಾರದೊಳಗೆ ಅಂತಹ ಘಟನೆಗಳು ನಡೆದಿರುವುದು ಹೌದು. ದುರ್ಯೋಧನನ ಮನಸ್ಥಿತಿಯನ್ನು ಒಳ ಹೊಕ್ಕು ತರ್ಕಿಸಿದರೆ ಆತ ಮಹಾರಾಜರ ಮಗನಾಗಿ ಈ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಲು ಬಯಸಿದ್ದನು. ಅಧಿಕಾರ ಪಡೆಯಲು ತನಗಾಗುವಷ್ಟು ಹೋರಾಟ ತಂತ್ರಗಳೆಲ್ಲವನ್ನು ಬಳಸುವಲ್ಲಿ ಹಿಂದುಳಿದವನಲ್ಲ. ರಾಜಕೀಯದಲ್ಲಿ ಇದು ಸರಿಯೊ ತಪ್ಪೊ ಎಂದು ತೀರ್ಮಾನಿಸುವುದು ತುಸು ಕಷ್ಟ. ವಿಚಾರ ಹೀಗಿದ್ದರೂ ದುರ್ಯೋಧನನ ಆಡಳಿತ ಅವಧಿಯಲ್ಲಿ ಪ್ರಜೆಗಳಿಗೆ ಯಾವ ತೆರನಾದ ಕಷ್ಟವೂ ಒದಗಿರಲಿಲ್ಲ. ಪ್ರಜಾರಂಜಕನಾಗಿ ದಕ್ಷ ಆಳ್ವಿಕೆಯನ್ನು ಮಾಡಿದ್ದಾನೆ. ನಮ್ಮೆಲ್ಲರ ಜೀವನವೂ ನೆಮ್ಮದಿಯಿಂದ ಸಾಗಿತ್ತು. ಆ ವಿಚಾರವಾಗಿ ಆತನಿಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ. ಆದರೆ ಕಾಲ ಚಕ್ರ ತಿರುಗಿದಾಗ ಪಾಂಡವ ಕೌರವರ ನಡುವಿನ ಹೊಂದಾಣಿಕೆ ಸರಿಹೊಂದದ ಕಾರಣ ಅನಿವಾರ್ಯವಾಗಿ ಯುದ್ದ ಸಂಭವಿಸಿತು. ಪರಿಣಾಮ ಅವನ ಕಾಲ ಬೇಗನೆ ಕಳೆದು ಹೋಯಿತು. ಭೂ ಭಾರ ಕಳೆದು ಧರ್ಮದ ಸ್ಥಾಪನೆ ಆದುದನ್ನು ಕಂಡ ಪ್ರತ್ಯಕ್ಷ ಸಾಕ್ಷಿಗಳಾಗಿ ನಾವಿದ್ದೇವೆ. ಇಂತಹ ಮಹತ್ತರವಾದ ಪರಿವರ್ತನೆಯ ಕಾಲಘಟ್ಟದಲ್ಲಿ ಇಂತಹುದೆಲ್ಲ ಆಗ ಬೇಕಾದುದು – ಆಗಿ ಹೋಯಿತು. ತಡೆದು ನಿಲ್ಲಿಸಲು ನೀವಲ್ಲ ಯಾರಿಂದಲೂ ಸಾಧ್ಯವಾಗದು ಎಂಬ ಸತ್ಯವನ್ನು ನಾವು ಬಲ್ಲವರಾಗಿದ್ದೇವೆ. ಅದೆಷ್ಟು ಜನರಿಗೆ ನಾನಾ ತರಹದ ಬಂಧು ವಿಯೋಗವೂ ಬಂದೊದಗಿತು. ನಿಮಗೂ ಪುತ್ರಶೋಕ ಪ್ರಾಪ್ತವಾಯಿತು. ಇದೇ ಸಂಸಾರದ ಕುರಿತಾಗಿ ಹೇಳುವುದಾದರೆ ಕರ್ಣನನ್ನು ಕಳಕೊಂಡ ಕುಂತಿದೇವಿಯ ದುಃಖವೂ ಕಡಿಮೆಯೇನಲ್ಲ. ಅಭಿಮನ್ಯುವಿನ ಮರಣದ ದುಃಖ ಅರ್ಜುನ ಸುಭದ್ರೆಯರಿಗೆ ಇನ್ನೂ ಮರೆಯಲಾಗದ ವೇದನೆ ನೀಡುತ್ತಿರಬಹುದು. ಐವರು ಉಪಪಾಂಡವರ ಹತ್ಯೆಯ ಶೋಕ ಇನ್ನೂ ದ್ರೌಪದಿ ಸಹಿತ ಪಾಂಡವರ ಮನಸ್ಸಿನಿಂದ ಮಾಸಿ ಹೋಗಿರಲು ಸಾಧ್ಯವಿಲ್ಲ. ಇನ್ನು ಮಿತ್ರ ರಾಜರು, ಪಿತೃವಿಯೋಗ, ಪತಿ ವಿಯೋಗ, ಭ್ರಾತೃ ವಿಯೋಗ, ಪುತ್ರ ವಿಯೋಗದ ಬಾಧೆ ಅನುಭವಿಸುತ್ತಿರುವ ಪ್ರಜಾಕೋಟಿ ನಮ್ಮ ಜೊತೆಗಿದೆ. ಹಾಗಾಗಿ ನಿಮಗಾಗುತ್ತಿರುವ ವಿಯೋಗ ದುಃಖ ಕೇವಲ ನಿಮಗೆ ಮಾತ್ರವಲ್ಲ. ಅದೆಷ್ಟು ಜನರಿಗೆ ಆಗುತ್ತಿದೆಯೆಂದು ಗಣನೆ ಮಾಡಲು ಸಾಧ್ಯವೇ ಹೇಳಿ? ಹಾಗೆಂದು ಮಿಂಚಿ ಹೋದ ಕಾಲಕ್ಕೆ ಈಗಲೂ ಚಿಂತೆ ಮಾಡುತ್ತಾ ಕೂರುವುದು ಎಷ್ಟು ಸಮಂಜಸ? ಧರ್ಮಾತ್ಮನಾದ ಧರ್ಮರಾಯ ಮತ್ತವನ ಸೋದರರು ತಮ್ಮ ಮಕ್ಕಳು ಮತ್ತು ಸೋದರರನ್ನು ಕಳಕೊಂಡಿದ್ದರೂ ಆ ದುಃಖವನ್ನು ಸಹಿಸಿಕೊಂಡು ಮಾಡಬೇಕಾದ ಎಲ್ಲ ಕರ್ತವ್ಯಗಳನ್ನು ಪೂರೈಸುತ್ತಿದ್ದಾರೆ. ಸದ್ಧರ್ಮದಿಂದ ರಾಜ್ಯವಾಳುತ್ತಿದ್ದಾರೆ. ಸತ್ಯ ಕಣ್ಣ ಮುಂದೆ ಇರುವಾಗ ಮರುಗಿ ಕೊರಗುತ್ತಿರುವುದು ಸರಿಯಲ್ಲ. ಇಂತಹ ಧರ್ಮಿಷ್ಠನಾದ ಅರಸ ಚಂದ್ರವಂಶದ ಉತ್ತರಾಧಿಕಾರಿಯಾಗಿರುವುದಕ್ಕೆ ಹೆಮ್ಮೆ ಮತ್ತು ಗೌರವ ಭಾವ ತಳೆದು ಬದುಕುವುದು ವಿಹಿತ. ಪ್ರಸ್ತುತ ಕಾಲದಲ್ಲಿ ಧರ್ಮನಿರತನಾದ ಸಮರ್ಥ ಚಕ್ರವರ್ತಿ ಧರ್ಮರಾಯನೊಡನೆ ಬದುಕಿ ಸತ್ಕರ್ಮಗಳಲ್ಲಿ ಜೊತೆಯಾಗುತ್ತಾ ಪುಣ್ಯ ಸಂಪಾದನೆ ಮಾಡುವುದು ಸೂಕ್ತ ಎಂದು ನನ್ನ ಅಭಿಪ್ರಾಯ. ನನ್ನ ಮಾತಿನಿಂದ ನಿಮ್ಮ ಮನಸ್ಸಿಗೇನಾದರು ನೋವಾಗಿದ್ದರೆ ಮನ್ನಿಸಬೇಕು. ನಿಮಗೆಲ್ಲರಿಗೂ ಉತ್ತರೋತ್ತರವಾಗಲಿ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹರಸುತ್ತೇನೆ” ಎಂದು ಹೇಳಿ ಕೈ ಮುಗಿದನು.

ಈ ಮಾತು ಕೇಳಿ ಧೃತರಾಷ್ಟ್ರನಿಗೆ ಬಹಳಷ್ಟು ಸಮಾಧಾನವಾಯಿತು. ತಾನು ಸಾಕಿ ಸಲಹಿದ ಮಕ್ಕಳ ಬಗ್ಗೆ ಸದಭಿಪ್ರಾಯವಿದೆ. ಮಾತ್ರವಲ್ಲ ವಿಯೋಗ ದುಃಖ ಎಲ್ಲರಿಗೂ ಬಾಧೆ ನೀಡುತ್ತಿದೆ. ಹಾಗಾಗಿ ದುಃಖಿಸುವುದು ತರವಲ್ಲ ಎಂದು ಮನದಲ್ಲಿ ಯೋಚಿಸತೊಡಗಿದನು‌. ಹೀಗೆ ತರ್ಕಿಸಿ ಏನೊ ಮಹತ್ತರವಾದ ಒಂದು ನಿರ್ಧಾರವನ್ನು ಕೈಗೊಂಡನು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page