“ಪರಿಹಾರ ನೀಡುವುದಾದರೆ ಯಾವುದೇ ಷರತ್ತಿಲ್ಲದೇ ಕೊಡಿ, ಇಲ್ಲವಾದಲ್ಲಿ ‘ಝೀರೋ ಬ್ಯಾಲೆನ್ಸ್’ ಒಪ್ಪಿಕೊಳ್ಳಿ”: ಶಾಸಕ ವಿ.ಸುನಿಲ್ ಕುಮಾರ್

ಬರದಿಂದ ತತ್ತರಿಸಿರುವ ರೈತರಿಗೆ ಸರ್ಕಾರ ರಾಜ್ಯ ಸರ್ಕಾರ ಪರಿಹಾರ ನೀಡುವ ನೆಪದಲ್ಲಿ ಕ್ರೂರ ಅಣಕವಾಡುವುದಕ್ಕೆ ಮುಂದಾಗಿದೆ. 2500 ಪರಿಹಾರ ನೀಡುವುದಕ್ಕೆ 17 ನಿಬಂದನೆ ವಿಧಿಸುವ ಮೂಲಕ ಅನ್ನದಾತರ ಬಗ್ಗೆ ತಮ್ಮ ಬದ್ಧತೆ ಏನೆಂಬುದನ್ನು ತೋರ್ಪಡಿಸಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಶಾಸಕ ವಿ.ಸುನಿಲ್ ಕುಮಾರ್ ಟೀಕೆ ವ್ಯಕ್ತಪಡಿಸಿದ್ದಾರೆ.
226 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ರೈತರಲ್ಲಿ ಭೇದವೆಣಿಸದೇ ಪರಿಹಾರ ನೀಡಬೇಕಾದದ್ದು, ಸರ್ಕಾರದ ಕರ್ತವ್ಯ. ಅದು ಕೂಡಾ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಭರವಸೆ ಕೊಟ್ಟ ಮೇಲೆ ಅದರಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಅದು ಸದನದ ಹಕ್ಕು ಚ್ಯುತಿಯಾಗುತ್ತದೆ. ಆದರೆ ಸರ್ಕಾರ ಪರಿಹಾರ ನೀಡುವುದಕ್ಕೆ 17 ನಿಬಂದನೆ ವಿಧಿಸಿರುವುದು ನಾಚಿಕೆಗೇಡಿನ ಸಂಗತಿ. ಪರಿಹಾರ ನೀಡುವುದೇ ಆದರೆ ಎಲ್ಲರಿಗೂ , ಯಾವುದೇ ಷರತ್ತಿಲ್ಲದೇ ಕೊಡಿ. ಇಲ್ಲವಾದರೆ ಝೀರೋ ಬ್ಯಾಲೆನ್ಸ್ ಸರ್ಕಾರದಲ್ಲಿ ಇಷ್ಟು ಮಾತ್ರ ಮಾಡಲು ಸಾಧ್ಯ ಎಂದು ಒಪ್ಪಿಕೊಳ್ಳಿ ಎಂದು ಮಾಜಿ ಸಚಿವ ಶಾಸಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
























