ಕಾರ್ಕಳ ಬಿಜೆಪಿಯ ಭದ್ರ ಕೋಟೆ…!

ರಾಜ್ಯದಲ್ಲಿ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೇರಲಿದೆ ಎಂದು ರಾಜಕೀಯ ವಿಶ್ಲೇಷಣಾ ಸಂಸ್ಥೆ ‘ಬಾರ್ ಡೇಟಾ – ವೋಟ್ಇಂಡಿಯಾ’ ತನ್ನ ಇತ್ತೀಚಿನ ವರದಿಯಲ್ಲಿ ಭವಿಷ್ಯ ನುಡಿದಿದೆ.
ಸಂಸ್ಥೆಯು ಅಕ್ಟೋಬರ್ ಕೊನೆಯ ವಾರ ಬಿಡುಗಡೆ ಮಾಡಿರುವ ವೋಟರ್ ಟ್ರೆಂಡ್ ವರದಿಯ ಪ್ರಕಾರ, ಒಟ್ಟು 224 ಕ್ಷೇತ್ರಗಳ ಪೈಕಿ ಎನ್ಡಿಎ ಮೈತ್ರಿಕೂಟ ಬರೋಬ್ಬರಿ 149 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಆಡಳಿತರೂಢ ಕಾಂಗ್ರೆಸ್ ಕೇವಲ 75 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಎಂದು ತಿಳಿಸಿದೆ.
ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಬಲ
ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಮತಗಳು ಬಿಜೆಪಿಯತ್ತ ಗಣನೀಯವಾಗಿ ಕ್ರೋಢೀಕರಣಗೊಳ್ಳುತ್ತಿದ್ದು, ಈ ಭಾಗದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ
ರಾಜ್ಯದಲ್ಲೇ ಕಾಂಗ್ರೆಸ್ ಪಕ್ಷವು ಎನ್ಡಿಎಗಿಂತ ಮುನ್ನಡೆ ಕಾಯ್ದುಕೊಂಡಿರುವ ಏಕೈಕ ಭಾಗವೆಂದರೆ ಕಲ್ಯಾಣ ಕರ್ನಾಟಕ. ಆದರೆ, ಇಲ್ಲೂ ಕೂಡ ದಿನದಿಂದ ದಿನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಅಂತರ ಕ್ಷೀಣಿಸುತ್ತಿದ್ದು, ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಬಿಜೆಪಿ ಪಾರುಪತ್ಯ
ಕರಾವಳಿ ಹಾಗೂ ಮಲೆನಾಡು ಭಾಗಗಳು ಬಿಜೆಪಿಯ ಭದ್ರಕೋಟೆಯಾಗಿ ಮುಂದುವರಿಯಲಿವೆ. ಕರಾವಳಿಯಲ್ಲಿ ಕಾಂಗ್ರೆಸ್ ತಂದ ‘ತುಳು ಭಾಷಾ ಸ್ಥಾನಮಾನ’ದ ತಂತ್ರಗಾರಿಕೆ ಮತಗಳಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಗಿದೆ ಎಂದು ವರದಿ ಹೇಳಿದೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆ
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಒಂದು ವರ್ಗದ ಮತದಾರರು ಕಾಂಗ್ರೆಸ್ನಿಂದ ದೂರವಾಗುತ್ತಿದ್ದು, ಇದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡಲಿದೆ ವರದಿ ಹೇಳುತ್ತದೆ.
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಜಯಭೇರಿ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೆಡಿಎಸ್ ಪರ ಸ್ಪಷ್ಟ ಅಲೆ ಕಂಡುಬಂದಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ನ ಒಳಗಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯ ಪಕ್ಷಕ್ಕೆ ಭಾರಿ ಹೊಡೆತ ನೀಡಲಿದೆ ಎಂದು ಬಾರ್ ಡೇಟಾ – ವೋಟ್ಇಂಡಿಯಾ ತಿಳಿಸಿದೆ.






















