
ನಂದಳಿಕೆ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿ ಚಾಲನೆಗೆ ಪೂರ್ವಭಾವಿ ಸಭೆ.
ಕಾರ್ಕಳ : ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಯ ಚಾಲನೆ ಹಾಗೂ ಕೆದಿಂಜೆ–ನಂದಳಿಕೆ ಗ್ರಾಮಸ್ಥರ ಸಭೆ ಆಯೋಜಿಸುವ ಕುರಿತು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವತಿಯಿಂದ ಅಕ್ಟೋಬರ್ 18ರ ಭಾನುವಾರ ಪೂರ್ವಭಾವಿ ಸಭೆ ನಂದಳಿಕೆ ದೇವಾಲಯದಲ್ಲಿ ನಡೆಯಿತು.
ಸಭೆಯಲ್ಲಿ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಯ ಚಾಲನಾ ಸಮಾರಂಭವನ್ನು ನವೆಂಬರ್ 1ರಂದು
ಅರ್ಥಪೂರ್ಣವಾಗಿ ಆಯೋಜಿಸುವುದು ಹಾಗೂ ಕೆದಿಂಜೆ–ನಂದಳಿಕೆ ಗ್ರಾಮಸ್ಥರನ್ನು ಒಗ್ಗೂಡಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡುವ ಹಾಗೂ ಗ್ರಾಮಸ್ಥರ ಸಭೆ ನಡೆಸುವ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಕ್ಷೇತ್ರದ ಟ್ರಸ್ಟ್ ನ
ಅಧ್ಯಕ್ಷ ನಂದಳಿಕೆ ಚಾವಡಿ ಅರಮನೆ ಯನ್. ಸುಹಾಸ್ ಹೆಗ್ಡೆ ಮಾತನಾಡಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರ ಮಹತ್ವದ್ದಾಗಿದೆ. ಕ್ಷೇತ್ರದ ಜೀರ್ಣೋದ್ದಾರ ಕಾರ್ಯವು ನಮ್ಮೆಲ್ಲರ ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಒಗ್ಗಟ್ಟಿನ ಪ್ರತೀಕವಾಗಿದೆ. ಈ ಪವಿತ್ರ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲು ಗ್ರಾಮಸ್ಥರು, ಭಕ್ತಾದಿಗಳು, ಸಮಿತಿಯ ಸದಸ್ಯರು ಹಾಗೂ ಗಣ್ಯರು ಕೈಜೋಡಿಸಬೇಕು. ಕಾಮಗಾರಿಯ ಚಾಲನಾ ಸಮಾರಂಭ ಮತ್ತು ಗ್ರಾಮಸ್ಥರ ಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಸಭೆಯಲ್ಲಿ ಮುಂಬೈ ಸಮಿತಿಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಕಾನಬೆಟ್ಟು, ಸಮಿತಿಯ ಸಂಘಟಕರಾದ ಹರೀಶ್ ಶೆಟ್ಟಿ ಕಾನಬೆಟ್ಟು, ಕಿಶೋರ್ ಶೆಟ್ಟಿ ಕಾನಬೆಟ್ಟು, ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಶೋಭಾ ಎಸ್.ಹೆಗ್ಡೆ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿ.ಕೆ ರಾವ್ ನಂದಳಿಕೆ ನಿರೂಪಿಸಿ, ವಂದಿಸಿದರು.






















