
ಬೆಂಗಳೂರು: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಮನೆಗೆ ಬೀಗ ಹಾಕಿದ್ದರಿಂದ ಅಥವಾ ಮನೆ ಖಾಲಿ ಇದ್ದ ಕಾರಣ ಸಮೀಕ್ಷೆ ಪೂರ್ಣಗೊಳ್ಳದವರು ಅಕ್ಟೋಬರ್ 31ರೊಳಗೆ ಸಮೀಪದ ಎಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ಸಮೀಕ್ಷೆಯ ವೇಳೆ ಫಲಾನುಭವಿಗಳು ಲಭ್ಯವಿಲ್ಲದ ಕಾರಣ ಅರ್ಹರು ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಮತ್ತು ಅಮೃತಜ್ಯೋತಿ ಫಲಾನುಭವಿಗಳೂ ಸೇರಿದಂತೆ ಒಟ್ಟು 74.29 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಈ ಪೈಕಿ 72.40 ಲಕ್ಷಕ್ಕೂ ಹೆಚ್ಚು ಮಂದಿಯ ಪರಿಶೀಲನೆ ಪೂರ್ಣಗೊಂಡಿದ್ದು, ಶೇ.97.5ರಷ್ಟು ಪ್ರಗತಿ ಸಾಧಿಸಲಾಗಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಸುಮಾರು 16.1 ಲಕ್ಷ ಮನೆಗಳಿಗೆ ಬೀಗ ಹಾಕಿರುವುದು ಹಾಗೂ 28,519 ಮನೆಗಳು ಖಾಲಿ ಇರುವುದು ಕಂಡುಬಂದಿದೆ. ಹೀಗಾಗಿ, ಈ ಮನೆಗಳ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿತ್ತು.
ಬೆಸ್ಕಾಂ ಮನವಿಯ ಮೇರೆಗೆ ಸರ್ಕಾರ ದಾಖಲೆಗಳನ್ನು ಖುದ್ದಾಗಿ ಸಲ್ಲಿಸಲು ಅಂತಿಮ ಅವಕಾಶ ಕಲ್ಪಿಸಿದೆ. ಫಲಾನುಭವಿಗಳು ಅಕ್ಟೋಬರ್ 31ರೊಳಗೆ ದಾಖಲೆ ಪರಿಶೀಲನೆ ಪೂರ್ಣಗೊಳಿಸಿ, ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.






















