ಭಾಗ – 666
ಭರತೇಶ್ ಶೆಟ್ಟಿ, ಎಕ್ಕಾರು

ಹಿಂದೆ ಪವಿತ್ರ ಭೂಮಿ ಕುರುಕ್ಷೇತ್ರ ಪ್ರದೇಶದಲ್ಲಿ ಓರ್ವ ಬಡ ಬ್ರಾಹ್ಮಣನ ಸಂಸಾರ ವಾಸವಾಗಿತ್ತು. ಬ್ರಾಹ್ಮಣ ಆತನ ಧರ್ಮಪತ್ನಿ, ಮಗ ಮತ್ತು ಸೊಸೆ ಸಂಸಾರದ ಸದಸ್ಯರಾಗಿದ್ದರು. ಭಿಕ್ಷಾವೃತ್ತಿ ಅವರಿಗೆ ಜೀವನಾಧಾರ ಕಸುಬಾಗಿತ್ತು. ಸಮೃದ್ಧವಾದ ಊರಿನಲ್ಲಿ ಈ ಬ್ರಾಹ್ಮಣ ಕುಟುಂಬದ ಸಂಸಾರಕ್ಕೆ ಯಾವ ರೀತಿಯಿಂದಲೂ ಭಿಕ್ಷೆಯ ಕೊರತೆಯಾಗುತ್ತಿರಲಿಲ್ಲ. ಪೂಜ್ಯ ಭಾವದಿಂದ, ಪುಣ್ಯದಾನವೆಂದು ಎಲ್ಲರೂ ಭಿಕ್ಷೆಯನ್ನು ಶ್ರದ್ಧೆಯಿಂದ ನೀಡುತ್ತಿದ್ದರು. ಆದರೆ ಸುಭಿಕ್ಷವಾಗಿದ್ದ ಆ ಊರಿಗೆ ದುರ್ಭಿಕ್ಷ ಬಂದೊದಗಿತು. ಅರಸನ ಧರ್ಮ ಕಾರ್ಯ, ನ್ಯಾಯ ಮಾರ್ಗ ತಪ್ಪಿತೊ? ಅಲ್ಲ ಯಾವ ದೈವ ಮುನಿಯಿತೊ! ತಿಳಿಯದು. ಆದರೆ ಕಾಲ ಕಳೆದಂತೆ ಊರಿನಲ್ಲಿ ಬರಗಾಲ ತಲೆದೋರಿ ಬಡತನ ತಾಂಡವವಾಡತೊಡಗಿತು. ಸದಾ ಭಿಕ್ಷೆ ನೀಡುತ್ತಿದ್ದ ಮನೆಗಳ ಒಲೆಯಲ್ಲಿ ಬೆಂಕಿ ಕಾಣದೆ ದಿನ ಕೆಲವು ಕಳೆಯುವಂತಾಯಿತು. ಇನ್ನು ಬೇಡಿ ತಿನ್ನುತ್ತಿದ್ದ ಬ್ರಾಹ್ಮಣ ಕುಟುಂಬದ ಕಥೆಯನ್ನು ಅರ್ಥ ಮಾಡಿಕೊಳ್ಳಬಹುದಲ್ಲವೆ!. ಇಂತಹ ದುಸ್ತರ ಕಾಲದಲ್ಲಿ ಒಂದು ದಿನ ಬಡಬ್ರಾಹ್ಮಣ ಊರಿಡಿ ಭಿಕ್ಷೆಗಾಗಿ ಸುತ್ತಾಡಿದರೂ ಏನೂ ಸಿಗಲಿಲ್ಲ. ಆ ದಿನ ಪೂರ್ತಿ ನಿರಾಹಾರಿಗಳಾಗಿ ಕಳೆದರು. ಮರುದಿನ ಬೆಳಗ್ಗೆದ್ದು ದೇವರಿಗೆ ವಂದಿಸಿ ಮತ್ತೆ ಭಿಕ್ಷಾಟನೆಗೆ ಹೊರಟರು. ಆ ದಿನವೂ ಎಲ್ಲೆಲ್ಲಿ ಅಲೆದರೂ ಏನೂ ಸಿಗಲಿಲ್ಲ. ಅಲೆದು ಅಲೆದು ಮಧ್ಯಾಹ್ನಕ್ಕಾಗುವಾಗ ಇಬ್ಬರು ಒಪ್ಪೊತ್ತು ಉಣ್ಣಬಹುದಾದಷ್ಟು ಜವೆಗೋಧಿ ದಾನರೂಪದಲ್ಲಿ ಸಿಕ್ಕಿತು. ಮನೆಯಲ್ಲಿ ಹೆಂಗಸರಿಗೆ ಅಂದಿನ ಭಿಕ್ಷಾ ಪ್ರಾಪ್ತಿಯನ್ನು ನೀಡಿ ಅಪ್ಪ ಮತ್ತು ಮಗ ಸ್ನಾನಕ್ಕೆ ಹೊರಟರು. ಅತ್ತೆ ಸೊಸೆ ಸೇರಿಕೊಂಡು ಗೋಧಿಯನ್ನು ಕುಟ್ಟಿ ಹಿಟ್ಟು ಮಾಡಿ ಊಟ ಸಿದ್ಧಪಡಿಸಿದರು. ಸ್ನಾನ ಪೂರೈಸಿ ಬಂದ ಬ್ರಾಹ್ಮಣ ಮತ್ತು ಅವನ ಮಗ ಅನುಷ್ಠಾನಗಳನ್ನೆಲ್ಲ ಪೂರೈಸಿ, ಅಂದಿನ ಅಡುಗೆಯ ಒಂದು ಭಾಗವನ್ನು ಅಗ್ನಿಗೆ ಹವಿಸ್ಸಾಗಿ ಸಮರ್ಪಿಸಿದರು. ಇಬ್ಬರು ಉಣ್ಣುವಷ್ಟು ಮಾತ್ರ ಇದ್ದರೂ ಒಂದು ಪಾಲು ಹವಿಸ್ಸಾಗಿ ಅರ್ಪಿಸಿ, ಉಳಿದುದನ್ನು ನಾಲ್ಕು ಪಾಲು ಮಾಡಿಕೊಂಡು ಭೋಜನಕ್ಕೆ ಸಿದ್ಧರಾದರು. ಒಬ್ಬರ ಊಟವನ್ನು ಹಂಚಿ ತಿನ್ನಬಹುದು. ಆದರೆ ಹಲವರ ಊಟವನ್ನು ಒಬ್ಬರಿಗೆ ತಿನ್ನಲಾಗದು. ಇಲ್ಲೂ ಹಾಗೆಯೆ ಅರೆ ಹೊಟ್ಟೆ ತುಂಬುವಷ್ಟಿದ್ದರೂ ಸಂತೋಷದಿಂದ ಊಟಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಆಗ ಯಾರೊ ಮನೆ ಬಾಗಿಲಿಗೆ ಬಂದರು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸಿ ಅರ್ಘ್ಯ ಪಾದ್ಯಾದಿಗಳನ್ನಿತ್ತು ಸತ್ಕರಿಸಿ ಕುಳ್ಳಿರಿಸಿದರು. ಊಟದ ಹೊತ್ತಿನಲ್ಲಿ ಬಂದ ಅತಿಥಿಯಲ್ಲಿ ಊಟವಾಗಿದೆಯೆ? ಎಂದು ಕೇಳಿದರು.ಉತ್ತರವಾಗಿ ಹಸಿದು ಬಂದವನೆಂದು ತಿಳಿಯಿತು. ಕೂಡಲೆ ಆ ಬಡ ಬ್ರಾಹ್ಮಣ ತನ್ನ ಪಾಲಿನ ಊಟವನ್ನು ಬ್ರಾಹ್ಮಣನಿಗೆ ಉಣ ಬಡಿಸಲು ಪತ್ನಿಗೆ ನೀಡಿದನು. ಬಂದಿದ್ದ ಅತಿಥಿ ಉಂಡು, ಹಸಿವು ಇಂಗಲಿಲ್ಲ ಎಂದು ಹೇಳಿದಾಗ ಬ್ರಾಹ್ಮಣನ ಪತ್ನಿ ಅತಿಥಿ ದೇವರಿಗೆ ಸಮಾನರೆಂದು ತನ್ನ ಪಾಲಿನ ಊಟವನ್ನು ಆತನಿಗೆ ಪ್ರೀತಿಯಿಂದ ಉಣಬಡಿಸಿದಳು. ತುಂಬಾ ಹಸಿದು ಕಂಗಾಲಾಗಿದ್ದ ಆ ಅತಿಥಿಗೆ ಅದೂ ಸಾಕಾಗಲಿಲ್ಲ. ಇದನ್ನರಿತ ಬ್ರಾಹ್ಮಣನ ಮಗ ಕೂಡಲೆ ತನ್ನ ಪಾಲಿನ ಊಟವನ್ನು ತಂದು ಅಮ್ಮನ ಕೈಗಿತ್ತು ಬಡಿಸಲು ಹೇಳಿದನು. ಅದನ್ನುಂಡರೂ ಹಸಿವೆ ನೀಗಲಿಲ್ಲ ಎಂದಾಗ ಸೊಸೆಯೂ ತನ್ನ ಪಾಲಿನದ್ದನ್ನು ಅತಿಥಿ ಸತ್ಕಾರಕ್ಕಾಗಿ ಅತ್ತೆಯ ಕೈಗಿತ್ತಳು. ಅವರ್ಯಾರ ಮನದಲ್ಲೂ ನಾವು ಉಣ್ಣಲಿಲ್ಲ ನಿನ್ನೆಯಿಂದ ಏನೂ ತಿನ್ನದೆ ಹಸಿದಿದ್ದೇವೆ ಎಂಬ ಭಾವನೆ ಇರಲಿಲ್ಲ. ಅತಿಥಿಯ ಸೇವೆ ಮಾಡುತ್ತಿದ್ದೇವೆ ಎಂಬ ಉತ್ಸಾಹ ಒಬ್ಬರಿಗಿಂತ ಒಬ್ಬರಲ್ಲಿ ಉಕ್ಕೇರುತ್ತಿತ್ತು. ಆದರೆ ಬದಿಯಲ್ಲಿ ನಿಂತಿದ್ದ ಬ್ರಾಹ್ಮಣನ ಮನಸ್ಸು ಬಹಳಷ್ಟು ಸಂಕಟ ಪಡುತ್ತಿತ್ತು. ಕಣ್ಣುಗಳು ತುಂಬಿ ಕಣ್ಣೀರು ಹರಿಯಿತು. ತನ್ನ ಮನೆಯವರು ನಿನ್ನೆಯಿಂದ ಹಸಿದಿದ್ದಾರೆ ಎಂಬ ವಿಚಾರ ಆತನಿಗೆ ನೆನಪಿತ್ತು. ಮಗ ಅವನ ಪಾಲಿನದ್ದನ್ನು ಬಡಿಸಲು ನೀಡಿದಾಗ ದುಃಖ ಇನ್ನಷ್ಟು ಹೆಚ್ಚಾಯಿತು. ಸೊಸೆಯೂ ಅವಳ ಪಾಲಿದ್ದನ್ನು ನೀಡಿದಾಗ ಅಸಹನೀಯ ದುಃಖ ಆತನದ್ದಾಗಿ ಕಣ್ಣೀರು ಹರಿದು ಬಿಟ್ಟಿತು. ಬಡ ಬ್ರಾಹ್ಮಣನಿಗೆ ನನ್ನ ಮನೆಯವರ ಪಾಲಿನ ತುತ್ತು ಕಿತ್ತು ಅತಿಥಿಗೆ ಬಡಿಸಬೇಕಾಯಿತಲ್ಲಾ ಎಂಬ ವೇದನೆ ಕಾಡಿದರೂ, ಅವರು ನಾಳೆ ಉಂಡಾರು, ಬಂದಿರುವ ಅತಿಥಿ ದೇವನಿಗೆ ಈಗ ಏನು ನೀಡಿ ಹೊಟ್ಟೆ ತುಂಬಿಸಲಿ? ಆತನ ಹಸಿವು ತಣಿಯದಿದ್ದರೆ ಏನು ಮಾಡುವುದು ದೇವರೇ? ಯಾಕಾಗಿ ಇಂತಹ ಸ್ಥಿತಿ ನೀಡಿದೆ? ಅತಿಥಿಗೆ ಹೊಟ್ಟೆ ತುಂಬಾ ಉಣಬಡಿಸುವ ಆಸೆಯಿದೆ. ಆತ ತುಂಬಾ ಹಸಿದಿದ್ದಾನೆ. ನಾನೇನು ಮಾಡಲಿ ದೇವಾ! ಎಂಬ ದುಃಖ ಅವನದ್ದಾಯಿತು. ಅತಿಥಿ ಬಂದಾಗ ಆತನ ಹಸಿವು ನೀಗಿಸಲಾರದಷ್ಟು ದೌರ್ಭಾಗ್ಯದ ದಿನ ಬಂತಲ್ಲಾ! ಈಗ ಸೊಸೆಯ ಪಾಲಿನದ್ದನ್ನು ನೀಡಿದ ಬಳಿಕವೂ ಆತನ ಹಸಿವು ಇಂಗದಿದ್ದರೆ ದಾರಿಯೇನು? ನಮಗಾದರೆ ಹಸಿವು ಸಹಿಸಿ ಅಭ್ಯಾಸವಿದೆ. ಆದರೆ ಮನೆಗೆ ಬಂದವರನ್ನು ಅರೆ ಹೊಟ್ಟೆಯಲ್ಲಿ ಹೇಗೆ ಕಳುಹಿಸುವುದು? ಇನ್ನು ನೀಡಲು ನಮ್ಮ ಬಳಿ ಏನೂ ಇಲ್ಲ. ಇದು ಸತ್ಯವಾದರೂ ಅದನ್ನು ಹೇಗೆ ಹೇಳುವುದು? ಎಂದು ಬಹಳಷ್ಟು ಕೊರಗುತ್ತಿದ್ದಾನೆ ಹೊರತು ತಾವ್ಯಾರೂ ಉಣ್ಣಲಿಲ್ಲ ಎಂಬ ಚಿಂತೆ ಆತನಿಗಿರಲಿಲ್ಲ.
ಆಗ ಗಂಡನ ದುಃಖದ ಮುಖ ನೋಡಿದ ಪತ್ನಿ ಆತನ ಬಳಿಗೆ ಹೋದಳು. ಅವಳನ್ನು ಅನುಸರಿಸಿ ಮಗ ಸೊಸೆಯೂ ಜೊತೆಯಾದರು. ದುಃಖವೇಕೆ? ಎಂದು ಅವರೆಲ್ಲರೂ ಕೇಳಿದಾಗ “ಒಬ್ಬನೇ ಒಬ್ಬ ಅತಿಥಿ ಹಸಿದು ಬಂದಾಗ ಆತನ ಹೊಟ್ಟೆ ತುಂಬಿಸಲಾಗದೆ ಹೋಯಿತಲ್ಲಾ! ದೇವರು ಯಾಕಾದರೂ ಈ ಸ್ಥಿತಿ ನಮಗಿತ್ತಿದ್ದಾನೆ? ಅದನ್ನು ನೆನೆದು ಕೊರಗುತ್ತಿದ್ದೇನೆ” ಎಂದನು. ಆಗ ಅವನ ಮಡದಿ ಮತ್ತು ಮಕ್ಕಳು “ಸ್ವಾಮೀ! ಇಂತಹ ಬರಗಾಲದಲ್ಲೂ ದೇವರು ನಮ್ಮ ಮನೆಯಲ್ಲಿ ಹಸಿದು ಬಂದವನಿಗೆ ನೀಡಲು ಏನೋ ಒಂದಿಷ್ಟಾದರೂ ವ್ಯವಸ್ಥೆ ನೀಡಿದನಲ್ಲವೆ? ಒಂದು ವೇಳೆ ನಾವು ಉಣ್ಣಲು ಕುಳಿತು ಎಂಜಲು ಮಾಡಿಯಾಗಿದ್ದರೆ? ಅಥವಾ ಉಂಡು ಮುಗಿಸಿದ್ದರೆ? ಆ ಹೊತ್ತು ಈ ಅತಿಥಿ ಬಂದಿದ್ದರೆ ನಾವೇನೂ ನೀಡಲಾಗುತ್ತಿರಲಿಲ್ಲ. ದೇವರು ನಮಗೆ ಸಹಾಯವನ್ನು ಮಾಡಿ ಈ ಅತಿಥಿಗೆ ನಮ್ಮ ಊಟವನ್ನಾದರೂ ನೀಡುವ ಸೌಭಾಗ್ಯ ಕರುಣಿಸಿದ್ದಾನೆ. ಪೂರ್ಣ ಹಸಿವು ನೀಗಿಸಲಾಗದೆ ಹೋದರೂ ನಮ್ಮ ಮನೆಗೆ ಬಂದವರ ಹೊಟ್ಟೆಯನ್ನು ಕಿಂಚಿತ್ತಾದರು ತಣಿಸುವ ಯೋಗ ನಮ್ಮದಾಗಲಿಲ್ಲವೆ? ನಾವೆಲ್ಲರೂ ಸಂತೋಷದಿಂದ ಅತಿಥಿಗೆ ಉಣಬಡಿಸಲಿಲ್ಲವೆ? ನಮ್ಮ ಮನೆ ಬಾಗಿಲಿಗೆ ಬಂದವರನ್ನು ಬರಿದು ಹೊಟ್ಟೆಯಲ್ಲಿ ಕಳುಹಿಸುವ ದೌರ್ಭಾಗ್ಯ ನಮ್ಮದಾಗಲಿಲ್ಲವಲ್ಲ” ಎಂದು ಹೇಳಿ ಸಂತೈಸಿದರು. ಅಲ್ಲಿದ್ದ ನಾಲ್ವರಲ್ಲಿ ಯಾರೂ ತಮ್ಮ ಹಸಿವಿನ ಬಗ್ಗೆಯಾಗಲಿ, ತಮ್ಮ ಊಟದ ಬಗ್ಗೆಯಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಎಂತಹ ಉತ್ತಮ ಸಂಸ್ಕಾರದ ಸಂಸಾರವದು!
ಊಟ ಮಾಡುತ್ತಿದ್ದ ಅತಿಥಿ ಇವರೊಳಗಿನ ತೊಳಲಾಟವನ್ನು ನೋಡುತ್ತಿದ್ದಾನೆ.
ಮುಂದುವರಿಯುವುದು…






















