30.2 C
Udupi
Wednesday, October 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 663

ಭರತೇಶ ಶೆಟ್ಟಿ,ಎಕ್ಕಾರು

ನಕುಲನು ಕುದುರೆಯ ಬಳಿಗೆ ಹೋಗಿ ಅದರೊಂದಿಗೆ ಕೆಲ ಕ್ಷಣಗಳ ಕಾಲ ನಿಂತನು. ನಂತರ ಅಲ್ಲಿ ನೆರೆದವರೆಲ್ಲರಿಗೂ ಕೇಳಿಸುವಂತೆ ಕುದುರೆಯ ಭಾವಗಳಿಗೆ ಮುಖವಾಣಿಯಾದನು “ನನ್ನ ಬೇಡಿಕೆ ದೇವರಿಗೆ ಅರ್ಥವಾಗಿದೆ. ಆದರೆ ಎಲ್ಲರಿಗೂ ತಿಳಿಯುವಂತಾಗಲಿ ಎಂದು ಭಗವಂತ ಬಯಸಿರಬಹುದು. ಅದಕ್ಜಾಗಿ ನಿಮ್ಮ ಮೂಲಕ ಹೇಳಿಸಿಕೊಳ್ಳುತ್ತಿರಬಹುದು. ಯಾಗಕ್ಕೆ ಆಹುತಿಯಾಗಲಿರುವ ನನಗೆ ಯಾವ ಆಸೆಗಳೂ ಉಳಿದಿಲ್ಲ. ಇಂದಲ್ಲದಿದ್ದರೆ ಮುಂದೆ ಎಂದೋ ಒಂದು ದಿನ ನನಗೆ ಮರಣ ಬರಲೇ ಬೇಕು. ಈಗ ನನಗೆ ಉತ್ತಮ ಗತಿಯದ್ದಾಗಲಿ, ಸ್ವರ್ಗದ್ದಾಗಲಿ ಅಪೇಕ್ಷೆಯಿಲ್ಲ. ದೇವರನ್ನು ಕಣ್ಣಾರೆ ಕಂಡು ಧನ್ಯನಾಗಿದ್ದೇನೆ. ದೇವರನ್ನು ಕಂಡು ಸೇವಿಸುತ್ತಿರುವ ನನಗೆ ಅನ್ಯ ಯಾವ ಉನ್ನತ ಸ್ಥಿತಿ ಒದಗಲಿಕ್ಕಿದ್ದರೂ ಅದರ ಕುರಿತಾಗಿ ಆಸಕ್ತಿ ಉಳಿದಿಲ್ಲ. ಈಗ ನನಗಾಗುತ್ತಿರುವುದು ಒಂದೇ ಒಂದು ಮಹದಾಸೆ. ಕಾಣುತ್ತಿರುವ ದೇವರನ್ನು ಮಾತ್ರ ಬಯಸಿದ್ದೇನೆ. ಅವರಲ್ಲಿ ಒಂದಾಗಿ ಸದಾ ಅವರಲ್ಲಿ ಐಕ್ಯವಾಗಿ ನಿತ್ಯಾನಂದದಿಂದ ಇರಬೇಕು ಎಂಬ ಏಕೈಕ ಆಸೆ. ಅದನ್ನು ಬಿಟ್ಟರೆ ನನಗೆ ಬೇರೆ ಯಾವ ಬೇಡಿಕೆಯೂ ನನ್ನದ್ದಾಗಿ ಉಳಿದಿಲ್ಲ. ಶ್ರೀದೇವರು ಕೃಪೆದೋರಿ ನನ್ನ ಈ ಜನ್ಮದ ಕೊನೆಯಾಸೆ ಈಡೇರಿಸಿ ಅನುಗ್ರಹಿಸಿದರೆ, ಅದಕ್ಕಿಂತ ಪರಮೊಚ್ಚವಾದುದು ಏನೂ ಈ ಜಗದಲ್ಲಿ ಇರದು. ಆ ಸುಯೋಗವನ್ನು ಕರುಣಿಸು ದೇವಾ ಎಂದು ಬೇಡುತ್ತಿದ್ದೇನೆ” ಎಂದು ನಕುಲ ಕುದುರೆಯ ಮನದಾಸೆಯನ್ನು ಮನುಷ್ಯ ಭಾಷೆಗೆ ಅನುವಾದಿಸಿ ಘೋಷಣೆ ಮಾಡುವ ಸ್ವರದಲ್ಲಿ ಹೇಳಿದನು.

ಕುದುರೆಯ ಕೋರಿಕೆ ಕೇಳಿ ಅಲ್ಲಿ ನೆರೆದಿದ್ದ ಋಷಿವರೇಣ್ಯರಿಗೂ, ಬ್ರಾಹ್ಮಣೋತ್ತಮರಿಗೂ, ರಾಜಾಧಿರಾಜರಿಗೂ ಮಾತ್ರವಲ್ಲ ಸರ್ವರಿಗೂ ಮಹದಾನಂದವಾಯಿತು. ಯಾಗ ದೀಕ್ಷಿತನಾಗಿರುವ ಧರ್ಮರಾಯನ ಕಣ್ತುಂಬಿ ಬಂತು. ಆತ ಧರ್ಮ ಮೂರ್ತಿಯಲ್ಲವೆ? ಧರ್ಮ ಸೂಕ್ಷ್ಮವನ್ನು, ಆತ್ಮ ನಿವೇದನೆಯನ್ನು ಧರ್ಮಜನು ಸ್ಪಷ್ಟವಾಗಿ ಅರಿಯಬಲ್ಲವನು. ಕರ ಜೋಡಿಸಿ ಶ್ರೀಕೃಷ್ಣ ಪರಮಾತ್ಮನಲ್ಲಿ “ಹೇ ವಾಸುದೇವ ಕೃಷ್ಣಾ! ನೀನು ಭಕ್ತವತ್ಸಲ, ಭಕ್ತರ ದಾಸನೂ ಆಗಿರುವೆ. ಪಶುವಾಗಿ ಜನಿಸಿದರೂ ನಮ್ಮ ಯಾಗಾಶ್ವ ಮಹತ್ತರವಾದುದರ ಬಗ್ಗೆ ಚಿಂತಿಸುವಷ್ಟು ಶ್ರೇಷ್ಠ ಬುದ್ಧಿ ಪಡೆದಿದ್ದರೆ ಅದು ನಿನ್ನ ಅನುಗ್ರಹ ವಿಶೇಷದಿಂದ. ಭದ್ರಾವತಿಯ ಯವನಾಶ್ವನ ಬಳಿ ಇದ್ದ ಈ ದಿವ್ಯಾಶ್ವವನ್ನು ನಮ್ಮ ಯಾಗಾಶ್ವವಾಗಿ ಸೂಚಿಸಿದವನು ನೀನಲ್ಲವೆ? ದೇವ ಭಕ್ತರ ಸಂಬಂಧ ಯಾವಾಗಿನಿಂದ ಬೆಸೆಯಲ್ಪಟ್ಟಿತ್ತೋ! ನಮಗರಿಯದು. ಆದರೂ ನಿಮ್ಮೀರ್ವರ ಬಾಂಧವ್ಯದ ಮಧ್ಯೆ ಮಧ್ಯವರ್ತಿಯಾಗಿ ತುರಗದ ಬೇಡಿಕೆಯನ್ನು ಅನುಗ್ರಹಿಸಬೇಕೆಂದು ನಾನೂ ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.

ಶ್ರೀಕೃಷ್ಣ ಪರಮಾತ್ಮ ಮಂದಹಾಸ ಬೀರುತ್ತಾ ಕುದುರೆಯ ಬೆನ್ನು ಸವರಿದನು. ಅದು ತನ್ನ ಬಳಿ ಬಂದು ಬೆನ್ನು ಪೂಸಿದ ಭಗವಂತನ ಪಾದಕ್ಕೆ ಮುತ್ತಿಕ್ಕಿತು. ಕೂಡಲೆ ಶ್ರೀಕೃಷ್ಣ ಅದರ ತಲೆಯನ್ನು ನೇವರಿಸಿ ಮುಖದಡವಿದನು. ಅದು ನಿನ್ನೆಚ್ಚೆಯನ್ನು ಅನುಗ್ರಹಿಸುವೆ ಎಂಬ ಸೂಚನೆಯಾಗಿತ್ತೋ ಏನೋ! ಕುದುರೆಯ ಕಂಗಳಲ್ಲಿ ಸಂತೋಷದ ಮಿಂಚು ಹೊಳೆಯಿತು. ಅತ್ಯಾನಂದದಿಂದ ಕೆನೆದು ಕುಪ್ಪಳಿಸಿ ಕುಣಿಯಿತು. ನೋಡುತ್ತಿದ್ದ ಎಲ್ಲರ ಕಣ್ಣುಗಳು ತುಂಬಿ ಮಂಜಾದವು. ತಮಗರಿವಿಲ್ಲದೆ ಅಲ್ಲಿ ನೆರೆದಿದ್ದವರ ಕರಗಳು ಜೋಡಿಸಲ್ಪಟ್ಟು ಸ್ವಯಂಪ್ರೇರಿತವಾಗಿ ವಂದಿಸಿದವು.

ಇದಾದ ಬಳಿಕ ಯಾಗದ ವಿಧಿಗಳು ಮುಂದುವರಿದವು. ಸಾಕ್ಷಾತ್ ಶ್ರೀಕೃಷ್ಣ ಯಜ್ಞ ಸ್ವರೂಪನಲ್ಲವೆ? ಪ್ರತ್ಯಕ್ಷ ಭಗವಂತ ನಿಂತು ಆತನ ಸನ್ನಿಧಿಯಲ್ಲಿ ಯಾಗ ನಡೆಯುವಾಗ ಹವಿರ್ಭಾಗ ಸ್ವೀಕೃತವಾಗಿದೆ ಎಂಬುವುದಕ್ಕೆ ಬೇರೆ ಶಕುನ ನೋಡಬೇಕಾಗಿಲ್ಲ. ಒಂದಾದ ಮೇಲೆ ಆಹುತಿಗಳು ಅರ್ಪಿಸಲ್ಪಟ್ಟು ಅಶ್ವಮೇಧವೂ ನಡೆಯಿತು. ಅಂದರೆ ತುರಗದ ಆಹುತಿಯಾಯಿತು. ಹವ್ಯವಾಹನನು ಜ್ವಾಲಾಮಾಲಾ ರಂಜಿತನಾಗಿ ಪೂರ್ಣತೇಜಸ್ಸಿನಿಂದ ಪ್ರಜ್ವಲಿಸಿದನು. ಧರ್ಮರಾಜನು ಕೈಗೊಂಡ ಯಜ್ಞವೆಂದು ದೇವತೆಗಳೆಲ್ಲರೂ ಸೋಮವನ್ನುಂಡು ಹವಿರ್ಭಾಗಗಳನ್ನು ಪರಮ ಸಂತೋಷದಿಂದ ಪರಿಗ್ರಹಿಸಿಕೊಂಡರು ಎಂಬಂತೆ ಹೋಮಧೂಮವು ವಿಶೇಷವಾದ ಸುಗಂಧವನ್ನು ಪಸರಿಸುತ್ತಾ ಬಹುದೂರದವರೆಗೆ ವ್ಯಾಪಿಸಿತು. ಎಲ್ಲ ಋಷಿ ಮುನಿಗಳು, ಬ್ರಾಹ್ಮಣರು, ರಾಜರುಗಳು, ಪಾಂಡವರ ಬಂಧುಗಳು, ಪ್ರಜಾಕೋಟಿ ಸಹಿತ ಹಿತೈಷಿಗಳು ಕೈ ಮುಗಿದು ನಿಂತು ಅಧ್ವರದ ಪೂರ್ಣಾಹುತಿಯನ್ನು, ವಿಶೇಷ ಮಂತ್ರಸ್ತವಗಳನ್ನು ನೋಡಿ, ಎಲ್ಲವೂ ಪೂರೈಸಲ್ಪಟ್ಟಾಗ ಭಕ್ತಿ ಪುರಸ್ಸರವಾಗಿ ಎಲ್ಲರೂ ಯಜ್ಞಕ್ಕೆ ನಮಸ್ಕರಿಸಿದರು.

ಧರ್ಮರಾಜನಿಗೆ ಮನದಲ್ಲಿ ಮೂಡಿದ್ದ ಬಂಧುಹತ್ಯಾ ದೋಷದ ಶಂಕೆಯ ನಿವಾರಣಾರ್ಥ ಸಾಗಿದ ಯಾಗಾಂತ್ಯವಾಗುತ್ತಿದೆ. ಈಗ ಅವಭೃತ ಸ್ನಾನಕ್ಕಾಗಿ ದ್ರೌಪದಿ ಸಹಿತನಾಗಿ ಧರ್ಮಜನನ್ನು ಸಕಲ ಮುನಿಜನ, ಬಂಧು ಬಾಂಧವರೆಲ್ಲರು ಒಟ್ಟಾಗಿ ವಿಶೇಷ ವಾದ್ಯಘೋಷಗಳೊಂದಿಗೆ ಗಂಗಾ ನದಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಪಾಪನಾಶಿನಿ ಪಾವನ ಗಂಗಾ ತೀರದಲ್ಲಿ ಮುತ್ತೈದೆಯರು ಮಂಗಳ ಸೇಸೆ ತಳಿದು, ಆರತಿ ಬೆಳಗಿ ಎತ್ತಿದರು. ಮಂತ್ರಘೋಷಗಳಾಗುತ್ತಿದ್ದಂತೆ ತೀರ್ಥೋದಕವನ್ನೆರೆದರು. ಆನಂತರ ಮಹಾತ್ಮರಾದ ಋಷಿ ಮುನಿಗಳಿಂದ ಕ್ರಮವಾಗಿ ಅವಭೃತ ಸ್ನಾನವೂ ಆಯಿತು. ಗಂಗಾತೀರದಿಂದ ಧರ್ಮರಾಜನನ್ನು ಸಪತ್ನೀಕನಾಗಿ ಯಾಗಶಾಲೆಗೆ ಕರೆತಂದು ದಿವ್ಯ ಪೀಠದಲ್ಲಿ ಕುಳ್ಳಿರಿಸಿ ಮಂತ್ರಪೂತವಾಗಿ ಪುಣ್ಯಾಹ ಕರ್ಮಗಳನ್ನು ಪೂರೈಸಿದರು. ನಂತರದ ವಿಧಿ ಪೂರೈಕೆಗಾಗಿ ಧರ್ಮರಾಯ ಮತ್ತು ದ್ರೌಪದಿಯರಿಗೆ ನೂತನ ವಸ್ತ್ರಾಭರಣ ಧಾರಣೆ ಮಾಡಿಸಲು ಅವಕಾಶ ನೀಡಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page